ಬೆಂಗಳೂರು: ಕಾಲಘಟ್ಟ ಯಾವುದೇ ಇದ್ದರೂ ನಿರ್ದೇಶಕನ ಆಶಯದಂತೆಯೇ ಸಿನಿಮಾ ಮೂಡಿಬರುತ್ತದೆ. ಇಡೀ ಸಿನಿಮಾ ನಿರ್ದೇಶಕನ ಕಲ್ಪನೆಯಾಗಿರುತ್ತದೆ. ಸಿನಿಮಾದ ಸೋಲು-ಗೆಲುವು ಎರಡರ ಹೊಣೆಯನ್ನೂ ನಿರ್ದೇಶಕನೇ ಹೋರಬೇಕು ಎಂದು ಹಿರಿಯ ಸಂಕಲನಕಾರ ಸುರೇಶ್ ಅರಸ್ ಹೇಳಿದರು.
ಕುಮಾರಕೃಪ ರಸ್ತೆಯ ಗಾಂಧಿ ಭವನದಲ್ಲಿ ಶುಕ್ರವಾರ ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ 67ನೇ ಬೆಳ್ಳಿಹೆಜ್ಜೆ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, “ಸಿನಿಮಾಗೆ ಕಥೆ ಮುಖ್ಯ. ಸಿನಿಮಾ ರೂಪುಗೊಳ್ಳುವುದು ರೈಟಿಂಗ್ ಟೇಬಲ್ ಹಾಗೂ ಎಡಿಟಿಂಗ್ ಟೇಬಲ್‌ನಲ್ಲಿ.
ಇವೆರಡು ಉತ್ತಮವಾಗಿದ್ದರೆ ಒಳ್ಳೆಯ ಸಿನಿಮಾ ಹೊರಬರುತ್ತದೆ. ನಿರ್ದೇಶಕ ಹಾಗೂ ಸಂಕಲನಕಾರ ಗಂಡ-ಹೆಂಡತಿ ಇದ್ದಂತೆ. ಅವರಿಬ್ಬರಲ್ಲಿ ಹೊಂದಾಣಿಕೆ ಇದ್ದರೆ ಸಿನಿಮಾ ಚೆನ್ನಾಗಿ ಮೂಡಿಬರುತ್ತದೆ. ಸಿನಿಮಾವನ್ನು ವರ್ಗೀಕರಣ ಮಾಡೋದು ತಪ್ಪು. ಯಾವುದೇ ಜಾನರ್‌ನ ಸಿನಿಮಾವಾದರೂ ಅಲ್ಲೊಂದು ಗಟ್ಟಿಕಥೆ ಇರಬೇಕು’ ಎಂದರು.
ಕಾರಣ ನಮ್ಮಣ್ಣ: “ಅನೇಕರು ಒಳ್ಳೆಯ ಸಂಕಲನಾಕರ, ಒಳ್ಳೆಯ ನಿರ್ದೇಶಕ ಆಗುತ್ತಾನೆಂದು ಹೇಳುತ್ತಾರೆ. ನನ್ನ ಪ್ರಕಾರ, ಒಳ್ಳೆಯ ಸಂಕಲನಕಾರ ಒಳ್ಳೆಯ ನಿರ್ದೇಶಕನಾಗಲು ಸಾಧ್ಯವಿಲ್ಲ. ನನಗೆ ನಿರ್ದೇಶನ ಮಾಡೋದು ಇಷ್ಟವಿಲ್ಲ. ನಾನು ಸಂಕಲನಕಾರನಾಗಿಯೇ ಇರುತ್ತೇನೆ ಎಂದ ಅವರು, ಸಹೋದರ ಸುಂದರ್ ಕೃಷ್ಣ ಅರಸ್ ಅವರಿಂದ ಸಾಕಷ್ಟು ಕಲಿತಿದ್ದೇನೆ. ಬದಲಾಗಿದ್ದೇನೆ.
ಭಾರತೀಯ ಚಿತ್ರರಂಗದಲ್ಲಿ ಸಂಕಲನಕಾರ ಎಂದು ಗುರುತಿಸಿಕೊಳ್ಳಲು ಕಾರಣ ನಮ್ಮಣ್ಣ’ ಎಂದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಮಾತನಾಡಿ, “ಸಂಕಲನಕಾರನಿಗೆ ತಾಳ್ಮೆ ಮುಖ್ಯ. ಆ ತಾಳ್ಮೆ ಸುರೇಶ್ ಅರಸ್ ಅವರಲ್ಲಿದೆ. ಹಾಗಾಗಿ, ಅವರು ಈ ಮಟ್ಟಕ್ಕೆ ಬೆಳೆದಿದ್ದಾರೆ’ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ವಾರ್ತಾ ಇಲಾಖೆಯ ನಿರ್ದೇಶಕ ಪಿ.ಎಸ್.ಹರ್ಷ, ನಿರ್ದೇಶಕರಾದ ಪಿ.ಶೇಷಾದ್ರಿ, “ಸಿದ್ಲಿಂಗು’ ಶ್ರೀಧರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿರುವ ಸುರೇಶ್ ಅರಸ್, ಕನ್ನಡದಲ್ಲಿ “ನಮ್ಮೂರ ಬಸವಿ’ ಮೂಲಕ ಸಂಕಲನಕಾರರಾಗಿ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಪ್ರಶಸ್ತಿಗಳಿಗೂ ಸುರೇಶ್ ಅರಸ್ ಭಾಜನರಾಗಿದ್ದಾರೆ.