Advertisement
ನಾನು ಜನಿಸಿದ್ದು ಬೆಂಗಳೂರಾದರೂ ಹೈಸ್ಕೂಲ್‌ವರೆಗೆ ಓದಿದ್ದು ತುಮಕೂರಿನಲ್ಲಿ. ಕಾರಣ ನಮ್ಮದು ಬಡ ಕುಟುಂಬ ಆಗಿದ್ದರಿಂದ 6 ಜನ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವುದು ಕಷ್ಟವೇ ಆಗಿತ್ತು. ಈ ಕಾರಣ ನನ್ನ ತಂದೆ ತಾಯಿಗಳು ನನ್ನಣ್ಣ ಮತ್ತು ನನ್ನನ್ನು ಅಜ್ಜಿಯವರ ಸುಪರ್ದಿಗೆ ಕೊಟ್ಟಿದ್ದರು! ನಾನು ಹೈಸ್ಕೂಲ್ ಮುಗಿಸಿ ಬೆಂಗಳೂರಿನ ಕಡಗೆ ಬಂದೆ. ನಮ್ಮಣ್ಣ ನಮ್ಮಜ್ಜಿಯ ಜೊತೆಯಲ್ಲೇ ಉಳಿದ.
Related Articles
Advertisement
ಸಿನಿಮಾಕ್ಕೆ ಜಿಗಿದ ಮೇಲೆ ಕೆಲವೊಮ್ಮೆ ಚೆನ್ನೈನಲ್ಲಿ ತಿಂಗಳುಗಟ್ಟಲೆ ಇರಬೇಕಾದ ಪರಿಸ್ಥಿತಿ ಬರುತ್ತಿತ್ತು. ಆಗೆಲ್ಲ ಅನಿಸುತ್ತಿದ್ದು ಒಂದೇ, ಯಾವಾಗ ಬೆಂಗ್ಳೂರ್‌ಗೆ ಹೋಗಿ, ನನ್ನ ಮನೆಯಲ್ಲಿ ತಿಳಿಸಾರು, ಅನ್ನ ಉಣ್ಣುತ್ತೇನೋ ಅಂತ. ಒಮ್ಮೆ ಚೆನ್ನೈನಲ್ಲಿ ಹದಿನೈದು ದಿನ ಇರಬೇಕಾಯ್ತು. ತಡರಾತ್ರಿಯಲ್ಲಿ ಅಲ್ಲಿಂದ ಕೆಲಸ ಮುಗಿಸಿ, ಬೆಂಗಳೂರಿಗೆ ಹೊರಟೆ. ಇಲ್ಲಿಗೆ ಬಂದಾಗ ಮಧ್ಯರಾತ್ರಿ ಮೂರೂವರೆ! ನನ್ನ ಧರ್ಮಪತ್ನಿಗೆ ಅನ್ನ ಸಾರು ಮಾಡಿಕೊಡಲು ಕೇಳಿಕೊಂಡೆ. “ಇಷ್ಟೊತ್ತಿನಲ್ಲಿ ಸಾರು ಮಾಡುವುದು ಕಷ್ಟ… ನೀವು ಸ್ನಾನ ಮಾಡಿ ಬನ್ನಿ, ನಾನು ಅನ್ನ ಕೈಗೊಜ್ಜು ಮಾಡ್ತೀನಿ” ಅಂದಳು. (ಕೈಗೊಜ್ಜು ಅಂದ್ರೆ ಒಂದಷ್ಟು ಹುಣಸೆ ಹುಳಿ ಕಿವುಚಿ ಅದಕ್ಕೊಂದಿಷ್ಟು ಈರುಳ್ಳಿ ಸಣ್ಣಗೆ ಹೆಚ್ಚಿ ಹಾಕಿ, ಒಂದೆರಡು ಹಸಿ ಮೆಣಸಿನ ಕಾಯಿಯನ್ನು ಬೆಳ್ಳುಳ್ಳಿಯೊಂದಿಗೆ ಜಜ್ಜಿ ಹಾಕಿ ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಸೇರಿಸಿ… ತುಪ್ಪದ ಒಗ್ಗರಣೆ ಕೊಟ್ಟರಾಯ್ತು. ದಿಢೀರ್ ಕೈಗೊಜ್ಜು ರೆಡಿ) ಅದನ್ನು ಚೆನ್ನಾಗಿ ತಿಂದು ಮಲಗಿದ ನಾನು, ಮತ್ತೆ ಎದ್ದಿದ್ದು ಸಂಜೆ ವೇಳೆಗೆ! ಅನ್ನಪೂರ್ಣೆ ಅಮೃತ ಹಸ್ತದಿಂದ ಅಕ್ಕರೆಯಿಂದ ಮಾಡಿ ಉಣಬಡಿಸಿದ್ದಳು.
ಹೀಗೆ ನಮಗೆ ನಮ್ಮನೆ… ನಮ್ಮೂರು ಬೆಂಗಳೂರು ಅಂದ್ರೆ ಅಷ್ಟೊಂದು ಮೋಹ. ಎÇÉೆಲ್ಲೂ ಕಸ ಬಿದ್ದಿರಲಿ, ಊರ ತುಂಬಾ ವಾಹನಗಳು ಹೊಗೆ ಏಳಿಸುತ್ತಿರಲಿ, ಮೆಟ್ರೋ ಮೇಲೆ ಮೆಟ್ರೋ ಬರಲಿ, ವಾಹನ ದಟ್ಟಣೆ ಹೆಚ್ಚಾದರೂ, ಮನೆ ಬಾಡಿಗೆ, ಮನೆ ಕಟ್ಟುವುದು ಇನ್ನಷ್ಟು ಕಷ್ಟವಾದರೂ, ಮಳೆ ಇಲ್ಲದಿದ್ದರೂ, ಏನೇ ಆದರೂ ಈ ಬೆಂಗಳೂರು ಅಂದದೂರು. ಎಂದೆಂದಿಗೂ ನಮ್ಮೂರು.
ನಾಗೇಂದ್ರ ಶಾ, ರಂಗಕರ್ಮಿ, ಚಿತ್ರನಟ