ಹೊಸಪೇಟೆ: ಹುಡುಗಿಯರ ದೈಹಿಕ ಬದಲಾವಣೆಗಳ ಜತೆಗೆ ಮಾನಸಿಕ ಸ್ಥಿತಿಗತಿಯ ಕುರಿತು ಸೂಕ್ತ ತಿಳಿವಳಿಕೆ ಮೂಡಿಸಬೇಕಿದೆ ಎಂದು ಬೆಳಗಾವಿಯ ಭರತೀಶ ಏಜುಕೇಶನ್ ಟ್ರಸ್ಟ್‌ನ ಸಂಪನ್ಮೂಲ ವ್ಯಕ್ತಿ ಡಾ| ಅನುರಾಧಾ ಹೇಳಿದರು.
ನಗರದ ಟಿಎಂಎಇಎಸ್ ಡಿಎವಿ ಪಬ್ಲಿಕ್ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿನಿಯರು ಹಾಗೂ ಪಾಲಕರಿಗಾಗಿ ಭಾರತೀಯ ಜೈನ ಸಂಘಟನೆಯ ತಾಲೂಕು ಘಟಕದ ವತಿಯಿಂದ ಚತುರ ಹುಡುಗಿ (ಸ್ಮಾರ್ಟ್ ಗರ್ಲ್) ವಿಷಯ ಕುರಿತು ಗುರುವಾರ
ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಬಾಲಕಿಯರಲ್ಲಿ ಕಾಣಿಸಿಕೊಳ್ಳುವ ಶಾರೀರಕ ಬದಲಾವಣೆಗಳು ಆತ್ಮವಿಶ್ವಾಸದ ಕೊರತೆ, ಖನ್ನತೆ ಉಂಟುಮಾಡುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಹುಡುಗಿಯರಿಗೆ ಆತ್ಮವಿಶ್ವಾಸ ತುಂಬುವ ಕಾರ್ಯವನ್ನು ಪಾಲಕರು ಮಾಡಬೇಕು. ಹುಡುಗಿಯರಲ್ಲಿ ದೈಹಿಕ ಬದಲಾವಣೆಗಳ ಜತೆಗೆ ಮಾನಸಿಕ ಸ್ಥಿತಿಯಲ್ಲೂ ವ್ಯತ್ಯಾಸವಾಗುತ್ತದೆ. ಈ ಬಗ್ಗೆ ಸೂಕ್ತ ತಿಳಿವಳಿಕೆಯನ್ನು ಮೂಡಿಸಬೇಕಿರುವುದು ಅಗತ್ಯವಾಗಿದೆ ಎಂದು ಕಿವಿಮಾತು ಹೇಳಿದರು.
ಡಿಎವಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಪಿ.ಸುಧಾಕರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಏರುಪೇರುಗಳು ಕಾಣಿಸಿಕೊಳ್ಳುವುದು ಸಹಜ. ಅವುಗಳನ್ನು ಸರಿಯಾಗಿ ನಿರ್ವಹಿಸುವಲ್ಲಿ ವ್ಯಕ್ತಿತ್ವ ವಿಕಾಸ ಕಾರ್ಯಾಗಾರಗಳು ಸಹಾಯಕವಾಗಿವೆ ಎಂದರು.
ವಿದ್ಯಾರ್ಥಿನಿಯರಿಗೆ ಸ್ವಯಂ ಅರಿವು, ಸಂವಹನ ಕಲೆ, ವ್ಯಕ್ತಿತ್ವ ವಿಕಾಸ, ಆತ್ಮವಿಶ್ವಾಸ, ಸ್ನೇಹಶೀಲ ಗುಣ, ಮಕ್ಕಳ ದೈಹಿಕ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ವಿಷಯಗಳ ಕುರಿತು ಚಟುವಟಿಕೆಗಳ ಮೂಲಕ ಮನವರಿಕೆ ಮಾಡಿಕೊಡಲಾಯಿತು.
ಡಿಎವಿ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ನಗರದ ಭಾರತೀಯ ಜೈನ ಸಂಘದ ಅಧ್ಯಕ್ಷ ಮಹೇಂದ್ರ ಜೈನ್, ಕಾರ್ಯದರ್ಶಿ ದಿನೇಶ್ ಪಾಲರೇಚ್ ಇದ್ದರು. ಡಿಎವಿ ಮತ್ತು ರೋಜಬಡ್ ಶಾಲೆಯ ಸುಮಾರು 80 ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.