Advertisement

ಹೊಸಪೇಟೆ: ಅವಧಿಗೂ‌ ಮುನ್ನ ಭರ್ತಿಯಾದ ತುಂಗಭದ್ರಾ ಜಲಾಶಯ; ನದಿಗೆ ಹರಿದ ಹೆಚ್ಚುವರಿ ನೀರು

04:55 PM Jul 12, 2022 | Team Udayavani |

ಹೊಸಪೇಟೆ: ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ಲಕ್ಷಾಂತರ ‌ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಅವಧಿಗೂ ಮುನ್ನವೇ ಭರ್ತಿಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ‌‌ ಮೂಡಿದೆ.

Advertisement

ಹೌದು!ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನಲ್ಲಿರುವ‌ ತುಂಗಭದ್ರಾ ಜಲಾಶಯ ಮಂಗಳವಾರ ಸಂಪೂರ್ಣ ಭರ್ತಿಯಾಗಿದೆ.

ಜಲಾಶಯದ 33 ಕ್ರಸ್ಟ್ ಗಳಲ್ಲಿ 10 ಕ್ರಸ್ಟ್ ಗಳ ಮೂಲಕ 14 ಸಾವಿರ ಕ್ಯೂಸೆಕ್ಸ್ ಗೂ ಆಧಿಕ ನೀರನ್ನು  ನದಿಗೆ ಹರಿಸಲಾಯಿತು.

ಅಣೆಕಟ್ಟಿಗೆ ಪೂಜೆ‌ ಸಲ್ಲಿಸಿದ ತುಂಗಭದ್ರಾ ಮಂಡಳಿ ಅಧಿಕಾರಿಗಳು, ಕ್ರಸ್ಟ್ ಗೇಟ್ ಗಳನ್ನು ತೆರೆದು‌‌ ನದಿಗೆ ನೀರು ಹರಿಸಿದರು.

105  ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 95 ಟಿಎಂಸಿ ಅಡಿ ನೀರಿನ ಸಂಗ್ರಹವಾಗಿತ್ತು. ಜಲಾಶಯದ 1630 ಅಡಿವರೆಗೂ ನೀರು ಸಂಗ್ರಹವಾಗಿದೆ. 82 ಸಾವಿರ ಕ್ಯುಸೆಕ್ ಗೂ ಅಧಿಕ ಒಳಹರಿವು ಇದ್ದು, ನಿತ್ಯ ಸರಾಸರಿ ಎಂಟು ಟಿಎಂಸಿ ಅಡಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ  ಮಂಡಳಿ ಇಂದು ನೀರು ಹರಿಸಲು ಮುಂದಾಗಿದೆ.

Advertisement

5 ಸಾವಿರ ಕ್ಯೂಸೆಕ್ಸ್ ನಿಂದ ಒಂದು ಲಕ್ಷ‌ ಕ್ಯೂಸೆಕ್ ವರೆಗೆ ನೀರು ಹರಿಸಲು ನಿರ್ಧರಿಸಲಾಗಿದ್ದು, ನದಿ ತೀರದ ಜನ ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ.

ತುಂಗಭದ್ರಾ ಜಲಾಶಯದಿಂದ ನೀರು ಬಿಟ್ಟರೆ ಪ್ರವಾಹ ಭೀತಿ ಉಂಟಾಗಬಹುದು ಎಂದು ಈಗಾಗಲೇ ವಿಜಯನಗರ, ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಗಳ ಜಿಲ್ಲಾಡಳಿತಕ್ಕೆ ತುಂಗಭದ್ರಾ ಮಂಡಳಿಯಿಂದ ಸಂದೇಶ ರವಾನಿಸಲಾಗಿದೆ.

ಇದನ್ನೂ ಓದಿ: ಪಿಎಸ್ಐ ಅಕ್ರಮ ಹಗರಣ: ಶಿರಸಿಯಲ್ಲಿ ಮತ್ತೋರ್ವನನ್ನು ವಶಕ್ಕೆ ಪಡೆದ ಸಿಐಡಿ

ಬಳ್ಳಾರಿ ಜಿಲ್ಲೆಯ ಕಂಪ್ಲಿ ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇದ್ದು, ಜೊತೆಗೆ ಹಂಪಿಯ ಕೆಲ ಸ್ಮಾರಕಗಳು ಮುಳುಗಡೆಯಾಗಲಿವೆ. ಇದಕ್ಕಾಗಿ ಈಗಾಗಲೇ ಅವಳಿ ಜಿಲ್ಲೆಗಳ ಜಿಲ್ಲಾಡಳಿತಗಳು ಮುನ್ನೆಚ್ಚರಿಕಾ ಕ್ರಮ ವಹಿಸಿವೆ.

ತುಂಗಭದ್ರೆಯ ಉಗಮ ಸ್ಥಾನ: ತುಂಗಾ ಹಾಗೂ ಭದ್ರಾ ನದಿಗಳು ಚಿಕ್ಕ ಮಂಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಪಶ್ಚಿಮ ಘಟ್ಟದ ವರಹ ಪರ್ವತದಡಿಯಲ್ಲಿ ಉಗಮ ಹೊಂದಿವೆ.ಅಲ್ಲಿಂದ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹಾದು ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಹರಿಯುತ್ತದೆ.

ಭದ್ರಾ ನದಿಯು ಚಿಕ್ಕ ಮಂಗಳೂರು ಜಿಲ್ಲೆಯ ಮೂಡಿಗಡೆ, ನರಸಿಂಹರಾಜ ಪುರ ಮತ್ತು ತರೀಕೆರೆ ತಾಲ್ಲೂಕಗಳಲ್ಲಿ ಹರಿಯುತ್ತದೆ. ತುಂಗ 147 ಕಿ.ಮೀ. ಹಾಗೂ ಭದ್ರಾ 178 ಕಿ.ಮೀ ಹರಿದು ಮುಂದೆ ಇವೆರಡೂ ನದಿಗಳು ಶಿವಮೊಗ್ಗ ಜಿಲ್ಲೆಯ ಕೂಡಲಿ ಗ್ರಾಮದ ಹತ್ತಿರ ಸಂಗಮವಾಗಿ ನದಿಯಾಗಿ ಹರಿಯುತ್ತದೆ. ತುಂಗಭದ್ರಾ ನದಿಯು ದಾವಣಗೆರೆ, ಹಾವೇರಿ, ಗದಗ, ಕೊಪ್ಪಳ, ವಿಜಯನಗರ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳ ಸರಹದ್ದುಗಳ ನಡುವೆ 531 ಕಿ.ಮೀ. ದೂರ ಹರಿದು ಆಂಧ್ರದ ಕರ್ನೂಲ್ ಹತ್ತಿರ ಸಂಗಮೇಶ್ವರದಲ್ಲಿ ಕೃಷ್ಣ ನದಿಯನ್ನು ಸೇರಲಿದೆ. ಕೃಷ್ಣ ನದಿ ಮಹಾರಾಷ್ಟ್ರದಲ್ಲಿ ಹುಟ್ಟಿ ಕರ್ನಾಟಕ ಹಾಗೂ ಆಂಧ್ರದಲ್ಲಿ ಹರಿದು ಕೊನೆಗೆ ಬಂಗಾಲ ಕೊಲ್ಲಿಎಯನ್ನು ಸೇರುತ್ತದೆ.

ಜಲಾಶಯದ ವಿವರ: ತುಂಗಭದ್ರಾ ಯೋಜನೆಯ ಎಡದಂಡೆಗೆ ಎರಡು ಕಾಲುವೆಗಳು ಹಾಗೂ ಬಲದಂಡೆಗೆ ನಾಲ್ಕು ಕಾಲುವೆಗಳು ಕರ್ನಾಟಕದ 3.66 ಹೆಕ್ಟೇರು ಮತ್ತು ಆಂಧ್ರ ಪ್ರದೇಶದ 1.70 ಲಕ್ಷ ಹೆಕ್ಟೇರ್, ಒಟ್ಟಾರೆಯಾಗಿ 5.36 ಲಕ್ಷ ಹೆರ್ಕ್ಟರ್ ಭೂಮಿಗೆ ನೀರುಣಿಸುತ್ತಿದೆ. ಕಾಲುವೆಗಳಲ್ಲಿಯ ನೀರಿನ ಲಭ್ಯತೆಗನುಣವಾಗಿ ಐದು ವಿದ್ಯಾದಾಗಾರಗಳಿಂದ ಪ್ರತಿದಿನ ಸರಾಸರಿ ಒಂದು ಲಕ್ಷ ಕಿಲೋವ್ಯಾಟ್ ವಿದ್ಯುತ್ತನ್ನು ಉತ್ಪಾಧಿಸುವ ಗುರಿಯನ್ನು ಈ ಜಲಾಶಯ ಹೊಂದಿದೆ.  ಜಲವರ್ಷದಲ್ಲಿ ಜಲಾಶಯದ ನೀರಿನ ಲಭ್ಯತೆಯಲ್ಲಿ ಶೇ.2.5 ರಷ್ಟು ನೀರನ್ನು ಕಾರ್ಖಾನೆಗಳಿಗೆ ಬಳಸಲು ಅವಕಾಶ ಕಲ್ಪಿಸಲಾಗಿದೆ. ಹಿನ್ನೀರಿನಲ್ಲಿ ಏತ ನೀರಾವರಿ ಯೋಜನೆಗಳಿಗೆ 2 ಟಿಎಂಸಿ ಬಳಸಲಾಗಿತ್ತು. ಜಲಚರಗಳಿಗಾಗಿ ಜಲಾಶಯದಲ್ಲಿ 2 ಟಿಎಂಸಿ ನೀರನ್ನು ಮೀಸಲಿಡಲಾಗಿದೆ.

ಒಟ್ಟಾರೆ 1954-55 ಜಲವರ್ಷದಿಂದ 1983-24ರ ಜಲವರ್ಷದವರೆಗೆ 30 ವರ್ಷಗಳಲ್ಲಿ ಜಲಾಶಯಕ್ಕೆ ವಾರ್ಷಿಕ ಸರಾಸರಿ 410.184 ಟಿಎಂಸಿ ಘನ ಅಡಿಗಳು ಹರಿದು ಬಂದಿದೆ.

2004 – 05 ರಿಂದ ಜಲವರ್ಷದಿಂದ 1993-94 ವರೆಗೆ ಹತ್ತು ವರ್ಷಗಳಲ್ಲಿ ಸರಾಸರಿ 292.407 ಘನ ಟಿಎಂಸಿ ಘನ ಅಡಿ, 1994-95 ರಿಂದ 2003 -04 ವರೆಗೆ 265.063 ಟಿಎಂಸಿ ಘನ ಅಡಿಗಳು. 2004 -05 ರಿಂದ 2003-14 ರವರೆಗೆ ಹತ್ತು ವರ್ಷಳಲ್ಲಿ 308.476 ಟಿಎಂಸಿ ಘನ ಅಡಿಗಳು. ಒಟ್ಟಾರೆ 1984-84 ರಿಂದ 2013-14 ರ ಜಲವರ್ಷದವರೆಗೆ ಒಟ್ಟು 30 ವರ್ಷಳಲ್ಲಿ ಜಲಾಶಯಕ್ಕೆ 288.757 ಟಿಎಂಸಿ ಘನ ಅಡಿಗಳು. ತುಂಗಭದ್ರಾ ಜಲಾಶಯಕ್ಕೆ ಅಣೆಕಟ್ಟು ನಿರ್ಮಾಣವಾದಗಿನಿಂದ 1954-55 ರಿಂದ 2013-14 ವರೆಗೆ ಸರಾಸರಿ 349.417 ಟಿಎಂಸಿ ಘನ ಅಡಿಗಳು. ಜಲಾಶಯ ನಿರ್ಮಾಣವಾದಾಗಿನಿಂದ ಇಲ್ಲಿಯವರಗೆ ಜಲಾಶಯಕ್ಕೆ ಹರಿದು ಬಂದ ಬಗ್ಗೆ ವಿಶ್ಲೇಷಿಸಿದಾಗ ಶೇ.40 ಕ್ಕೂ ಆಧಿಕ ಪ್ರಮಾಣದಲ್ಲಿ ಜಲಾಶಯದ ಒಳ ಹರಿವು ಕಡಿಮೆಯಾಗಿರುವುದು ಕಂಡು ಬರುತ್ತಿದೆ.

ಪಿ.ಸತ್ಯನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next