ಗುಂಡ್ಲುಪೇಟೆ: ಬಿಜೆಪಿ ಸಂಭಾವ್ಯ ಅಭ್ಯರ್ಥಿ ಸಿ.ಎಸ್.ನಿರಂಜನಕುಮಾರ್ ತಾಲೂಕಿನ ರಾಮಯ್ಯನಪುರ ಗ್ರಾಮದಲ್ಲಿ ಮನೆ ಮನೆಗಳಿಗೆ ತೆರಳಿ ಮತಯಾಚಿಸಿದರು. ಕ್ಷೇತ್ರದಲ್ಲಿ ಮೂಲ ಸೌಕರ್ಯದ ಕೊರತೆ ಇದೆ. ಕ್ಷೇತ್ರದ ಅಭಿವೃದ್ಧಿಗಾಗಿ ಕಳೆದ ಮೂರು ಬಾರಿ ಸೋತಿರುವ ತನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಐದು ಹೋಬಳಿಗಳನ್ನು ಒಳಗೊಂಡ ಈ ಕ್ಷೇತ್ರದಲ್ಲಿ ಇನ್ನೂ ಗ್ರಾಮಾಂತರ ಪ್ರದೇಶಗಳಿಲ್ಲಿ ಸೂಕ್ತ ರಸ್ತೆ, ಚರಂಡಿಗಳಿಲ್ಲ. ಆಸ್ಪತ್ರೆ ಕಟ್ಟಡ ನಿರ್ಮಿಸಲಾಗಿದೆ. ಆದರೆ, ವೈದ್ಯರನ್ನು ಭರ್ತಿ ಮಾಡದ ಕಾರಣ ಸಮಯಕ್ಕೆ ಸರಿಯಾಗಿ ಜನರಿಗೆ ಚಿಕಿತ್ಸೆ ಸಿಗುತ್ತಿಲ್ಲ.
ಉದ್ದೇಶಿತ ಕೆರೆಗಳಿಗೆ ಇನ್ನೂ ನದಿ ಮೂಲದಿಂದ ನೀರು ತುಂಬಿಸಿಲ್ಲ. ಕೇವಲ ನೆಪಕ್ಕೆ ಒಂದೆರಡು ಕೆರೆಗಳಿಗೆ ನೀರು ತುಂಬಿಸಿ ಸಾಧನೆ ಮಾಡಿದ್ದೇನೆ ಎಂದು ಹೇಳುವ ಸಚಿವೆ ಮೋಹನಕುಮಾರಿ ಉದ್ದೇಶಿಸಿ ಎಲ್ಲಾ ಕೆರೆಗಳಿಗೆ ನೀರು ಹರಿಸಲು ತುರ್ತು ಕ್ರಮ ಕೈಗೊಳ್ಳಬೇಕಾಗಿದೆ ಎಂದು ನಿರಂಜನ್ ಸಲಹೆ ನೀಡಿದರು.
ಬೇಸಿಗೆ ಬೇಗೆಯಲ್ಲಿರುವ ಜನರಿಗೆ ಅವಶ್ಯಕವಾಗಿ ಕುಡಿಯುವ ನೀರು ಬೇಕಾಗಿದೆ. ಇದಕ್ಕಾಗಿ ಸರ್ಕಾರ ಅನೇಕ ಯೋಜನೆ ತಂದಿದೆ ಎನ್ನುವ ಅಧಿಕಾರಿಗಳು, ಸಮರ್ಪಕವಾಗಿ ನೀರಿನ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನರ ಸಮಸ್ಯೆ ಬಗೆಹರಿಸಲು ಮುಂದಾಗಲಿ ಎಂದು ಸಲಹೆ ನೀಡಿದರು.
ಬಿಜೆಪಿ ಬೆಂಬಲಿಸಿ: ದೇಶದ ಕೀರ್ತಿ ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಪ್ರಧಾನಿ ಮೋದಿ ಕನಸಿನ ಭಾರತವನ್ನು ಕಟ್ಟಲು ಹಾಗೂ ರಾಜ್ಯದಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪಕ್ಷ ಬೆಂಬಲಿಸಿ ಎಂದರು. ಯುವ ಮೋರ್ಚಾಧ್ಯಕ್ಷ ಪ್ರಣಯ್, ಮುಖಂಡರಾದ ಎಂ.ಪಿ.ಸುನಿಲ್, ಶಿಂಡನಪುರ ಮಂಜುನಾಥ್, ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.