Advertisement

Tourism: ನಿಷೇಧದ ವೇಳೆ ಪ್ರವಾಸಿ ತಾಣಕ್ಕೆ ಬಂದರೆ ಪ್ರಕರಣ ದಾಖಲು?

09:42 AM Aug 08, 2023 | Team Udayavani |

ಉಡುಪಿ: ಮಲ್ಪೆ ಕಡಲತೀರ ಸಹಿತ ಪ್ರವಾಸಿ ತಾಣ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ನಿರ್ಬಂಧ ಹೇರಲಾಗಿದ್ದರೂ ಈ ಭಾಗಕ್ಕೆ ಬರುವ ಅನ್ಯಜಿಲ್ಲೆಯ ಪ್ರವಾಸಿಗರ ಮೇಲೆ ಪ್ರಕರಣ ದಾಖಲಿಸುವ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸುತ್ತಿದೆ.

Advertisement

ಕೊಲ್ಲೂರಿನಲ್ಲಿ ರೀಲ್ಸ್‌ ಮಾಡಲು ಹೋಗಿ ಯುವಕನೊಬ್ಬ ನೀರುಪಾಲಾದ ಘಟನೆ ಮಾಸುವ ಮುನ್ನವೇ ಮಲ್ಪೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಸಮುದ್ರದ ಅಲೆಗೆ ಸಿಲುಕಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಮಳೆಗಾಲ ಆದ ಕಾರಣ ಸೆಪ್ಟಂಬರ್‌ ವರೆಗೆ ಜಿಲ್ಲಾಡಳಿತ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಿದ್ದರೂ ಯಾರ ಗಮನಕ್ಕೂ ಬಾರದೆ ಒಳನುಸುಳಿ ಅವಾಂತರ ಮಾಡಿಕೊಳ್ಳುವಂತಹ ಘಟನೆಗಳು ನಡೆಯುತ್ತಿವೆ. ಪ್ರವಾಸಿ ತಾಣವಾದ ಮಲ್ಪೆಯಲ್ಲಿ ಐವರು ಲೈಫ್‌ಗಾರ್ಡ್‌ ಗಳಿದ್ದು, ಅನ್ಯ ಜಿಲ್ಲೆಯಿಂದ ಆಗಮಿಸುವವರಿಗೆ ಎಷ್ಟೇ ಸೂಚನೆ, ಎಚ್ಚರಿಕೆ ನೀಡಿದರೂ ನಿರ್ಲಕ್ಷಿಸಿ ಅಪಾಯ ತಂದುಕೊಳ್ಳುತ್ತಾರೆ. ಎಚ್ಚರಿಕೆ ಮಾತಿಗೆ ಸ್ಪಂದಿಸದಿರುವುದೇ ಅನಾಹುತಗಳಿಗೆ ಕಾರಣ ಎನ್ನಲಾಗುತ್ತಿದೆ. ಈ ಬೀಚ್‌ ನಿರ್ವಹಣೆ ಸಮಿತಿಯಿಂದ ಜಿಲ್ಲಾಡಳಿತಕ್ಕೆ ವಾರ್ಷಿಕ ಕೋಟ್ಯಂತರ ರೂ. ಆದಾಯವಿದ್ದರೂ ಮತ್ತಷ್ಟು ಭದ್ರತೆಗೆ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ.

ಅತ್ಯಾಧುನಿಕ ಸೌಲಭ್ಯ ಕೊರತೆ

ಪ್ರಸ್ತುತ ಮಲ್ಪೆ ಬೀಚ್‌ನಲ್ಲಿ ಐವರು ಜೀವರಕ್ಷಕರಿದ್ದಾರೆ. ಸಮುದ್ರದ ಆಳ, ಅಪಾಯಕಾರಿ ಸ್ಥಳ, ಅಪಾಯಕ್ಕೆ ಸಿಲುಕಿದವರನ್ನು ರಕ್ಷಿಸುವ ತಂತ್ರಗಾರಿಕೆ ಅವರಲ್ಲಿದ್ದರೂ ಅತ್ಯಾಧುನಿಕ ರಕ್ಷಣ ಸೌಕರ್ಯಗಳ ಕೊರತೆ ಇದೆ. ಪ್ರಸ್ತುತ ಅವರಲ್ಲಿರುವುದು ರೋಪ್‌, ಜಾಕೆಟ್‌ ಮತ್ತು ರಿಂಗ್‌ ಮಾತ್ರ. ಬೆಳಗ್ಗೆ 9ರಿಂದ ರಾತ್ರಿ 7ರ ವರೆಗೆ ಕಾರ್ಯ ನಿರ್ವಹಿಸುತ್ತಾರೆ. 4 ವರ್ಷಗಳಲ್ಲಿ ಮಲ್ಪೆ ಬೀಚ್‌ನಲ್ಲಿ ಸಮುದ್ರ ಪಾಲಾಗುತ್ತಿದ್ದ 180 ಮಂದಿ, ಸೈಂಟ್‌ಮೇರಿಸ್‌ ದ್ವೀಪದಲ್ಲಿ 65 ಮಂದಿ ಪ್ರವಾಸಿಗರನ್ನು ರಕ್ಷಿಸಿದ್ದಾರೆ.

Advertisement

ಜೆಟ್‌ಸ್ಕಿ ಅಗತ್ಯ

ಸಮುದ್ರದಲ್ಲಿ ಓಡಾಡುವ ಜೆಟ್‌ಸ್ಕಿ ಸ್ಕೂಟರ್‌ಗೆ ಬೇಡಿಕೆ ಇಟ್ಟಿದ್ದರೂ ಇದುವರೆಗೂ ಸಿಕ್ಕಿಲ್ಲ. ರೆಸ್ಕೂ Â ಬೋಟ್‌ ಅಥವಾ ಜೆಟ್‌ಸ್ಕಿ ಇದ್ದಲ್ಲಿ ಸಮುದ್ರದಲ್ಲಿ ಮುಳುಗುತ್ತಿದ್ದವರ ಸಮೀಪಕ್ಕೆ ಕ್ಷಣಮಾತ್ರದಲ್ಲಿ ತೆರಳಿ ಸುಲಭದಲ್ಲಿ ರಕ್ಷಣೆ ಮಾಡಲು ಸಾಧ್ಯವಾ ಗಲಿದೆ. ಜಿಲ್ಲಾಡಳಿತದಿಂದ ಜೆಟ್‌ಸ್ಕೀ ಬೋಟ್‌ ನೀಡ ಲಾಗಿತ್ತಾದರೂ ಕೆಟ್ಟುಹೋಗಿ ಬಹಳ ಸಮಯ ಕಳೆದಿದೆ. ಬೀಚ್‌ನಲ್ಲಿ ಈ ಹಿಂದೆ 7 ಸಿಸಿ ಕೆಮರಾ ಗಳಿದ್ದವು. ಉಪ್ಪುನೀರಿನ ತೇವಾಂಶದಿಂದಾಗಿ ಅವು ಹಾಳಾಗಿದ್ದು ಪ್ರಸ್ತುತ ಗಾಂಧಿ ಕಟ್ಟೆಯ ಬಳಿ ಒಂದು ಮಾತ್ರ ಇದೆ. ಮಳೆಗಾಲದಲ್ಲಿ ಹಾಳಾಗುತ್ತದೆ ಎಂಬ ಕಾರಣಕ್ಕೆ ಕೆಮರಾ ಅಳವಡಿಸಿಲ್ಲ ಎನ್ನುತ್ತಾರೆ ಬೀಚ್‌ ನಿರ್ವಾಹಕರು.

ಬೇಕಿದೆ ಮತ್ತಷ್ಟು ಸಿಬಂದಿ

ಮಳೆಗಾಲ ಹೊರತು ಉಳಿದ ದಿನಗಳಲ್ಲಿ ಬೀಚ್‌ ನಿರ್ವಹಣೆ ಸಮಿತಿಯಿಂದ ಭದ್ರತೆಗೆ 7ಕ್ಕೂ ಅಧಿಕ ಮಂದಿಯನ್ನು ನಿಯೋಜಿಸಲಾಗುತ್ತದೆ. ಪ್ರಸ್ತುತ ರಾತ್ರಿ ಗಸ್ತು ನಡೆಯದ ಕಾರಣ ಕೆಲವರು ಪ್ರವಾಸಿಗರು ಆಗಮಿಸುವುದೂ ಇದೆ. ಸ್ಥಳೀಯರು ಕಂಡರೆ ಅಂಥವರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಹಗಲು ಸಹಿತ ರಾತ್ರಿ ವೇಳೆಯೂ ಮತ್ತಷ್ಟು ಗಸ್ತು ಕಾರ್ಯಾಚರಣೆಯನ್ನು ಈ ಭಾಗದಲ್ಲಿ ಕೈಗೊಳ್ಳುವ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳುವ ಆವಶ್ಯಕತೆಯಿದೆ. ಬೀಚ್‌ನಲ್ಲಿ ಅಳವಡಿಸಿರುವ ಹೈಮಾಸ್ಟ್‌ ದೀಪ ಕೆಟ್ಟುಹೋಗಿ ತಿಂಗಳು ಕಳೆದಿದೆ. ಇದರ ದುರಸ್ತಿಗೆ ಆದ್ಯತೆ ನೀಡಬೇಕು ಎನ್ನುತ್ತಾರೆ ಬೀಚ್‌ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಾಂಡುರಂಗ ಮಲ್ಪೆ.

ಉದಯವಾಣಿ ಆಶಯ

ಅನ್ಯ ಜಿಲ್ಲೆ, ರಾಜ್ಯದವರು ಕರಾವಳಿಗೆ ಆಗಮಿಸುವುದಕ್ಕೂ ಮುನ್ನ ಇಲ್ಲಿನ ಸ್ಥಳಗಳ ಸಾಧಕ-ಬಾಧಕಗಳ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆಯುವುದು ಅತೀ ಅಗತ್ಯ. ಹಾಗೆಯೇ ಜಿಲ್ಲಾಡಳಿತ ಹಾಗೂ ಸ್ಥಳೀಯ ಜನರು ನೀಡುವ ಸೂಚನೆಯನ್ನು ಯಾವುದೇ ಕಾರಣಕ್ಕೂ ಉಲ್ಲಂ ಸದೆ ಶಿಸ್ತು ಕಾಪಾಡಿದರಷ್ಟೇ ಪ್ರಯಾಣವೂ ಸುಖಕರವಾಗಲು ಸಾಧ್ಯ. ಇಲ್ಲದಿದ್ದರೆ ಜತೆಗಾರರನ್ನು ಕಳೆದುಕೊಳ್ಳಬೇಕಾದ ಸನ್ನಿವೇಶವೂ ಎದುರಾಗಬಹುದು. ಈ ಬಗ್ಗೆ ಪ್ರವಾಸಿಗರು ಎಚ್ಚರದಿಂದ ಇರುವುದು ಅಗತ್ಯ ಎನ್ನುವುದು ಉದಯವಾಣಿ ಆಶಯ.

ನಿಷೇಧದ ಅವಧಿಯಲ್ಲಿ ಪ್ರವಾಸಿ ತಾಣಗಳಿಗೆ ತೆರಳದಂತೆ ಈಗಾಗಲೇ ಆದೇಶ ಹೊರಡಿಸಲಾಗಿದೆ. ಇದನ್ನು ಉಲ್ಲಂಘಿಸಿದರೆ ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು. ಈ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಜತೆಗೆ ಪ್ರವಾಸಿ ತಾಣ ವ್ಯಾಪ್ತಿಯಲ್ಲಿ ಪೊಲೀಸ್‌ ಬೀಟ್‌ ಹೆಚ್ಚಿಸುವ ಬಗ್ಗೆಯೂ ಸೂಚನೆ ನೀಡಲಾಗುವುದು. –ಡಾ| ವಿದ್ಯಾ ಕುಮಾರಿ, ಜಿಲ್ಲಾಧಿಕಾರಿ

ಪ್ರವಾಸಿಗರ ಹಿತದೃಷ್ಟಿಯಿಂದ ಈಗಾಗಲೇ ವಿವಿಧೆಡೆ ಎಚ್ಚರಿಕೆ ಫ‌ಲಕ ಹಾಕಲಾಗಿದೆ. ಸಿಬಂದಿಯೂ ಹಗಲಿಡೀ ಗಸ್ತು ನಡೆಸುತ್ತಾರೆ. ಈ ಸಮಯದಲ್ಲಿ ಕಡಲಿನ ಅಲೆಗಳ ತೀವ್ರತೆ ಹೆಚ್ಚಿರುವ ಕಾರಣ ಪ್ರವಾಸಿಗರು ಸೂಚನೆಗಳನ್ನು ಯಾವುದೇ ಕಾರಣಕ್ಕೆ ಉಲ್ಲಂ ಸಬಾರದು. ಮುಂದಿನ ದಿನದಲ್ಲಿ ರಾತ್ರಿ ವೇಳೆಯೂ ಗಸ್ತು ಕಾರ್ಯಾಚರಣೆ ನಡೆಸುವ ಬಗ್ಗೆ ಚಿಂತಿಸಲಾಗುವುದು. – ಸುದೇಶ್‌ ಶೆಟ್ಟಿ, ಮಲ್ಪೆ ಬೀಚ್‌ ನಿರ್ವಾಹಕ

ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next