ಹುಬ್ಬಳ್ಳಿ: ಕನ್ನಡಿಗರನ್ನು ಅವಮಾನಿಸುವ ಸನ್ನಿವೇಶ ಹೊಂದಿರುವ ಬಾಹುಬಲಿ-2 ತೆಲುಗು ಚಲನಚಿತ್ರ ಏ. 28ರಂದು ತೆರೆಕಾಣಲಿದ್ದು, ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಕರವೇ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ನಗರದ ವಿವಿಧ ಚಲನಚಿತ್ರಮಂದಿರಗಳಿಗೆ ತೆರಳಿ ರವಿವಾರ ಮನವಿ ಮಾಡಿದರು.
ಬಾಹುಬಲಿ-2 ಚಲನಚಿತ್ರ ಪ್ರದರ್ಶನಕ್ಕೆ ಕನ್ನಡಪರ ಸಂಘಟನೆಗಳ ವಿರೋಧವಿದೆ. ಈ ಚಿತ್ರದಲ್ಲಿ ಕಟ್ಟಪ್ಪ ಪಾತ್ರಧಾರಿಯಾಗಿ ನಟಿಸಿದ ತಮಿಳುನಟ ಸತ್ಯರಾಜ ಕಾವೇರಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ಕನ್ನಡಿಗರು, ಕನ್ನಡ ನಾಡು ಹಾಗೂ ಕನ್ನಡಪರ ಹೋರಾಟಗಾರರ ಬಗ್ಗೆ ಕೇವಲವಾಗಿ ಮಾತನಾಡಿದ್ದಾನೆ.
ಅಲ್ಲದೆ ಈ ಸಂದರ್ಭದಲ್ಲಿ ಬಳಸಿದ ಪದ ಅತ್ಯಂತ ಕೆಳಮಟ್ಟದ್ದಾಗಿದೆ. ನಟ ಸತ್ಯರಾಜ ತನ್ನ ಹೇಳಿಕೆ ಬಗ್ಗೆ ಕನ್ನಡಿಗರ ಕ್ಷಮೆ ಕೇಳುವ ತನಕ ರಾಜ್ಯದಲ್ಲಿ ಈ ಚಲನಚಿತ್ರ ಪ್ರದರ್ಶಿಸಲು ಅವಕಾಶ ಕೊಡಲ್ಲ. ಆದ್ದರಿಂದ ನಿಮ್ಮ ಚಿತ್ರಮಂದಿರಗಳಲ್ಲಿ ಈ ಚಿತ್ರ ಪ್ರದರ್ಶಿಸಬಾರದು.
ಸ್ವಾಭಿಮಾನಿ ಕನ್ನಡಿಗರ ಹೋರಾಟಕ್ಕೆ ಬೆಂಬಲಿಸಬೇಕು. ಒಂದು ವೇಳೆ ಚಿತ್ರ ಪ್ರದರ್ಶಿಸಲು ಮುಂದಾದರೆ ಮುಂದೆ ಸಂಭವಿಸಬಹುದಾದ ಅನಾಹುತಗಳಿಗೆ ಚಿತ್ರಮಂದಿರಗಳ ಮಾಲೀಕರು ಹಾಗೂ ಚಿತ್ರದ ವಿತರಕರೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಕರವೇ ಕಾರ್ಯಕರ್ತರು ನಗರದ ಸ್ಟೇಶನ್ ರಸ್ತೆಯ ರೂಪಂ, ಶೃಂಗಾರ, ಕೊಯಿನ್ ರಸ್ತೆಯ ಪಿವಿಆರ್, ಅಪ್ಸರಾ, ಸುಧಾ, ವಿಕ್ಟೋರಿಯಾ ರಸ್ತೆಯ ಶ್ರೀ ಪದ್ಮಾ,
ಗೋಕುಲ ರಸ್ತೆಯ ಸಿನಿ ಪೊಲಿಸ್ ಚಿತ್ರಮಂದಿರಗಳಿಗೆ ತೆರಳಿ ಮನವಿ ಪತ್ರ ಮೂಲಕ ಕೋರಿದರು. ವೇದಿಕೆ ನಗರ ಅಧ್ಯಕ್ಷ ರಾಕೇಶ ಗದಗ, ಅಪ್ಪು ಜಮಳಾಪುರ, ರಮೇಶ ಛಬ್ಬಿ, ನವೀನ ಯರಗುಪ್ಪಿ, ಪವನ ಬಿಜವಾಡ, ಪ್ರಶಾಂತ ಮುಶಣ್ಣವರ, ಅಭಿಷೇಕ ಬಳ್ಳಾರಿ, ಮಣಿಕಂಠ ಬಳ್ಳಾರಿ, ಗಣೇಶ ಬಳ್ಳಾರಿ, ಬಾಲರಾಜ ಲೂತಿಮಠ, ಯಲ್ಲಪ್ಪ ಮಾದರ ಇತರರಿದ್ದರು.