Advertisement
ಸೋಮವಾರ ಜೈಲಿನಲ್ಲಿ ಎರಡು ಗುಂಪುಗಳು ಪರಸ್ಪರ ಬಡಿದಾಡಿಕೊಂಡು ಸುಮಾರು 10 ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಸಂಜೆ 4.30ರ ವೇಳೆಗೆ ವಿಚಾರಣಾಧೀನ ಕೈದಿಗಳನ್ನು ವಿಸಿಟಿಂಗ್‌ಗೆ ಹಾಗೂ ಟೀಬ್ರೇಕ್‌ಗೆ ಬಿಡಲಾಗಿತ್ತು. ಈ ವೇಳೆ ಮಿಥುನ್ ಹಾಗೂ ಸಾಧಿಕ್ ನಡುವೆ ನಡೆದ ಮಾತಿನ ಚಕಮಕಿ ಅನಂತರ ಗುಂಪುಘರ್ಷಣೆಯ ತಿರುವು ಪಡೆದುಕೊಂಡು ಕೈಗೆ ಸಿಕ್ಕಿದ ವಸ್ತುಗಳನ್ನು ಹಿಡಿದುಕೊಂಡು ಬಡಿದಾಡಿಕೊಂಡಿದ್ದಾರೆ.ಹೊಡೆದಾಟ ನಿಯಂತ್ರಿಸಲು ಹೋದ ಪೊಲೀಸರಿಗೂ ಏಟು ಬಿದ್ದಿವೆ. ಜೈಲು ವಸ್ತುಶಃ ಬೀದಿಕಾಳಗ ತಾಣವಾಗಿ
ಪರಿಣಮಿಸಿದೆ. ಪೊಲೀಸರು ಲಾಠಿಪ್ರಹಾರ ಮಾಡಿ ಗಲಭೆ ನಿಯಂತ್ರಿಸಿದ್ದಾರೆ.
Related Articles
ಕೆಲವು ಬಾರಿ ಕಾರಾಗೃಹದೊಳಗಿನ ಹೊಡೆದಾಟ ಕೋಮು ಆಯಾಮ ಪಡೆದುಕೊಂಡಿದ್ದು ಇದೆ. ವಿವಿಧ ಸಂಘಟನೆಗಳ ಸದಸ್ಯರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದಾಗ ಪರಸ್ಪರ ಗುರಾಯಿಸಿಕೊಂಡು ಬಳಿಕ ಹೊಡೆದಾಟಗಳಿಗೆ ಕಾರಣವಾದ ಘಟನೆಗಳು ಸಂಭವಿಸಿವೆ. ಹೊರಗೆ ಕೋಮುಸಂಘರ್ಷ ಕೃತ್ಯಗಳಲ್ಲಿ ಭಾಗಿಯಾಗಿ ಜೈಲಿನೊಳಗೆ ಬಂದವರನ್ನು ಇನ್ನೊಂದು ಕೋಮಿನ ಕೈದಿಗಳು ಥಳಿಸಿದ ಪ್ರಕರಣಗಳು ನಡೆದಿವೆ. ಇತ್ತೀಚಿನ
ವರ್ಷಗಳಲ್ಲಿ ತಮ್ಮ ಸಮುದಾಯಗಳ ಅನುಕಂಪ ಗಿಟ್ಟಿಸಿಕೊಳ್ಳುವ ನೆಪದಲ್ಲಿ ಕೋಮು ಆಧಾರದಲ್ಲಿ ತಮ್ಮನ್ನು
ವರ್ಗಿಕರಿಸಿಕೊಂಡಿರುವ ಭೂಗತ ಲೋಕದ ಪಾತಕಿಗಳು ಇದಕ್ಕೆ ಕುಮ್ಮಕ್ಕು ನೀಡಿ ಬಳಿಕ ಇದನ್ನು ಮಾಧ್ಯಮಗಳ
ಮುಂದೆ ಹೇಳಿಕೊಂಡದ್ದು ಇದೆ. ಸೋಮವಾರ ನಡೆದ ಘಟನೆಯೂ ಇದೇ ಸ್ವರೂಪದಲ್ಲಿ ನಡೆದಿದೆ ಎನ್ನಲಾಗಿದೆ.
Advertisement
ಈ ಹಿಂದೆ ಮಂಗಳೂರು ಕೇಂದ್ರ ಕಾರಾಗೃಹದಲ್ಲಿ ಸ್ಥಳಾವಕಾಶದ ಕೊರತೆ ಇತ್ತು. ಇದು ಪರೋಕ್ಷವಾಗಿ ಕೈದಿಗಳಿಗೆ ಹೊಡೆದಾಟಕ್ಕೆ ಸಹಕಾರಿಯಾಗಿತ್ತು ಎಂದು ಹೇಳಲಾಗುತ್ತಿತ್ತು. ಜೈಲ್‌ನೊಳಗೆ ಹೊಡೆದಾಟಗಳು ತೀವ್ರಗೊಂಡು ಹತ್ಯೆಯ ಘಟನೆ ನಡೆದ ಬಳಿಕ ಜೈಲಿನ ಭದ್ರತೆಗೆ ಕೈಗಾರಿಕ ಭದ್ರತಾ ಪಡೆಯ ಸಿಬಂದಿಯನ್ನು ನಿಯೋಜಿಸಲಾಯಿತು. ಇವರು ಜೈಲಿನ ಹೊರಗೆ ಹಾಗೂ ಇದಕ್ಕೆ ಹೊಂದಿಕೊಂಡಿರುವ ರಸ್ತೆ ಬದಿಯಲ್ಲಿ ಕಾವಲು ಬಂದೂಕು ಸಹಿತ ಕಾವಲು ಇರುತ್ತಾರೆ. ಹಳೆ ಜೈಲಿನ ಆವರಣ ಗೋಡೆ ಸುಮಾರು 30 ಅಡಿ ಎತ್ತರವಿದ್ದು, ಮೇಲ್ಗಡೆ ಅದಕ್ಕೆ ವಿದ್ಯುತ್ ತಂತಿ ಬೇಲಿ ಇದೆ. ಆದರೂ ಗಾಂಜಾ, ಶಸ್ತ್ರಾಸ್ತ, ಮೊಬೈಲ್‌ಗಳು ಜೈಲಿನೊಳಗೆ ನುಸುಳುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಕಾರಾಗೃಹದ ಒಳ ಭಾಗಕ್ಕೆ ಹೊರಗಿನಿಂದ ಪೊಟ್ಟಣಗಳನ್ನು ಎಸೆಯುವ ಪ್ರಕ್ರಿಯೆ ನಡೆಯುತ್ತಿದೆ. ಹಿತೈಷಿಗಳು ಹೊರಗಿನ ರಸ್ತೆಯಲ್ಲಿ ನಿಂತು ಗಾಂಜಾ ಮತ್ತು ಮೊಬೈಲ್ ಎಸೆಯುವ ಘಟನೆಗಳು ನಡೆಯುವುದು ಇದೆ.
ಸಂಘರ್ಷದಿಂದ ಸದಾ ಸುದ್ದಿಯಲ್ಲಿ ಮಂಗಳೂರು ಜೈಲಿನಲ್ಲಿ ಬರೇ ಘರ್ಷಣೆಗಳು ಮಾತ್ರ ನಡೆದಿಲ್ಲ. ಹತ್ಯೆ ನಡೆದ ಕುಖ್ಯಾತಿಯೂ ಇದೆ. 2015ರಲ್ಲಿ ಜೈಲಿನೊಳಗೆ ನಡೆದ ಮಾರಾಮಾರಿಯಲ್ಲಿ ಇಬ್ಬರು ವಿಚಾರಾಧೀನ ಕೈದಿಗಳ ಹತ್ಯೆ ನಡೆದಿತ್ತು. ಮುಂಬಯಿ ಭೂಗತ ಜಗತ್ತಿನೊಂದಿಗೆ ಮಂಗಳೂರು ಜೋಡಿಸಿಕೊಂಡಿದ್ದ ಕಾಲದಲ್ಲಿ ಪ್ರಮುಖ ಪಾತಕಿಗಳ ಬಲಗೈಬಂಟರು ಎನಿಸಿಕೊಂಡವರು ಈ ಕಾರಾಗೃಹದಲ್ಲಿದ್ದರು. ಆದರೆ ಜೈಲಿನೊಳಗೆ ಕಾದಾಡಿಕೊಂಡ ಘಟನೆ ಅಪರೂಪವಾಗಿತ್ತು. ಯಾವಾಗ ಹೊಸ ಹೊಸ ಪಾತಕಿಗಳ ಪ್ರವೇಶವಾಯಿತೋ, ಆಗ ಕಾರಾಗೃಹದ ಅಂಗಳ ಬಿಸಿಯೇರ ತೊಡಗಿತು. ಭೂಗತ ಪಾತಕಿಗಳ ಸಹಚರರೊಳಗೆ ಹೊರಗೆ ನಡೆಯುತ್ತಿದ್ದ ಕಾಳಗ ಜೈಲಿನೊಳಗೂ ಮುಂದುವರಿಯಿತು.