ಚೆನ್ನೈ: ಕರ್ನಾಟಕ ಸರಕಾರವು ಮೇಕೆದಾಟು ಜಲಾಶಯ ನಿರ್ಮಾಣದ ಮೂಲಕ ತಮಿಳುನಾಡನ್ನು ಮರುಭೂಮಿಯಾಗಿಸಲು ಯೋಜಿಸುತ್ತಿದೆ. ಅದರ ವಿರುದ್ಧ ನಿಲ್ಲುವಲ್ಲಿ ತಮಿಳುನಾಡು ಆಡಳಿತಾರೂಢ ಪಕ್ಷ ವಿಫಲವಾಗಿರುವ ಹಿನ್ನೆಲೆಯಲ್ಲಿ ವಿಪಕ್ಷವಾದ ಎಐಎಡಿಎಂಕೆ ತಾನೇ ಹೋರಾಟ ನಡೆಸಲಿದೆ.
ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕ ಮುಂದಾದರೆ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಐಎಡಿಎಂಕೆ ಮುಖ್ಯಸ್ಥ ಕೆ.ಪಳನಿಸ್ವಾಮಿ ಹೇಳಿದ್ದಾರೆ.
ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಕೆದಾಟು ಯೋಜನೆ ಬಗ್ಗೆ ಹೇಳಿಕೆ ನೀಡುತ್ತಿದ್ದಂತೆ ಪಳನಿಸ್ವಾಮಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಅಂತಾರಾಜ್ಯ ನದಿ ವಿವಾದಗಳ ಕಾಯ್ದೆ 1956ರ ಪ್ರಕಾರ, ಕರ್ನಾಟಕ ಸರಕಾರವು ಕಾವೇರಿ ನದಿಯ ನೈಸರ್ಗಿಕ ಮಾರ್ಗವನ್ನು ಬದಲಿಸುವ ಅಥವಾ ತಡೆಯುವ ಹಕ್ಕನ್ನು ಹೊಂದಿಲ್ಲ.
ಕಾವೇರಿ ನದಿ ವಿವಾದ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಅಂತಿಮ ತೀರ್ಪಿನಲ್ಲೂ ಪುದುಚೇರಿ, ತಮಿಳುನಾಡು, ಕೇರಳದ ಸಹಮತವಿಲ್ಲದೆ ಕಾವೇರಿ ನದಿಗೆ ಅಡ್ಡಲಾಗಿ ಯಾವುದೇ ನಿರ್ಮಾಣವನ್ನು ಕೈಗೊಳ್ಳಬಾರದು ಎನ್ನಲಾಗಿದೆ. ಹೀಗಿರುವಾಗ ಕರ್ನಾಟಕ ಕಾಂಗ್ರೆಸ್ ಸರಕಾರದ ಘೋಷಣೆ ಸರಿಯಲ್ಲ ಎಂದಿದ್ದಾರೆ.