ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರರು ನಡೆಸುತ್ತಿರುವ ಪ್ರತಿಭಟನೆ ಸೋಮವಾರವೂ ಮುಂದುವರೆದಿದ್ದು, ಆರೋಗ್ಯ ಇಲಾಖೆ ಆಯುಕ್ತರು ಲಿಖಿತ ರೂಪದ ಆಶ್ವಾಸನೆ ನೀಡುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂಬ ತೀರ್ಮಾನವನ್ನು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ ತೆಗೆದುಕೊಂಡಿದೆ.
ಭಾನುವಾರ ತಡರಾತ್ರಿ ಸ್ಥಳಕ್ಕೆ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಸೇರಿದಂತೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ ಪಾಂಡೆ ಭೇಟಿ ನೀಡಿ ಪ್ರತಿಭಟನಾಕಾರರಿಗೆ ಭರವಸೆ ಈಡೇರಿಸೋದಾಗಿ ಆಶ್ವಾಸನೆ ನೀಡಿದ್ದರು. ಆದರೆ, ಪ್ರತಿಭಟನಾಕಾರರು ಲಿಖಿತ ರೂಪದ ಆಶ್ವಾಸನೆ ನೀಡುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ಬೇಡಿಕೆ ಈಡೇರದಿದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸೋದಾಗಿ ಎಚ್ಚರಿಕೆ ನೀಡಿ¨ªಾರೆ. ಈ ಹಿನ್ನೆಲೆ ಮಂಗಳವಾರವೂ ಪ್ರತಿಭಟನೆ ಮುಂದುವರೆಯುವ ಸಾಧ್ಯತೆ ಇದೆ.
ಸೇವೆಗಳಲ್ಲಿ ವ್ಯತ್ಯಯವಿಲ್ಲ: ಗುತ್ತಿಗೆ ನೌಕರರ ಪ್ರತಿಭಟನೆ ಹಿನ್ನೆಲೆ ಎಚ್ಚೆತ್ತುಕೊಂಡಿದ್ದ ಆರೋಗ್ಯ ಇಲಾಖೆ ಆಸ್ಪತ್ರೆಗಳಲ್ಲಿ ಖಾಯಂ ನೌಕರರು ರಜಾಗಳನ್ನು ತೆಗೆದುಕೊಳ್ಳದಂತೆ ಸೂಚನೆ ನೀಡಿ ರೋಗಿಗಳಿಗೆ ತೊಂದರೆಯಾಗದಂತೆ ಎಚ್ಚರಿಕೆವಹಿಸಿದೆ. ನಗರದ ಕೆ.ಸಿ.ಜನರಲ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆಯಲ್ಲಿ ತುರ್ತುಸೇವೆ ಹಾಗೂ ಹೊರ ರೋಗಿಗಳ ವಿಭಾಗಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಆರೋಗ್ಯ ಇಲಾಖೆಯಿಂದ ಯಾವುದೇ ಆದೇಶಬಾರದ ಹಿನ್ನೆಲೆ ಎಂದಿನಂತೆ ನಮ್ಮ ಸಿಬ್ಬಂದಿಗಳು ಕಾರ್ಯನಿರ್ವಹಿಸಿದ್ದಾರೆ ಎಂದು ಆಯಾ ಆಸ್ಪತ್ರೆಗಳ ಅಧೀಕ್ಷಕರು ತಿಳಿಸಿದರು.
ಕನಿಷ್ಠವೇತನ, ಪಿಂಚಣಿಗೆ ಆಗ್ರಹಿಸಿ ಪ್ರತಿಭಟನೆ: ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕನಿಷ್ಠವೇತನ ಹಾಗೂ ಪಿಂಚಣಿ ಸೌಲಭ್ಯ ಒದಗಿಸದಿರುವುದನ್ನು ಖಂಡಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಸೋಮವಾರ ಪುರಭವನದ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
“ನಾವು ಕಳೆದ 43 ವರ್ಷಗಳಿಂದ ಐ.ಸಿ.ಡಿ.ಎಸ್ ಯೋಜನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಗೌರವ ಧನದ ಹೆಸರಿನಲ್ಲಿ ಕನಿಷ್ಠ ವೇತನ ಸೌಲಭ್ಯ ನೀಡಿಲ್ಲ. ಸೇವಾ ಭದ್ರತೆ ಹಾಗೂ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸದೆ ಎರಡೂ ಸರ್ಕಾರಗಳು ಶೋಷಣೆಯನ್ನು ಮುಂದುವರೆಸಿವೆ’ ಎಂದು ನೆರೆದಿದ್ದ ಅಂಗನವಾಡಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಕಾರ್ಮಿಕರೆಂದು ಪರಿಗಣಿಸಿ ಸೇವೆ ಖಾಯಂಗೊಳಿಸುವುದು. ಮಾಸಿಕ ಕನಿಷ್ಠ 18 ಸಾವಿರ ರೂ. ವೇತನ ಹಾಗೂ ಸೇವಾ ಹಿರಿತನವನ್ನು ಪರಿಗಣಿಸಬೇಕು. ಜತೆಗೆ ಇ.ಎಸ್.ಐ ಮತ್ತು ಭವಿಷ್ಯ ನಿಧಿಯಂತಹ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.