ದಾವಣಗೆರೆ: ನಗರದಲ್ಲಿ ಅನ್ಯಭಾಷೆಯ ಫಲಕಗಳು ರಾರಾಜಿಸುತ್ತಿದ್ದು ಮಹಾನಗರ ಪಾಲಿಕೆ ಆಯುಕ್ತರು ಅವುಗಳನ್ನು ನವೆಂಬರ್ 1ರೊಳಗೆ ತೆರವುಗೊಳಿಸಬೇಕು. ಇಲ್ಲದಿದ್ದರೆ ನ. 1ರಂದು ಅಂಥ ಫಲಕಗಳಿಗೆ ಮಸಿ ಬಳಿಯಲಾಗುವುದು ಹಾಗೂ ನವೆಂಬರ್ 2ರಂದು ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರಾಮೇಗೌಡ ಎಂ.ಎಸ್. ಎಚ್ಚರಿಕೆ ನೀಡಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗಡಿ, ವಾಣಿಜ್ಯ ಮಳಿಗೆಗಳಲ್ಲಿ ಶೇ. 56 ರಷ್ಟು ಕನ್ನಡ ಬಳಕೆಯಾಗಬೇಕೆಂಬ ನಿಯಮವಿದೆ. ಆದರೆ ನಗರದಲ್ಲಿ ಶೇ. 90ರಷ್ಟು ಆಂಗ್ಲಭಾಷೆಯ ಫಲಕಗಳಿವೆ. ಈ ಕುರಿತು ಸಾಕಷ್ಟು ಬಾರಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ನೀಡಿದರೂ ಕ್ರಮ ಹಿಸಿಲ್ಲ ಎಂದು ದೂರಿದರು. ಕರ್ನಾಟಕದ ಏಕೀಕರಣ ಆದಾಗಿನಿಂದಲೂ ರಾಜ್ಯದಲ್ಲಿ ನವೆಂಬರ್ 1ರಂದು ರಾಷ್ಟ್ರದ ತ್ರಿವರ್ಣ ಧ್ವಜದೊಂದಿಗೆ ಕನ್ನಡ ಧ್ವಜ ಹಾರಿಸುತ್ತ ಬರಲಾಗಿತ್ತು. ಕಳೆದೆರಡು ವರ್ಷಗಳಿಂದ ರಾಜ್ಯ ಸರ್ಕಾರ ಕನ್ನಡ ಧ್ವಜ ಹಾರಿಸುವುದನ್ನು ತಡೆದಿದೆ. ಈ ವರ್ಷದಿಂದ ಮತ್ತೆ ಕನ್ನಡ ಧ್ವಜ ಹಾರಿಸುವಂತಾಗಬೇಕು.
ನಾಡಗೀತೆಯನ್ನು ಅವಮಾನಿಸಿರುವ ಚಕ್ರತೀರ್ಥ ಎಂಬ ವ್ಯಕ್ತಿಯ ಮೇಲೆ ಕ್ರಮ ಜರುಗಿಸಬೇಕು ಎಂದು ರಾಮೇಗೌಡ ಆಗ್ರಹಿಸಿದರು.
ಪ್ರತಿಭಾ ಪುರಸ್ಕಾರ
2020-21ನೇ ಸಾಲಿನ ಎಸ್ ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದ ದಾವಣಗೆರೆ ವಲಯದ 157ವಿದ್ಯಾರ್ಥಿಗಳಿಗೆ ಕರವೇಯಿಂದ ಜ್ಞಾನಕಾಶಿ ಪುರಸ್ಕಾರ ನೀಡಿ ಗೌರವಿಸಲಾಗುವುದು. ಪ್ರತಿಭಾ ಪುರಸ್ಕಾರ ಸಮಾರಂಭ ಅ. 24ರಂದು ಬೆಳಿಗ್ಗೆ 11 ಗಂಟೆಗೆ ಗುರುಭವನದಲ್ಲಿ ನಡೆಯಲಿದ್ದು, ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಕಾರ್ಯಕ್ರಮ ಉದ್ಘಾಟಿಸುವರು. ಶಿವಾನಂದ ಗುಂಡನವರ್ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಉಪನ್ಯಾಸ ನೀಡುವರು. ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಕಸಾಪ ತಾಲೂಕು ಮಾಜಿ ಅಧ್ಯಕ್ಷ ಬಿ. ವಾಮದೇವಪ್ಪ, ಜೈನ್ ವಿದ್ಯಾಲಯದ ಕಾರ್ಯದರ್ಶಿ ನರೇಂದ್ರಕುಮಾರ್, ಉದ್ಯಮಿ ರಮೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್. ಪರಮೇಶ್ವರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಕೊಟ್ರೇಶ್, ಕರವೇ ಮಹಿಳಾ ಘಟಕದ ಅಧ್ಯಕ್ಷೆ ಬಸಮ್ಮ ಅತಿಥಿಗಳಾಗಿ ಭಾಗವಹಿಸುವರು. ಕರವೇ ಗೌರವಾಧ್ಯಕ್ಷ ವಾಸುದೇವ ರಾಯ್ಕರ್ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು. ಕರವೇ ಪದಾಧಿಕಾರಿಗಳು ಹಾಗೂ ಸದಸ್ಯರಾದ ಬಸಮ್ಮ, ಮಲ್ಲಿಕಾರ್ಜುನ್, ಬಸವರಾಜ್ , ದೇವರಮನಿ ಗೋಪಾಲ, ಎಂ.ಬಿ. ರಫೀಕ್, ಲೋಕೇಶ್, ಖಾದರ್ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.