Advertisement

ಕೋವಿಡ್‌-19 ಹಾವಳಿ : ವೇಗ ಪಡೆಯಲಿ ಹೋರಾಟ

01:59 AM Jul 07, 2020 | Hari Prasad |

ಕೋವಿಡ್ 19 ಸೋಂಕಿನಿಂದಾಗಿ ಅತಿಹೆಚ್ಚು ಪೀಡಿತವಾಗಿರುವ ಜಾಗತಿಕ ಹಾಟ್‌ಸ್ಪಾಟ್‌ಗಳಲ್ಲಿ ಭಾರತವೀಗ ಮೂರನೇ ಸ್ಥಾನ ತಲುಪಿರುವುದು ಆತಂಕದ ವಿಷಯವೇ ಸರಿ.

Advertisement

ಅದರಲ್ಲೂ ನಿತ್ಯ ಸೋಂಕಿತರ ಸಂಖ್ಯೆಯಂತೂ ಏರುತ್ತಲೇ ಸಾಗಿದೆ. ಜುಲೈ 2ರಿಂದ ದೇಶದಲ್ಲಿ ನಿತ್ಯ ಸೋಂಕಿತರ ಸಂಖ್ಯೆ 20 ಸಾವಿರಕ್ಕಿಂತಲೂ ಅಧಿಕ ದಾಖಲಾಗುತ್ತಿದೆ.

ಭಾರತದ ಅನಂತರದಲ್ಲಿ ರಷ್ಯಾದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆಯಾದರೂ ಅಲ್ಲಿ ಮರಣ ಪ್ರಮಾಣ ಭಾರತಕ್ಕಿಂತಲೂ ಕಡಿಮೆಯೇ ಇದೆ. ಹಾಗೆಂದು ಭಾರತದಲ್ಲಿ ಮರಣ ಪ್ರಮಾಣ ಅತ್ಯಧಿಕವಿದೆಯೆಂದೇನೂ ಅಲ್ಲ.

ಭಾರತದಲ್ಲಿ ಸೋಮವಾರದ ವೇಳೆಗೆ ಕೋವಿಡ್‌-19ರಿಂದಾಗಿ ಮರಣ ದರ ಶೇ.2.81 ದಾಖಲಾಗಿದೆ. ಇನ್ನೊಂದೆಡೆ ಕೋವಿಡ್ 19ನಿಂದಾಗಿ ಅತಿಹೆಚ್ಚು ಪೀಡಿತವಾಗಿರುವ ಅಮೆರಿಕ ಮತ್ತು ಬ್ರೆಜಿಲ್‌ನಲ್ಲಿ ಕ್ರಮವಾಗಿ ಶೇ. 4.44 ಮತ್ತು ಶೇ. 4.04 ದಾಖಲಾಗಿದೆ.

ಹಾಗೆಂದು ಇದು ಸಮಾಧಾನಪಡಬೇಕಾದ ಸಂಗತಿಯೇನೂ ಅಲ್ಲ. ಆದಾಗ್ಯೂ, ಈ ವೇಳೆಯಲ್ಲೇ ದೇಶದಲ್ಲಿ ಚೇತರಿಸಿಕೊಂಡವರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಸಮಾಧಾನದ ವಿಷಯವಾದರೂ ಕೋವಿಡ್‌-19 ನಿತ್ಯ ಪ್ರಕರಣಗಳ ಸಂಖ್ಯೆಯಲ್ಲಿ ಮುಂದಿನ ದಿನಗಳಲ್ಲಿ ಗಮನಾರ್ಹ ಇಳಿಕೆ ಕಾಣಿಸಿಕೊಳ್ಳದಿದ್ದರೆ, ಇದರ ಪರಿಣಾಮ ಏನಾಗಬಹುದೋ ಎಂಬ ಆತಂಕವಂತೂ ಕಾಡಲಾರಂಭಿಸಿದೆ.

Advertisement

ರಾಜ್ಯವೂ ಸೇರಿದಂತೆ ದೇಶಾದ್ಯಂತ ಪ್ರಕರಣಗಳ ಸಂಖ್ಯೆಯಲ್ಲಿ ಹಠಾತ್ತನೆ ಏರಿಕೆ ಕಂಡುಬರುತ್ತಿರುವುದರಿಂದಾಗಿ, ಆರೋಗ್ಯ ವ್ಯವಸ್ಥೆಯ ಮೇಲೂ ಅಪಾರ ಒತ್ತಡ ಬೀಳುತ್ತಿದೆ. ಕರ್ನಾಟಕದ ವಿಚಾರಕ್ಕೆ ಬರುವುದಾದರೆ, ಈ ಮೊದಲು ಕಾಂಟ್ಯಾಕ್ಟ್ ಟ್ರೇಸಿಂಗ್‌ನಲ್ಲಿ (ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚುವುದು), ರೋಗ ಪ್ರಸರಣ ನಿಯಂತ್ರಣದಲ್ಲಿ ದೇಶಕ್ಕೆ ಮಾದರಿಯಾಗಿದ್ದ ರಾಜಧಾನಿ ಬೆಂಗಳೂರಲ್ಲಿ ಕೆಲವು ಸಮಯದಿಂದ ಕೋವಿಡ್‌-19 ಹಾವಳಿ ಅಧಿಕವಾಗುತ್ತಿದೆ. ಜೂನ್‌ 29ರಿಂದ ಜುಲೈ 6ರವರೆಗೆ ಹೊಸ ಪ್ರಕರಣಗಳ ಸಂಖ್ಯೆ ನಿತ್ಯ ಸರಾಸರಿ 9 ಪ್ರತಿಶತ ವೇಗದಲ್ಲಿ ದಾಖಲಾಗುತ್ತಿದೆ.

ದುರಂತವೆಂದರೆ, ಪರಿಸ್ಥಿತಿ ವಿಷಮಿಸುವಲ್ಲಿ ಸಾರ್ವಜನಿಕರ ನಿಷ್ಕಾಳಜಿಯೂ ಕಾರಣವಾಗುತ್ತಿರುವುದು. ಈಗಲೂ ಸಹ, ಸಾಮಾಜಿಕ ಅಂತರ ಪರಿಪಾಲನೆ ಎನ್ನುವುದು ನೆಪ ಮಾತ್ರಕ್ಕೆ ಎಂಬಂತೆ ನಡೆಯುತ್ತಿದ್ದು, ರಾಜಧಾನಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಇದೇ ರೀತಿಯ ಬೇಜವಾಬ್ದಾರಿ ವರ್ತನೆ ಜನರಿಂದ ಕಂಡುಬರುತ್ತಿದೆ.

ನೆನಪಿರಲಿ, ಅತೀ ಹೆಚ್ಚು ಸಕ್ರಿಯ ಸೋಂಕಿತರಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಈಗ ನಾಲ್ಕನೇ ಸ್ಥಾನದಲ್ಲಿದೆ. ಆದಾಗ್ಯೂ ಟಾಪ್‌ 3 ಸೋಂಕಿತ ರಾಜ್ಯಗಳಿಗೆ ಹೋಲಿಸಿದರೆ, ನಮ್ಮಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಹಾಗೂ ಮರಣದರ ಕಡಿಮೆ ಇದೆಯಾದರೂ ಅಪಾಯವನ್ನು ಕಡೆಗಣಿಸಲೇಬಾರದು.

ಇದೇ ವೇಳೆಯಲ್ಲೇ  ಆಸ್ಪತ್ರೆಗಳು, ಆರೋಗ್ಯ ಇಲಾಖೆ ಹಾಗೂ ಸರಕಾರ ಕೋವಿಡ್‌ ಸೋಂಕಿತರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಲು ಎಲ್ಲ ರೀತಿಯಿಂದಲೂ ಪ್ರಯತ್ನಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next