Advertisement
2022ರ ವಿಶ್ವಕಪ್ ಪಂದ್ಯಾವಳಿ ಮರುಭೂಮಿ, ಬಿಸಿಲನಾಡು ಕತಾರ್‌ನಲ್ಲಿ ನಡೆಯಲಿದೆ. ಧಗೆಯ ಕಾರಣ ಇಲ್ಲಿ ದೀರ್ಘಕಾಲ ಕೂಟ ನಡೆಸುವುದು ಅಸಾಧ್ಯ. ಸದ್ಯ 32 ತಂಡಗಳು 28 ದಿನಗಳ ಕಾಲ ವಿಶ್ವಕಪ್ ಆಡಲಿವೆ. ಒಂದು ವೇಳೆ 48 ತಂಡಗಳನ್ನು ಆಡಿಸಿದರೆ ದಿನಗಳನ್ನು ಹೆಚ್ಚಿಸಬೇಕಾಗುತ್ತದೆ. ಇದು ತೀರಾ ಕಷ್ಟ. ಆದ್ದರಿಂದ ಕೂಟವನ್ನು ಎಂದಿನಂತೆ 28 ದಿನಗಳಿಗೆ ಮಿತಗೊಳಿಸಬೇಕಾಗುತ್ತದೆ.
ಕತಾರ್‌ನಲ್ಲಿ ವಿಪರೀತ ಬಿಸಿ ಇರುವುದರಿಂದ ವಾತಾವರಣ ಸ್ವಲ್ಪ ತಣ್ಣಗಿರುವ ನವೆಂಬರ್-ಡಿಸೆಂಬರ್‌ನಲ್ಲಿ ಕೂಟ ನಡೆಸಬೇಕಾಗುತ್ತದೆ. ಅದೇ ಸಮಯದಲ್ಲಿ ಯೂರೋಪ್ ಫುಟ್‌ಬಾಲ್ ಲೀಗ್‌ಗಳು ಜೋರಾಗಿ ನಡೆಯುತ್ತವೆ. ವಿಶ್ವಕಪ್‌ನಿಂದಾಗಿ ಲೀಗ್‌ಗಳು ತಮ್ಮ ವೇಳಾಪಟ್ಟಿಯನ್ನು ಹೊಂದಿಸಿಕೊಳ್ಳಬೇಕಾದ ಸಮಸ್ಯೆ ಎದುರಿಸುತ್ತವೆ. ಈಗಾಗಲೇ ಇಷ್ಟವಿಲ್ಲದಿದ್ದರೂ ವೇಳಾಪಟ್ಟಿ ಹೊಂದಿಸಿ ಕೊಳ್ಳುವುದಕ್ಕೆ ಲೀಗ್‌ಗಳು ಒಪ್ಪಿವೆ. ಆದರೆ ಕೂಟದ ದಿನಗಳನ್ನೂ ಹೆಚ್ಚಿಸಿದರೆ ಲೀಗ್‌ಗಳು ತಾಳ್ಮೆ ಕಳೆದುಕೊಳ್ಳುವುದು ಖಚಿತ. 48 ತಂಡಗಳನ್ನು 28 ದಿನಗಳಲ್ಲಿ ಆಡಿಸುವುದರಿಂದ ಕೆಲವು ದಿನ 6 ಪಂದ್ಯ ನಡೆಸಬೇಕಾಗುತ್ತದೆ. ನಾಕೌಟ್ ಹಂತದಲ್ಲೂ ಇದೇ ಪರಿಸ್ಥಿತಿ ಎದುರಾಗುತ್ತದೆ. ಕತಾರ್‌ನಂತಹ ಸಣ್ಣ ರಾಷ್ಟ್ರಕ್ಕೆ ಇಷ್ಟು ಮೈದಾನಗಳನ್ನು ಹೊಂದಿಸುವುದು ಸಾಧ್ಯವೇ ಇಲ್ಲದ ಮಾತು.