Advertisement

ಮೆಸ್ಸಿ ಮ್ಯಾಜಿಕ್‌, ಎಂಬಪೆ ಹ್ಯಾಟ್ರಿಕ್‌, ಆರ್ಜೆಂಟೀನಾಕ್ಕೆ ಕಪ್‌

12:38 AM Dec 19, 2022 | Team Udayavani |

ಲುಸೈಲ್‌: ಇನ್ನೇನು ಆರ್ಜೆಂಟೀನಾ ಗೆದ್ದು ಮೆಸ್ಸಿಗೆ ಸ್ಮರಣೀಯ ವಿದಾಯ ಹೇಳಿತು ಎನ್ನುವಾಗಲೇ ಎಂಬಪೆ ನೀಡಿದ ಅನಿರೀಕ್ಷಿತ ತಿರುಗೇಟು, ಪೂರ್ಣಾವಧಿಯಲ್ಲಿ 2-2 ಸಮಬಲದ ಪರಾಕ್ರಮ, ಹೆಚ್ಚುವರಿ ಅವಧಿಯ ಆಟ, ಇಲ್ಲಿ ಮತ್ತೆ ಮೆಸ್ಸಿ ಮತ್ತು ಎಂಬಪೆ ಮ್ಯಾಜಿಕ್‌, 3-3 ಸಮಬಲ, ಕೊನೆಯಲ್ಲಿ ಶೂಟೌಟ್‌… ಹೀಗೆ ಚಾಂಪಿಯನ್‌ ಆಟದ ಎಲ್ಲ ಅವತಾರಗಳನ್ನೂ ಕಂಡ ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ ಆರ್ಜೆಂಟೀನಾ ಚಾಂಪಿಯನ್‌ ಆಗಿ ಹೊರಹೊಮ್ಮಿತು.

Advertisement

ಶೂಟೌಟ್‌ನಲ್ಲಿ ಆರ್ಜೆಂಟೀನಾ 4-2 ಅಂತರದಿಂದ ಜಯಭೇರಿ ಮೊಳಗಿಸುವುದರೊಂದಿಗೆ ಫ‌ುಟ್‌ಬಾಲ್‌ ಸಾಮ್ರಾಜ್ಯವನ್ನು 3ನೇ ಬಾರಿಗೆ ಆಳುವ ಹಕ್ಕು ಪಡೆಯಿತು. ಇದಕ್ಕೂ ಮಿಗಿಲಾಗಿ ಲೆಜೆಂಡ್ರಿ ಆಟಗಾರ, ಮಾಯಾವಿ ಮೆಸ್ಸಿಗೆ ಸ್ಮರಣೀಯ ವಿದಾಯ ಹೇಳಿತು.

ಮೆಸ್ಸಿ ಮೇನಿಯಾದಲ್ಲಿ ಮುಳುಗಿದ್ದ ಫ‌ುಟ್‌ಬಾಲ್‌ ಜಗತ್ತಿಗೆ ಕೊನೆಯ ನಿಮಿಷದಲ್ಲಿ ಕೈಲಿಯನ್‌ ಎಂಬಪೆ ಮಹಾಘಾತವಿಕ್ಕಿದರು. ಇನ್ನೇನು 2-0 ಅಂತರದಿಂದ ಆರ್ಜೆಂಟೀನಾ ಗೆದ್ದೇ ಬಿಟ್ಟಿತು ಎನ್ನುವ ಹಂತದಲ್ಲೇ ಫ್ರಾನ್ಸ್‌ ತಿರುಗಿ ಬಿತ್ತು. 80ನೇ ನಿಮಿಷದಲ್ಲಿ ಎಂಬಬೆ ಆಟ ತೀವ್ರಗೊಂಡಿತು. ಬಿರುಸು ಪಡೆಯಿತು. ಒಂದೇ ನಿಮಿಷದ ಅಂತರದಲ್ಲಿ 2 ಗೋಲು ಸಿಡಿಸಿ ಪಂದ್ಯವನ್ನು ಹೆಚ್ಚುವರಿ ಅವಧಿಗೆ ಕೊಂಡೊಯ್ದರು. ಇಲ್ಲಿ ಮತ್ತೆ ಮೆಸ್ಸಿ, ಎಂಬಪೆ ಗೋಲು ಸಿಡಿಸಿದರು. ಶೂಟೌಟ್‌ನಲ್ಲಿ ಆರ್ಜೆಂಟೀನಾಕ್ಕೆ ಅದೃಷ್ಟ ಕೈ ಹಿಡಿಯಿತು.

ವಿಶ್ವಕಪ್‌ ಎತ್ತಿ ಹಿಡಿದು ಮೆರೆಯಬೇಕೆಂಬ ಮೆಸ್ಸಿ ಅವರ 18 ವರ್ಷಗಳ ಸುದೀರ್ಘ‌ ಕನಸು ವಿದಾಯ ಪಂದ್ಯದಲ್ಲಿ ದೊಡ್ಡ ಮಟ್ಟದಲ್ಲೇ ಸಾಕಾರಗೊಂಡಿತು. ಅದೂ ವಿದಾಯ ಪಂದ್ಯದಲ್ಲಿ!

ಮೊದಲಾರ್ಧದಲ್ಲಿ ಆರ್ಜೆಂಟೀನಾ ಆಕ್ರಮಣಗೈದರೆ, ದ್ವಿತೀಯಾರ್ಧದ ಕೊನೆಯ ಅವಧಿಯಲ್ಲಿ ಫ್ರಾನ್ಸ್‌ ಪರಾಕ್ರಮಗೈದಿತು. ಚಾಂಪಿಯನ್ನರ ಆಟವನ್ನು ಆಡಿತು. ಪಂದ್ಯ ಹೆಚ್ಚುವರಿ ಅವಧಿಯತ್ತ ಮುಖ ಮಾಡಿತು.
2014ರಲ್ಲೇ ಮೆಸ್ಸಿಗೆ ಕಪ್‌ ಎತ್ತುವ ಸುವರ್ಣಾವಕಾಶ ಎದುರಾಗಿತ್ತಾದರೂ ಫೈನಲ್‌ನಲ್ಲಿ ಇದಕ್ಕೆ ಜರ್ಮನಿ ಅಡ್ಡಗಾಲಿಕ್ಕಿತ್ತು. ಆದರೆ ಈ ಬಾರಿಯ ಫೈನಲ್‌ ಅವಕಾಶವನ್ನು ಬಿಟ್ಟುಕೊಡಲಿಲ್ಲ. ಸ್ವತಃ ಮೆಸ್ಸಿಯೇ ಮುಂಚೂಣಿಯಲ್ಲಿ ನಿಂತು ಖಾತೆ ತೆರೆಯುವ ಮೂಲಕ ಇಡೀ ತಂಡವನ್ನು ಹುರಿದುಂಬಿಸಿದರು. ಕೂಟದ ಆರಂಭಿಕ ಪಂದ್ಯದಲ್ಲೇ ಸಾಮಾನ್ಯ ತಂಡವಾದ ಸೌದಿ ಅರೇಬಿಯಕ್ಕೆ ಸೋತ ತಂಡವೀಗ ಫ‌ುಟ್‌ಬಾಲ್‌ ಸಾಮ್ರಾಜ್ಯವನ್ನು ಆಳುತ್ತಿರುವುದು ನಿಜಕ್ಕೂ ಸೋಜಿಗ!

Advertisement

3ನೇ ನಿಮಿಷದಲ್ಲಿ ಮೆಸ್ಸಿಯೇ ಆರ್ಜೆಂಟೀನಾ ಆಕ್ರಮಣವನ್ನು ಆರಂಭಿಸಿದರು. ಆದರೆ ಫ್ರಾನ್ಸ್‌ ಗೋಲಿ ಹ್ಯೂಗೊ ಲಾರಿಸ್‌ ಇದನ್ನು ಸುಲಭದಲ್ಲಿ ತಡೆದರು. ಫ್ರೆಂಚ್‌ ರಕ್ಷಣ ವಿಭಾಗ ಆರಂಭದಿಂದಲೇ ಅಗ್ನಿಪರೀಕ್ಷೆಗೆ ಒಳಗಾಯಿತು.

ಮೆಸ್ಸಿ ಸೂಪರ್‌ ಗೋಲ್‌
23ನೇ ನಿಮಿಷದಲ್ಲಿ ಫ್ರಾನ್ಸ್‌ ಆಟಗಾರ ಔಸ್‌ಮೇನ್‌ ಡೆಂಬೆಲೆ ಟ್ಯಾಕಲ್‌ ಮಾಡಿ ಆ್ಯಂಜೆಲ್‌ ಡಿ ಮರಿಯ ಅವರನ್ನು ಬೀಳಿಸಿದ್ದು ಆರ್ಜೆಂಟೀನಾಕ್ಕೆ ವರವಾಗಿ ಪರಿಣಮಿಸಿತು. ವರವಾಗಿ ಲಭಿಸಿದ ಪೆನಾಲ್ಟಿಯನ್ನು ಮೆಸ್ಸಿ ಬಿಡಲಿಲ್ಲ. ಲಾರಿಸ್‌ಗೆ ಇದನ್ನು ತಡೆಯಲಾಗಲಿಲ್ಲ. ಅವರು ಬಲ ಭಾಗಕ್ಕೆ ಡೈವ್‌ ಹೊಡೆದರೆ, ಮೆಸ್ಸಿ ಬಲ ಭಾಗದ ಬಾಟಮ್‌ ಕಾರ್ನರ್‌ ಮೂಲಕ ಚೆಂಡನ್ನು ಗೋಲು ಪೆಟ್ಟಿಗೆಗೆ ತಳ್ಳುವಲ್ಲಿ ಯಶಸ್ವಿಯಾದರು. ಆರ್ಜೆಂಟೀನಾ ಆಗಲೇ ಅರ್ಧ ಪಂದ್ಯ ಜಯಿಸಿತ್ತು.

ಇದು ವಿಶ್ವಕಪ್‌ನಲ್ಲಿ ಮೆಸ್ಸಿ ಬಾರಿಸಿದ 12ನೇ ಗೋಲು. ಫ‌ುಟ್‌ಬಾಲ್‌ ದಂತಕತೆ ಪೀಲೆ ಅವರ 5ನೇ ಸ್ಥಾನದ ದಾಖಲೆಯನ್ನು ಅವರು ಸರಿದೂಗಿಸಿದರು.

ತಿರುಗಿ ಬಿದ್ದ ಮರಿಯ
ನೆಲಕ್ಕೆ ಬಿದ್ದ ಡಿ ಮರಿಯ ಭಾರೀ ಜೋಶ್‌ನಿಂದಲೇ ತಿರುಗಿ ಬಿದ್ದರು. 36ನೇ ನಿಮಿಷದಲ್ಲಿ ಗೋಲೊಂದನ್ನು ಸಿಡಿಸಿ ಆರ್ಜೆಂಟೀನಾಕ್ಕೆ 2-0 ಮುನ್ನಡೆ ತಂದಿತ್ತರು. ಈ ಗೋಲು ಹೊಡೆಯಲು ನೆರವಾದವರು ಮ್ಯಾಕ್‌ ಅಲಿಸ್ಟರ್‌ ಮತ್ತು ಮೆಸ್ಸಿ ಎಂಬುದನ್ನು ಮರೆಯುವಂತಿಲ್ಲ. ಹೀಗೆ 2-0 ಮುನ್ನಡೆಯೊಂದಿಗೆ ಆರ್ಜೆಂಟೀನಾ ನಿರಾಳವಾಗಿ ವಿರಾಮಕ್ಕೆ ತೆರಳಿತು.

ಈ 2 ಗೋಲುಗಳೊಂದಿಗೆ ಆರ್ಜೆಂಟೀನಾ 150 ಪ್ಲಸ್‌ ಗೋಲು ಹೊಡೆದ ವಿಶ್ವದ 3ನೇ ತಂಡವೆನಿಸಿತು (151). ಬ್ರಝಿಲ್‌ (237) ಮತ್ತು ಜರ್ಮನಿ (232) ಮೊದಲೆರಡು ಸ್ಥಾನದಲ್ಲಿವೆ.

ಬ್ರೇಕ್‌ ಬಳಿಕವೂ ಆರ್ಜೆಂಟೀನಾ ಆಕ್ರಮಣ ಜೋರಾಗಿಯೇ ಇತ್ತು. 49ನೇ ನಿಮಿಷದಲ್ಲಿ 3ನೇ ಅವಕಾಶ ಎದುರಾಯಿತಾದರೂ ಅಲ್ವರೇಜ್‌ ಶಾಟ್‌ ಒಂದನ್ನು ಲಾರಿಸ್‌ ಅಮೋಘವಾಗಿ ತಡೆದರು.

 

 

Advertisement

Udayavani is now on Telegram. Click here to join our channel and stay updated with the latest news.

Next