ಬೆಂಗಳೂರು: ವಿವಿಧ ಇಲಾಖೆಯ ಸಚಿವರು ಸುಲಭವಾಗಿ ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಲಭ್ಯವಾಗಬೇಕೆಂಬ ಸದುದ್ದೇಶದಿಂದ ಬಿಜೆಪಿ ಕೇಂದ್ರ ಕಚೇರಿಗೆ ವಾರಕ್ಕೆ ಓರ್ವ ಸಚಿವ ಭೇಟಿ ನೀಡಬೇಕು ಎಂಬ ಸೂಚನೆಯನ್ನು ರಾಜ್ಯಾಧ್ಯಕ್ಷರೇ ನೀಡಿದ್ದರೂ, ಪಾಲನೆ ಮಾತ್ರ ಸಮರ್ಪಕವಾಗಿ ಆಗುತ್ತಿಲ್ಲ.
ಹೀಗಾಗಿ ಕಾರ್ಯಕ್ರಮದ ರೂಪುರೇಷೆಯಲ್ಲೆ ಕೆಲವೊಂದು ಬದಲಾವಣೆ ಮಾಡಿ, ಸಚಿವರನ್ನು ಕಚೇರಿಗೆ ಕರತಲು ವಿಭಿನ್ನ ಪ್ರಯತ್ನಕ್ಕೆ ರಾಜ್ಯ ಬಿಜೆಪಿ ಮುಂದಾಗಿದೆ. ವಾರದಲ್ಲಿ ಯಾವುದಾದರೂ ಒಂದು ದಿನ ಓರ್ವ ಸಚಿವ ಬಿಡುವು ಮಾಡಿಕೊಂಡು ಕಚೇರಿಗೆ ಬರಬೇಕು. ಅದಕ್ಕಾಗಿ ಸಚಿವರ ತಿಂಗಳ ಪ್ರವಾಸದಲ್ಲೇ ಇದನ್ನು ಸೇರಿಸಿ, ಪೂರ್ವನಿಗದಿಯ ಕಾರ್ಯಕ್ರಮದಂತೆ ಕಾರ್ಯರೂಪಕ್ಕೆ ತರಲು ಗಂಭೀರ ಚಿಂತನೆ ನಡೆಯುತ್ತಿದೆ ಮತ್ತು ಮುಂದಿನ ವಾರದಿಂದಲೇ ಈ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆಯೂ ಇದೆ ಎಂದು ಬಿಜೆಪಿಯ ಉನ್ನತ ಮೂಲ ಖಚಿತಪಡಿಸಿದೆ.
ಬಿಜೆಪಿ ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದಿದೆ. ಆದರೂ, ಬಹುತೇಕ ಸಚಿವರು ಕಚೇರಿಗೆ ಬಂದು ಹೋಗಿರುವುದು ಬಿಟ್ಟರೆ ಕಾರ್ಯಾಲಯದಲ್ಲಿ ಕುಳಿತು ಕಾರ್ಯಕರ್ತರ ಅಹವಾಲನ್ನು ಆಲಿಸಿಲ್ಲ. ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಈಗಾಗಲೇ ನಾಲ್ಕು ಬಾರಿ, ಚಿಕ್ಕಮಗಳೂರು ನಗರದ ಶಾಸಕರಾಗಿರುವ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮೂರು ಬಾರಿ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಗಣಿ ಸಚಿವ ಸಿ.ಸಿ.ಪಾಟೀಲ್, ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಹಾಗೂ
-ಮುಜರಾಯಿ ಮತ್ತು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಈಗಾಗಲೇ ತಲಾ 2 ಬಾರಿ ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಕುಂದುಕೊರತೆ ನೀಗಿಸುವ ನಿಟ್ಟಿನಲ್ಲಿ ಅಹವಾಲುಗಳನ್ನು ಸ್ವೀಕರಿಸಿದ್ದಾರೆ. ಅಲ್ಲದೆ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಹಿತವಾಗಿ ಕೆಲವು ಸಚಿವರು ಒಂದೊಂದು ಬಾರಿ ಭೇಟಿ ನೀಡಿದ್ದಾರೆ. ಕಾನೂನು ಸಚಿವ ಮಾಧುಸ್ವಾಮಿ ಸಹಿತವಾಗಿ ಕೆಲವು ಬೆಂಗಳೂರಿನ ಮತ್ತು ಉತ್ತರ ಕರ್ನಾಟಕ ಭಾಗದ ಸಚಿವರು ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿಲ್ಲ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ.
ನೂತನ ಸಚಿವರು ಬಂದು ಹೋಗಿದ್ದು ಮಾತ್ರ!: ಎರಡು ವಾರಗಳ ಹಿಂದೆ ಸಂಪುಟ ಸೇರಿಕೊಂಡಿರುವ ನೂತನ ಸಚಿವರಾದ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ, ನಾರಾಯಣ ಗೌಡ. ಆನಂದ ಸಿಂಗ್, ಶ್ರೀಮಂತ ಪಾಟೀಲ್, ಗೋಪಾಲಯ್ಯ, ಶಿವರಾಮ್ ಹೆಬ್ಟಾರ್, ಬಿ.ಸಿ.ಪಾಟೀಲ್, ಡಾ.ಸುಧಾಕರ್ ಅವರು ಈಗಾಗಲೇ ಪಕ್ಷದ ಕಚೇರಿಗೆ ಭೇಟಿ ನೀಡಿ, ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಲು ಪಕ್ಷದ ಕಚೇರಿಗೆ ಕೆಲವರು ಹೋಗಿದ್ದರು. ಆದರೆ, ಸಣ್ಣ ನೀರಾವರಿ ಸಚಿವರಾದ ರಮೇಶ್ ಜಾರಕಿಹೊಳಿಯವರು ಪಕ್ಷದ ಕಚೇರಿಗೆ ಇನ್ನೂ ಭೇಟಿ ನೀಡಿಲ್ಲ ಎಂದು ಬಿಜೆಪಿಯ ಹಿರಿಯ ಕಾರ್ಯಕರ್ತರೊಬ್ಬರು ಮಾಹಿತಿ ನೀಡಿದರು.
ಅಧ್ಯಕ್ಷರ ಸೂಚನೆ ಏನಾಗಿತ್ತು?: ಪಕ್ಷದ ಕಚೇರಿಗೆ ವಾರಕ್ಕೆ ಒರ್ವ ಸಚಿವರು ಭೇಟಿ ನೀಡಿ, ಕಾರ್ಯಕರ್ತರ ಕುಂದುಕೊರತೆ ಆಲಿಸಬೇಕು. ಕಾರ್ಯಕರ್ತರು ಯಾವೆಲ್ಲ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದನ್ನು ಹತ್ತಿರದಿಂದ ಅರಿಯಬೇಕು. ಸಾಮಾನ್ಯ ಜನರು, ಬಿಜೆಪಿ ಬೆಂಬಲಿಗರು ಮತ್ತು ಹಿತೈಶಿಗಳು ಆಗಾಗ್ಗೆ ಪಕ್ಷದ ಕಚೇರಿಗೆ ಬರುತ್ತಿರುವುದರಿಂದ ಸಚಿವರನ್ನು ಭೇಟಿ ಮಾಡಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ವಾರಕ್ಕೆ ಒಮ್ಮೆ ಓರ್ವ ಸಚಿವ ಪಕ್ಷದ ಕಚೇರಿಗೆ ಬಂದು ಕಾರ್ಯಕರ್ತರ ಅಹವಾಲು ಸ್ವೀಕರಿಸಬೇಕು ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಈ ಹಿಂದೆ ನಿರ್ದೇಶನ ನೀಡಿದ್ದರು. ಆದರೆ, ಈ ಸೂಚನೆ ಮೂಲ ಬಿಜೆಪಿಗರಲ್ಲಿ ಸಚಿವರಾದ ಕೆಲವರು ಮಾತ್ರ ಪಾಲನೆ ಮಾಡುತ್ತಿದ್ದು, ಇನ್ನು ಕೆಲವರು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಬಿಜೆಪಿ ಕಾರ್ಯಕರ್ತರೇ ಆರೋಪಿಸುತ್ತಿದ್ದಾರೆ.
* ರಾಜು ಖಾರ್ವಿ ಕೊಡೇರಿ