Advertisement

Health Department ಫೀವರ್‌ ಸರ್ವೇ: ಕರಾವಳಿಯಲ್ಲಿ ಇಳಿಕೆ ಕಂಡ ಇಲಿಜ್ವರ

11:31 PM Sep 03, 2023 | Team Udayavani |

ಮಂಗಳೂರು: ಕರಾವಳಿ ಭಾಗದಲ್ಲಿ ಕಳೆದ ವರ್ಷ ಭೀತಿ ಹುಟ್ಟಿಸಿದ್ದ ಇಲಿಜ್ವರ ಈ ವರ್ಷ ಕಡಿಮೆಯಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಉಲ್ಬಣಗೊಳ್ಳುವ ಇಲಿಜ್ವರ ಸದ್ಯ ಹೆಚ್ಚಾಗಿಲ್ಲದಿದ್ದರೂ ಎಚ್ಚರಿಕೆ ಅಗತ್ಯ.

Advertisement

ಜನವರಿಯಿಂದ ಈವರೆಗೆ ದಕ್ಷಿಣ ಕನ್ನಡದಲ್ಲಿ 127 ಪ್ರಕರಣ ಮತ್ತು ಉಡುಪಿ ಜಿಲ್ಲೆಯಲ್ಲಿ 49 ಪ್ರಕರಣಗಳು ದಾಖಲಾಗಿವೆ. ದ.ಕ.ದಲ್ಲಿ ಇಲಿ ಜ್ವರದಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಉಡುಪಿಯಲ್ಲಿ ಸಾವಿನ ವರದಿ ಇಲ್ಲ. ಇಲಿಜ್ವರ ತಡೆಯಲು ಆರೋಗ್ಯ ಇಲಾಖೆಯಿಂದ ಫೀವರ್‌ ಸರ್ವೇ ನಡೆಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು, ಆರೋಗ್ಯ ಸುರಕ್ಷೆ ಅಧಿಕಾರಿಗಳು ಮತ್ತು ಪಾಲಿಕೆ ವ್ಯಾಪ್ತಿಯಲ್ಲಿ ಎಂಪಿಡಬ್ಲ್ಯೂ ಕಾರ್ಯಕರ್ತರು ಮನೆ ಮನೆ ಭೇಟಿ ನೀಡಿ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಮನೆ ಮಂದಿಗೆ ಮಾಹಿತಿ ನೀಡುತ್ತಿದ್ದಾರೆ.

ಯಾರಲ್ಲಾದರೂ ಜ್ವರದ ಲಕ್ಷಣವಿದ್ದರೆ ಕೂಡಲೇ ತಪಾಸಣೆ ನಡೆಸುವಂತೆ ತಿಳಿಸುತ್ತಾರೆ ಮತ್ತು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಮಾಹಿತಿ ನೀಡುತ್ತಾರೆ.

ರೋಗ ಹರಡುವುದು ಹೇಗೆ?
ಇಲಿ, ಹೆಗ್ಗಣಗಳ ಮೂತ್ರದ ಮೂಲಕ ಮನುಷ್ಯನಿಗೆ ಈ ಸೋಂಕು ತಗಲುತ್ತದೆ. ಹಾಗಂತ ಮನುಷ್ಯನಿಂದ ಮನುಷ್ಯನಿಗೆ ಹರಡುವುದಿಲ್ಲ. ಜ್ವರ ಹರಡುವ ಬ್ಯಾಕ್ಟೀರಿಯ ಪ್ರಾಣಿಗಳ, ಮೂತ್ರ ಮತ್ತು ಮಲದಲ್ಲಿ ಇರುತ್ತದೆ. ಮಕ್ಕಳನ್ನು ನೀರಿನಲ್ಲಿ ಆಟವಾಡಲು ಬಿಡುವುದು ಅಪಾಯಕಾರಿ. ಸಾಮಾನ್ಯವಾಗಿ ಈ ಜ್ವರ ಕಡಿಮೆಯಾಗುತ್ತದೆ. ಶೇ. 20ರಷ್ಟು ಪ್ರಕರಣಗಳಲ್ಲಿ ಮಾತ್ರ ಜ್ವರ ತೀವ್ರವಾಗಿ ಬಹು ಅಂಗಾಂಗ ವೈಫಲ್ಯಕ್ಕೆ ಕಾರಣವಾಗುತ್ತದೆ.

ಮುನ್ನೆಚ್ಚರಿಕೆ ಅಗತ್ಯ
ಇಲಿಜ್ವರ ಹರಡದಂತೆ ಮುನ್ನೆಚ್ಚರಿಕೆ ಅತೀ ಅವಶ್ಯ. ಈ ಜ್ವರದಲ್ಲಿ ಮೈಕೈ ನೋವು ಹೆಚ್ಚಾಗಿ ಇರುತ್ತದೆ. ವಾಕರಿಗೆ, ವಾಂತಿ, ಗ್ರಂಥಿಗಳು ಊದಿಕೊಳ್ಳುವುದು, ಕೆಲವೊಮ್ಮೆ ಮೈಯಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಇಲಿ ಪರಚಿ ಅಥವಾ ಕಚ್ಚಿ ಗಾಯವಾಗಿದ್ದರೆ ಆ ಜಾಗವನ್ನು ಸಾಬೂನು ಹಾಕಿ ತೊಳೆದುಕೊಳ್ಳಬೇಕು. ಮನೆ ಪಕ್ಕದಲ್ಲಿ ಇಲಿಗಳ ವಾಸಕ್ಕೆ ಅವಕಾಶ ನೀಡಬಾರದು. ಮನೆಯ ಪಕ್ಕದಲ್ಲಿ ಕಸದ ರಾಶಿ ಇರದಂತೆ ನೋಡಿಕೊಳ್ಳಬೇಕು. ಆಹಾರಪದಾರ್ಥಗಳನ್ನು ಮುಚ್ಚಿಡುವ ಮೂಲಕ ಈ ರೋಗ ಬರುವುದನ್ನು ತಪ್ಪಿಸಲು ಸಾಧ್ಯವಿದೆ.

Advertisement

ಕರಾವಳಿಯಲ್ಲಿ ಡೆಂಗ್ಯೂ ಉಲ್ಬಣ
ಉಡುಪಿ: ಇದೇ ವೇಳೆ ಹವಾಮಾನ ವೈಪರೀತ್ಯದ ಪರಿಣಾಮ ಉಡುಪಿ ಜಿಲ್ಲೆ ಯಲ್ಲಿ ಡೆಂಗ್ಯೂ ಸಹಿತ ಸಾಂಕ್ರಾಮಿಕ ಕಾಯಿಲೆಗಳು ಹೆಚ್ಚುತ್ತಿವೆ. ಉಡುಪಿ ಜಿಲ್ಲೆ ಯಲ್ಲಿ ಜುಲೈಯಲ್ಲಿ 85 ಇದ್ದ ಪ್ರಕರಣ ಆಗಸ್ಟ್‌ ಅಂತ್ಯಕ್ಕೆ 140ಕ್ಕೆ ಏರಿಕೆ ಕಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ ಅಂತ್ಯಕ್ಕೆ 134 ಇದ್ದ ಪ್ರಕರಣ ಆಗಸ್ಟ್‌ ಅಂತ್ಯಕ್ಕೆ 158ಕ್ಕೆ ಏರಿಕೆಯಾ ಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇಲಿಜ್ವರ ತಡೆಯಲು ಆರೋಗ್ಯ ಇಲಾಖೆಯಿಂದ ವಿಶೇಷ ನಿಗಾ ಇರಿಸಲಾಗಿದೆ. ನಿರಂತರ ಜನಜಾಗೃತಿ, ಮನೆಮನೆ ಭೇಟಿ ನೀಡಿ, ಫೀವರ್‌ ಸರ್ವೇ ನಡೆಸಲಾಗುತ್ತಿದೆ. ಜ್ವರ ಲಕ್ಷಣ ಇದ್ದರೆ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಯಾವುದೇ ಜ್ವರ ಇದ್ದರೂ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು.
– ಡಾ| ನವೀನ್‌ಚಂದ್ರ ಕುಲಾಲ್‌, ಡಾ| ಪ್ರಶಾಂತ್‌ ಭಟ್‌
ಆರೋಗ್ಯ ಇಲಾಖೆ ಅಧಿಕಾರಿಗಳು ದ.ಕ., ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next