ಸಕಲೇಶಪುರ: ದೇವಸ್ಥಾನದ ಜಾಗಕ್ಕೆ ಖಾಸಗಿ ವ್ಯಕ್ತಿಯೊಬ್ಬರು ಬೇಲಿ ಹಾಕಿದ್ದು, ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪಟ್ಟಣದ ಬಾಳೆಗದ್ದೆ ಬಡಾವಣೆಯ ಗುಹೆಕಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಸಮಿತಿ ವಶದಲ್ಲಿದ್ದ ಜಾಗ, ತಮಗೆ ಸೇರಿದೆ ಎಂದು ವ್ಯಕ್ತಿಯೊಬ್ಬರು ವಾರದ ಹಿಂದೆ ಬೇಲಿ ಹಾಕಿದ್ದರು.
ಇದರಿಂದ ದೇಗುಲದ ಕಾರ್ಯಗಳಿಗೆ ತೊಂದರೆ ಯಾಗಿತ್ತು. ಈ ಹಿನ್ನೆಲೆಯಲ್ಲಿ ದೇವ ಸ್ಥಾನದ ಅಭಿವೃದ್ಧಿ ಮಂಡಳಿಯ ಸದಸ್ಯರು ಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದರು. ಪಿಎಸ್‌ಐ ರಾಘವೇಂದ್ರ, ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಬೇಲಿ ಹಾಕಿದ ಖಾಸಗಿ ವ್ಯಕ್ತಿಯನ್ನು ಠಾಣೆಗೆ ಕರೆಸಿದ್ದರು.
ಈ ಸಂದರ್ಭದಲ್ಲಿ ದಾಖಲೆ ಪರಿಶೀಲಿಸಿದಾಗ ಸರ್ವೇ ನಂ. 337 ಮಳಲಿಯಲ್ಲಿ 15 ಗುಂಟೆ ಜಾಗ ಪುರಸಭೆಗೆ ಸೇರಿದೆ ಎಂದು ಪಹಣಿಯಲ್ಲಿ ದಾಖಲಾಗಿದೆ. ಪುರಸಭೆಯಿಂದ ಖಾಸಗಿ ವ್ಯಕ್ತಿಯೊಬ್ಬರಿಗೆ ದಾಖಲೆ ಮಾಡಿಕೊಡ ಲಾಗಿದೆ. ಆದರೆ, ಕಂದಾಯ ಇಲಾಖೆಗೆ ಸೇರಿದ ಹಳೇಯ ಪಹಣಿಯನ್ನು ಪರಿಶೀಲಿಸಿದಾಗ ಗುಹೆಕಲ್ಲಮ್ಮನ ಹಿತ್ತಲು 15 ಗುಂಟೆ ಹಾಗೂ 1 ಗುಂಟೆ ಖರಾಬು ಎಂದು ತೋರಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಪಿಎಸ್‌ಐ ರಾಘವೇಂದ್ರ ಬೇಲಿ ಹಾಕಿ ಕೊಂಡ ವೈಲೇಶ್‌ಗೆ ಸದರಿ ಜಾಗವನ್ನು ಪುರಸಭೆ ಕಂದಾಯ ಇಲಾಖೆಯಿಂದ ವಶ ಪಡಿಸಿಕೊಂಡಿರುವ ಬಗ್ಗೆ ದಾಖಲಾತಿ ನೀಡಿ ಅಲ್ಲಿಯವರೆಗೆ ಬೇಲಿ ತೆರವು ಗೊಳಿಸಿ ಇಲ್ಲದಿದ್ದಲ್ಲಿ ದೇವಸ್ಥಾನದ ಕಾರ್ಯ ಕ್ರಮಕ್ಕೆ ಅಡ್ಡಿಯುಂಟಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದು, ನಂತರ ಹಾಕಿದ ಬೇಲಿ ತೆಗೆಯಲು ಒಪ್ಪಿಕೊಂಡಿ ದ್ದಾರೆ.
ಈ ವೇಳೆ ಮಾತನಾಡಿರುವ ಗುಹೆಕಲ್ಲಮ್ಮ ದೇಗುಲ ಸಮಿತಿ ಅಧ್ಯಕ್ಷ ರಂಗನಾಥ್, ಯಾವುದೇ ಕಾರಣಕ್ಕೂ ದೇವಸ್ಥಾನದ ಜಾಗವನ್ನು ಬಿಟ್ಟು ಕೊಡುವುದಿಲ್ಲ. ಈಗ ಬೇಲಿ ಹಾಕಿರು ವುದರಿಂದ ತೊಂದರೆಯಾಗಿದೆ. ತೆರವು ಗೊಳಿಸಬೇಕು ಎಂದು ಒತ್ತಾಯಿಸಿದರು.