ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಆಹಾರ ಸಿಗದಂತಹ ಪ್ರದೇಶದಲ್ಲಿ ಆಹಾರ ಕಲ್ಪಿಸುವ ನಿಟ್ಟಿನಲ್ಲಿ ಪಾಲಿಕೆ ಪಶುಸಂಗೋಪನಾ ವಿಭಾಗ ಪ್ರಾಯೋಗಿಕವಾಗಿ ರೂಪಿಸಿದ್ದ “ಆಹಾರ ನೀಡುವ ಸ್ಥಳ’ ಯೋಜನೆ ಯಶಸ್ವಿಯಾಗಿದೆ.
ಆಹಾರವಿಲ್ಲದೆ ಅಲ್ಲಲ್ಲಿ ಅಲೆದಾಟ ನಡೆಸುತ್ತಿದ್ದ ಬೀದಿ ನಾಯಿಗಳಿಗೆ ಹೋಟೆಲ್ ಉದ್ಯಮಿಗಳು ಕೂಡ ಹೋಟೆಲ್‌ನಲ್ಲಿ ಹಾಗೆಯೇ ಉಳಿಯುವ ಆಹಾರ ನೀಡಲು ಮುಂದಾಗಿದ್ದು, ಈ ಯೋಜನೆ ಪ್ರಾಣಿಪ್ರಿಯರ ಪ್ರಶಂಸೆಗೆ ಪಾತ್ರವಾಗಿದೆ.
ಈ ಹಿನ್ನೆಲೆಯಲ್ಲಿ ಪಾಲಿಕೆಗೆ ಇದೀಗ ಮತ್ತಷ್ಟು ತಾಣಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಿದೆ. ಬಿಬಿಎಂಪಿಯ ಎಂಟೂ ವಲಯಗಳ 135 ತಾಣಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಲಾಗುತ್ತಿದೆ. ಪ್ರಾಯೋಗಿಕ ಕಾರ್ಯ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ರಾಜಧಾನಿ ವ್ಯಾಪ್ತಿಯ 5 ಸಾವಿರ ತಾಣಗಳಿಗೆ ವಿಸ್ತರಿಸುವ ಗುರಿ ಹೊಂದಿದೆ. ಪೌರ ಕಾರ್ಮಿಕರ ಸಹಾಯದಲ್ಲಿ ಬಿಬಿಎಂಪಿ ಪಶುಸಂಗೋಪನಾ ವಿಭಾಗದ ವಲಯ ಸಹಾಯಕ ನಿರ್ದೇಶಕರು ಮೇಲ್ವಿಚಾರಣೆಯಲ್ಲಿ ಕೆಲಸ ಸಾಗಿದೆ. ವಾರ್ಡ್ ಮಟ್ಟದಲ್ಲಿ ಅನೇಕ ಪ್ರದೇಶಗಳನ್ನು ಗೊತ್ತುಪಡಿಸುವ ಮೂಲಕ ಫೀಡಿಂಗ್ ಸ್ಪಾಟ್ ಗಳ ಸಂಖ್ಯೆಯನ್ನು ಹೆಚ್ಚಿಸಲು ಬಿಬಿಎಂಪಿ ಆಲೋಚಿಸಿದೆ. ಪ್ರಸ್ತುತ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಪ್ರದೇಶಗಳಲ್ಲಿ ಬೀದಿ ನಾಯಿಗಳು ಆಹಾರ ನೀಡಲಾಗುತ್ತಿದೆ. ಪ್ರತಿ ವಾರ್ಡ್‌ನಲ್ಲಿ 5 ಸ್ಥಾನಗಳನ್ನು ಹೊಂದುವುದು ಮುಂದಿನ ಗುರಿಯಾಗಿದೆ. ಶೀಘ್ರದಲ್ಲಿ 5 ಸಾವಿರ ಫೀಡಿಂಗ್ ಸ್ಪಾಟ್‌ಗಳನ್ನು ತೆರೆಯುವ ಚಿಂತನೆ ನಡೆಸಲಾಗಿದೆ ಎಂದು ಪಾಲಿಕೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೀದಿನಾಯಿಗಳ ಹಸಿವನ್ನು ತಗ್ಗಿಸುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲಿಕರು ಈ ಕಾರ್ಯಕ್ರಮ ಯಶಸ್ವಿಗೆ ಕೈ ಜೋಡಿಸಿದ್ದಾರೆ. ಕೇವಲ ಒಂದು ತಿಂಗಳ ಅವಧಿಯಲ್ಲಿ, ನಗರಾದ್ಯಂತ 100ಕ್ಕೂ ಹೆಚ್ಚು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್ ಗಳು ಬೀದಿ ನಾಯಿಗಳಿಗೆ ಆಹಾರ ನೀಡುವಲ್ಲಿ ಕೈ ಜೋಡಿಸಿವೆ ಎಂದು ಎಂದು ಪಾಲಿಕೆ ಪಶುಸಂಗೋಪನಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. 10 ಸಾವಿರ ಫೀಡಿಂಗ್ ಸ್ಪಾಟ್ ಗುರಿ: ಬೀದಿ ನಾಯಿಗಳಿಗೆ ಆಹಾರ ನೀಡುವ ನಿಟ್ಟಿನಲ್ಲಿ ಹೋಟೆಲ್ ಉದ್ಯಮದವರು ಮತ್ತು ಸಂಘ, ಸಂಸ್ಥೆಗಳು ಕೈಜೋಡಿಸುತ್ತಿರುವುದರಿಂದ ನಮಗೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆಗಳು ಬರುತ್ತಿವೆ. ಹಂತ-ಹಂತವಾಗಿ ಆಹಾರ ತಾಣಗಳನ್ನು ವಿಸ್ತರಿಸುವ ಕೆಲಸ ನಡೆಯಲಿದೆ. ಮುಂದಿನ ದಿನಗಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಹತ್ತು ಸಾವಿರ ಫೀಡಿಂಗ್ ಸ್ಪಾಟ್ ಸ್ಥಾಪನೆ ಮಾಡುವ ಗುರಿ ಹೊಂದಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆ ಏಕೆ?: ಬಿಬಿಎಂಪಿ ವ್ಯಾಪ್ತಿಯಲ್ಲಿ 2.70 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳಿವೆ. ಬೀದಿ ನಾಯಿಗಳ ದಾಳಿಯನ್ನು ತಡೆಯಬೇಕಿದೆ. ಈ ಬಗ್ಗೆ ಪಶು ವೈದ್ಯರು, ಪರಿಣಿತ ತಜ್ಞರು, ಪ್ರಾಣಿ ಪ್ರಿಯ ಸ್ವಯಂಸೇವಕರು ಬಳಿ ಚರ್ಚೆ ನಡೆಸಿದಾಗ ಬೀದಿ ನಾಯಿಗಳಿಗೆ ಆಹಾರ ಸರಿಯಾಗಿ ಸಿಗದಿರುವ ಪರಿಣಾಮ ಕಚ್ಚುವ ಹಾಗೂ ಉದ್ರೇಕಗೊಳ್ಳುವ ಘಟನೆಗಳು ನಡೆಯುತ್ತಿವೆ ಎಂಬುದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಬೀದಿ ನಾಯಿಗಳಿಗೆ ಆಹಾರ ಸಿಗುವಂತಾಗಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದಿದ್ದಾರೆ.
ನಾಯಿಗಳಿಗೆ ಆಹಾರ ನೀಡುವುದು ಹೇಗೆ?: ಬಿಬಿಎಂಪಿ ವ್ಯಾಪ್ತಿಯಲ್ಲಿ 28 ವಿಧಾನಸಭಾ ಕ್ಷೇತ್ರಗಳು ಇವೆ. ಆರಂಭಿಕ ಹಂತದಲ್ಲಿ ಕೇವಲ 10 ಸ್ಥಳಗಳಲ್ಲಿ ಮಾತ್ರ ಆರಂಭಿಸಲಾಗಿತ್ತು. ಈಗ 135 ಫೀಡಿಂಗ್ ಸ್ಪಾಟ್ ಗಳಿಗೆ ವಿಸ್ತರಣೆ ಮಾಡಲಾಗಿದೆ. ಕೆಲವು ಹೋಟೆಲ್‌ಗಳು ಪ್ರಾಣಿಗಳಿಗೆ ಬೇಯಿಸಿದ ಅಕ್ಕಿ ಮತ್ತು ಕೋಳಿಮಾಂಸವನ್ನು ಸಹ ನೀಡುತ್ತಿವೆ. ಈ ಅಭಿಯಾನದ ಅಡಿಯಲ್ಲಿ ಎಂಟೂ ವಲಯಗಳಲ್ಲಿ ಬೀದಿ ನಾಯಿಗಳಿಗೆ ರುಚಿಕರವಾದ ಊಟವನ್ನು ನೀಡಲಾಗುತ್ತದೆ. ಹೋಟೆಲ್‌ಗಳಿಂದ ಆಹಾರವನ್ನು ಬಿಬಿಎಂಪಿ ಮಾರ್ಷಲ್ ಗಳು ಸಂಗ್ರಹಿಸುತ್ತಾರೆ. ಮಾರ್ಷಲ್‌ಗಳ ನಂತರ ಪ್ರಾಣಿಗಳಿಗೆ ಆಹಾರ ನೀಡುವ ಪೌರಕಾರ್ಮಿಕರಿಗೆ ಹಸ್ತಾಂತರ ಮಾಡುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೋಟೆಲ್‌ಗಳಲ್ಲಿ ಕೆಲವು ಸಲ ಆಹಾರ ಹಾಳಾಗುವ ಪರಿಸ್ಥಿತಿ ಇರುತ್ತದೆ. ಇಂತಹ ಆಹಾರವನ್ನು ಬೀದಿ ಬೀದಿ ಅಲೆಯುವ ನಾಯಿಗಳಿಗೆ ನೀಡಿದರೆ ಅವುಗಳ ಹಸಿವು ಕೂಡ ನೀಗುತ್ತದೆ.
-ಚಂದ್ರಶೇಖರ್ ಹೆಬ್ಬಾರ್, ರಾಜ್ಯ ಹೋಟೆಲ್‌ಗಳ ಸಂಘದ ಗೌರವಾಧ್ಯಕ್ಷ
-ದೇವೇಶ ಸೂರಗುಪ್ಪ