Advertisement

ಫೆ. 2ಕ್ಕೆ 8 ಸಿನಿಮಾ ಬಿಡುಗಡೆ

11:39 AM Jan 29, 2018 | |

ಜನವರಿಯಲ್ಲಿ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಲಿದ್ದು, ಹೊಸ ವರ್ಷದ ಆರಂಭದಲ್ಲೇ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲಿದೆ ಎಂದೇ ನಂಬಲಾಗಿತ್ತು. ಅದಕ್ಕೆ ಸರಿಯಾಗಿ ಅನೇಕ ಚಿತ್ರಗಳು ಆರಂಭದಲ್ಲಿ ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿದ್ದವು ಕೂಡಾ. ಆದರೆ, ಕೊನೆಯ ಕ್ಷಣದಲ್ಲಿ ಅವೆಲ್ಲವೂ ತಮ್ಮ ಬಿಡುಗಡೆಯನ್ನು ಮುಂದಕ್ಕೆ ಹಾಕಿವೆ. ಅದಕ್ಕೆ ಕಾರಣ ಹಲವು.

Advertisement

ಕೆಲವರಿಗೆ ಥಿಯೇಟರ್‌ ಸಮಸ್ಯೆ ಎದುರಾದರೆ, ಇನ್ನು ಕೆಲವರು ಪರಭಾಷೆಯ ದೊಡ್ಡ ಚಿತ್ರಗಳ ಮುಂದೆ ಪೈಪೋಟಿ ಅಸಾಧ್ಯ ಎಂದು ಮುಂದೆ ಹೋಗಿದ್ದರು. ಪರಿಣಾಮವಾಗಿ ಜನವರಿಯಲ್ಲಿ ಬಿಡುಗಡೆಯಾಗಿರುವ ಚಿತ್ರಗಳನ್ನು ಲೆಕ್ಕ ಹಾಕಿದರೆ ಸಿಗೋದು ಕೇವಲ 12 ಅಷ್ಟೇ. ಮೊದಲ ವಾರ 4, ಎರಡನೇ ವಾರ 2, ಮೂರನೇ ಹಾಗೂ ನಾಲ್ಕನೇ ವಾರ ತಲಾ 4  ಚಿತ್ರಗಳು ಬಿಡುಗಡೆಯಾಗಿವೆ.

ಹಾಗೆ ನೋಡಿದರೆ ಜನವರಿಯಲ್ಲಿ ಬಿರುಸಿನ ಬಿಡುಗಡೆ ಅಥವಾ ವಾರಕ್ಕೆ ಐದಾರು ಚಿತ್ರಗಳು ಬಿಡುಗಡೆಯಾಗಿದ್ದೇ ಇಲ್ಲ. ಆದರೆ, ಫೆಬ್ರವರಿ ಮೊದಲ ವಾರ ಇದಕ್ಕೆ ತದ್ವಿರುದ್ಧವಾಗಿದೆ. ಮೊದಲ ವಾರದಲ್ಲೇ ಸಿನಿಮಾ ಬಿಡುಗಡೆಯ ಭರಾಟೆ ಜೋರಾಗಿದೆ. ಫೆ. 2 ರಂದು ಬರೋಬ್ಬರಿ ಎಂಟು ಕನ್ನಡ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಈ ಮೂಲಕ ಫೆಬ್ರವರಿಯ ಸಿನಿಹಬ್ಬ ನಡೆಯಲಿದೆ ಎಂದರೂ ತಪ್ಪಲ್ಲ. 

ಈಗಾಗಲೇ “ಜವ’, “ಮಂಜರಿ’, “ಮಳೆಗಾಲ’, “ದೇವ್ರಂಥ ಮನುಷ್ಯ’, “ಸಂಜೀವ’, “ಆ ಒಂದು ದಿನ’, “ರಾಜಾಸಿಂಹ’ ಹಾಗೂ “ಜಂತರ್‌ ಮಂತರ್‌’ ಚಿತ್ರಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಈ ಎಂಟು ಸಿನಿಮಾಗಳಲ್ಲಿ ಬೇರೆ ಬೇರೆ ವರ್ಗಗಳಿಗೆ ಸೇರಿದ ಚಿತ್ರಗಳಿರೋದು ವಿಶೇಷ.

ಅಭಯ್‌ ಚಂದ್ರ ನಿರ್ದೇಶನದ “ಜವ’ ಒಂದು ಹೊಸ ಪ್ರಯೋಗದ ಚಿತ್ರವಾದರೆ, ರೂಪಿಕಾ ಮುಖ್ಯಭೂಮಿಕೆಯಲ್ಲಿರುವ “ಮಂಜರಿ’ ಚಿತ್ರ ಹಾರರ್‌ ಸಿನಿಮಾವಾಗಿದೆ. ಇನ್ನು ಹೊಸಬರ “ಮಳೆಗಾಲ’ ಹಾಗೂ “ಸಂಜೀವ’ ಚಿತ್ರಗಳು ಪಕ್ಕಾ ಲವ್‌ಸ್ಟೋರಿಯಾಗಿವೆ. ಪ್ರಥಮ್‌ ನಟಿಸಿರುವ “ದೇವ್ರಂಥ ಮನುಷ್ಯ’ ಹಾಗೂ ಕಾಮಿಡಿ ಕಿಲಾಡಿಗಳ ತಂಡ ಸೇರಿಕೊಂಡು ಮಾಡಿರುವ “ಜಂತರ್‌ ಮಂತರ್‌’ ಚಿತ್ರಗಳು ಕಾಮಿಡಿ ಜಾನರ್‌ಗೆ ಸೇರಿವೆ.

Advertisement

ಅನಿರುದ್ಧ್ ಅವರ “ರಾಜಾಸಿಂಹ’ ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌ ಚಿತ್ರವಾದರೆ, “ಆ ಒಂದು ದಿನ’ ಚಿತ್ರದಲ್ಲಿ ಸಮಾಜದ ಪಿಡುಗುಗಳ ಬಗ್ಗೆ ಹೇಳಲಾಗಿದೆ. ಹಾಗಾಗಿ, ಎಂಟು ಸಿನಿಮಾಗಳಲ್ಲಿ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಬೇಕಾದ ಸಿನಿಮಾಗಳಿರೋದಂತೂ ಸತ್ಯ. ಆದರೆ, ಹೇಗಿವೆ ಎಂಬುದನ್ನು ಮಾತ್ರ ಚಿತ್ರಮಂದಿರದಲ್ಲೇ ನೋಡಬೇಕು.

ಸಿನಿಟ್ರಾಫಿಕ್‌ಗೆ ಕಾರಣವೇನು?: ಸಹಜವಾಗಿಯೇ ಒಂದು ಪ್ರಶ್ನೆ ಬರುತ್ತದೆ. ಜನವರಿಯಲ್ಲಿ ಇಲ್ಲದ ಬಿಡುಗಡೆಯ ಭರಾಟೆ ಫೆಬ್ರವರಿ ಮೊದಲ ವಾರದಲ್ಲಿ ಯಾಕೆ ಎಂಬ ಪ್ರಶ್ನೆಗೆ ಉತ್ತರ ಸದ್ಯ ಯಾವುದೇ ದೊಡ್ಡ ಸಿನಿಮಾ ಇಲ್ಲದಿರೋದು. ಹೌದು, ಈಗಾಗಲೇ ಪರಭಾಷೆಯ ಒಂದಷ್ಟು ಚಿತ್ರಗಳು ಬಿಡುಗಡೆಯಾಗಿವೆ. ಹಿಂದಿಯ “ಪದ್ಮಾವತ್‌’ಗಾಗಿ ಅನೇಕರು ತಮ್ಮ ಚಿತ್ರಗಳ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದರು.

ಈಗ “ಪದ್ಮಾವತ್‌’ ಕೂಡಾ ಬಿಡುಗಡೆಯಾಗಿದೆ. ಕನ್ನಡದಲ್ಲೂ “ರಾಜು ಕನ್ನಡ ಮೀಡಿಯಂ’, “ಕನಕ’ ಸೇರಿದಂತೆ ಒಂದಷ್ಟು ಚಿತ್ರಗಳು ಬಿಡುಗಡೆಯಾಗಿವೆ. ಸದ್ಯ ದೊಡ್ಡ ಸ್ಟಾರ್‌ಗಳ ಯಾವುದೇ ಸಿನಿಮಾವಿಲ್ಲ ಎಂಬುದು ಒಂದು ಕಾರಣವಾದರೆ, ಮುಂದೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಸ್ಟಾರ್‌ ಸಿನಿಮಾವೊಂದು ಬಿಡುಗಡೆಯಾಗಲಿದೆ ಎಂಬುದು ಮತ್ತೂಂದು ಕಾರಣ. ಹೌದು, ಶಿವರಾಜಕುಮಾರ್‌ ಅವರ “ಟಗರು’ ಚಿತ್ರ ಸದ್ಯ ಬಹುನಿರೀಕ್ಷೆಯ ಸ್ಟಾರ್‌ ಸಿನಿಮಾ.

ಈಗಾಗಲೇ ಟ್ರೇಲರ್‌, ಹಾಡುಗಳ ಮೂಲಕ ಕ್ರೇಜ್‌ ಹುಟ್ಟಿಸಿರುವ ಈ ಚಿತ್ರ ಫೆ.23 ರಂದು ಬಿಡುಗಡೆಯಾಗುತ್ತದೆ ಎನ್ನಲಾಗಿದೆ. ಈ ಕಾರಣದಿಂದಲೂ ಆ ಚಿತ್ರ ಬರುವ ಮುನ್ನ ತಮ್ಮ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಜೊತೆಗೆ ಫೆ.9 ರಂದು “ಸಂಹಾರ’, “ಪ್ರೇಮ ಬರಹ’ ಸೇರಿದಂತೆ ಇನ್ನೂ ಕೆಲವು ಚಿತ್ರಗಳು ಬಿಡುಗಡೆಯಾಗಲಿವೆ. ಹಾಗಾಗಿ, ಹೊಸಬರು ಫೆಬ್ರವರಿ ಮೊದಲ ವಾರವನ್ನು ನಂಬಿಕೊಂಡು, ಬಿಡುಗಡೆ ಮಾಡುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next