Advertisement

ನಗರದ ತೋಡಿನಲ್ಲಿ ಒಳಚರಂಡಿ ನೀರು!

11:17 AM Nov 25, 2018 | |

ಮಹಾನಗರ: ನಗರದ ಅನೇಕ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಅಸಮರ್ಪಕವಾಗಿದ್ದು, ಸಣ್ಣ ಮಳೆ ಬಂದರೂ ರಸ್ತೆ ಮೇಲೆ ಕೃತಕ ನೆರೆ ಬಂದು ಅವಾಂತರ ಸೃಷ್ಟಿಸುವುದು ಸಾಮಾನ್ಯವಾಗಿದೆ. ಅದೇ ರೀತಿ ಕೊಟ್ಟಾರ ಚೌಕಿ ಬಳಿಯ ಸಂಕೇಶ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಹಾನಗರ ಪಾಲಿಕೆಯ ಬೇಜವಾಬ್ದಾರಿತನದಿಂದ ಮಳೆ ನೀರು ಹರಿಯುವ ತೋಡಿನಲ್ಲಿ ಒಳಚರಂಡಿ ನೀರು ಹರಿಯುತ್ತಿದೆ. ಇದರಿಂದಾಗಿ ಸುತ್ತಮುತ್ತಲಿನ ಮನೆ ಮಂದಿ ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ.

Advertisement

ಸಂಕೇಶ, ಕೊಟ್ಟಾರ ಚೌಕಿ, ಅಬ್ಬಕ್ಕ ನಗರ, ದ್ವಾರಕಾ ನಗರ ಕಡೆಯಿಂದ ಬಂದು ಸಂಕೇಶ ಬಳಿ ಈ ಹಿಂದೆ ಇದ್ದಂತಹ ರೇಚಕ ಸ್ಥಾವರ ಬಳಿ ಹಾದುಹೋಗುವ ಒಳ ಚರಂಡಿ ವ್ಯವಸ್ಥೆಯ ವ್ಯಥೆ ಇದು. ಈ ಒಳಚರಂಡಿಯ ಪೈಪ್‌ಲೈನ್‌ ವ್ಯವಸ್ಥೆ ಕೆಲವು ತಿಂಗಳುಗಳ ಹಿಂದೆಯೇ ಕೆಟ್ಟು ಹೋಗಿದ್ದು, ಇದರಿಂದಾಗಿ ಒಳಚರಂಡಿ ಪೈಪ್‌ನಲ್ಲಿ ನೀರು ರಭಸದಿಂದ ಹರಿಯಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣದಿಂದಾಗಿ ಒಳಚರಂಡಿಯಲ್ಲಿ ಹರಿಯಬೇಕಾಗಿದ್ದ ನೀರು ಕಳೆದ ಕೆಲ ತಿಂಗಳುಗಳಿಂದ ತೋಡಿನಲ್ಲಿ ಹರಿಯುತ್ತಿದೆ.

ಸಾಂಕ್ರಾಮಿಕ ರೋಗದ ಭೀತಿ
ಸಂಕೇಶ, ಕೊಟ್ಟಾರ ಚೌಕಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ಜನವಸತಿ ಪ್ರದೇಶವಾಗಿದೆ. ಅಲ್ಲದೆ, ಸುತ್ತ ಶಾಲಾ-ಕಾಲೇಜುಗಳಿವೆ. ಮಳೆ ನೀರು ಹರಿಯುವ ತೆರೆದ ತೋಡಿನಲ್ಲಿ ಚರಂಡಿ ನೀರು ಹರಿಯುವುದರಿಂದ ಕಸ, ಕಡ್ಡಿಗಳಿಂದ ಅಲ್ಲಲ್ಲಿ ನೀರು ನಿಲ್ಲುತ್ತಿದೆ. ಕಲುಷಿತ ನೀರು ಸುತ್ತಮುತ್ತಲು ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗುತ್ತಿದೆ. ಸಂಜೆ ಯಾದರೆ ಸುತ್ತಲಿನ ಪ್ರದೇಶಗಳಲ್ಲಿ ಸೊಳ್ಳೆ ಕಾಟ ಹೆಚ್ಚಾಗುತ್ತಿದೆ.

ಬೇಸಗೆಯಲ್ಲೂ ನೀರಿತ್ತು!
ಬೇಸಗೆಯಲ್ಲಿ ಸಾಮಾನ್ಯವಾಗಿ ಮನೆ ಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತದೆ. ಆದರೆ ಕೊಟ್ಟಾರ ಚೌಕಿ, ಸಂಕೇಶ, ಸುತ್ತಲಿನ ಬಾವಿಗಳಲ್ಲಿ ಬೇಸಗೆಯಲ್ಲೂ ಅರ್ಧದಷ್ಟು ನೀರಿರುತ್ತದೆ. ಚರಂಡಿ ನೀರು ಅಕ್ಕ ಪಕ್ಕದ ತೋಡುಗಳಲ್ಲಿ ಹರಿಯುವುದರಿಂದ ಕುಡಿಯಲು ಯೋಗ್ಯವಿಲ್ಲ ಎಂಬುದು ಸ್ಥಳೀಯರ ಬೇಸರ.

ಬಾವಿ ನೀರಿನ ಬಣ್ಣ ಬದಲು
ತೋಡಿಗೆ ಚರಂಡಿ ನೀರು ಬಿಡಲು ಪ್ರಾರಂಭ ಮಾಡಿದಾಗಿನಿಂದ ಸುತ್ತಮುತ್ತಲಿನ ಹತ್ತಕ್ಕೂ ಹೆಚ್ಚು ಬಾವಿಗಳ ನೀರಿನ ಬಣ್ಣ ಬದಲಾಗಲು ಪ್ರಾರಂಭವಾಯಿತು. ಇಷ್ಟೇ ಅಲ್ಲ, ಬಾವಿಯಲ್ಲಿ ಹುಳ ಹುಪ್ಪಟೆಗಳು ಬಂದು ನೀರು ವಾಸನೆಗೆ ತಿರುಗಿತು. ಇದನ್ನು ಗಮನಿಸಿದ ಸ್ಥಳೀಯರು ಮಹಾನಗರ ಪಾಲಿಕೆಯ ಗಮನಕ್ಕೆ ತಂದಿದ್ದಾರೆ. ಆದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

Advertisement

ಸಮಸ್ಯೆ ಪರಿಹರಿಸಿ
ಮೂರು ವರ್ಷಗಳ ಹಿಂದೆ ಚರಂಡಿ ನೀರು ತೋಡಿಗೆ ಬಿಡಲಾಗಿತ್ತು. ಆ ಸಮಯದ ಮಹಾನಗರ ಪಾಲಿಕೆಗೆ ಒತ್ತಡ ತಂದು ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದೆವು. ಇದೀಗ ಕೆಲವು ತಿಂಗಳುಗಳಿಂದ ಮಳೆ ನೀರು ಹರಿಯುವ ತೋಡಿನಲ್ಲಿ ಚರಂಡಿ ನೀರು ಹರಿಯುತ್ತಿದ್ದು, ಅಕ್ಕಪಕ್ಕದವರು ಸಾಂಕ್ರಾಮಿಕ ರೋಗದ ಭೀತಿ ಎದುರಿಸುತ್ತಿದ್ದಾರೆ.
 - ಉಮೇಶ್‌ ಶೆಟ್ಟಿ, ಸ್ಥಳೀಯ ನಿವಾಸಿ

ತತ್‌ಕ್ಷಣ ಪರಿಹಾರ
ಒಳಚರಂಡಿಯಲ್ಲಿ ಹರಿಯುವ ಕಲುಷಿತ ನೀರು ಸಂಕೇಶ ಬಳಿಯ ಹಳೆಯ ವೆಟ್‌ವೆಲ್‌ ಬಳಿ ಇರುವ ತೋಡಿನಲ್ಲಿ ಹಾದುಹೋಗುವ ವಿಚಾರವನ್ನು ಸಂಬಂಧಪಟ್ಟ ಎಂಜಿನಿಯರ್‌ ಗಮನಕ್ಕೆ ತರುತ್ತೇನೆ. ತತ್‌ ಕ್ಷಣ ಸಮಸ್ಯೆ ಪರಿಹರಿಸಲು ಸೂಚಿಸುತ್ತೇನೆ.
-ಭಾಸ್ಕರ್‌ ಕೆ., ಮೇಯರ್‌

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next