Advertisement
ಇದನ್ನ ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ನರೇಗ ಯೋಜನೆಗೆ ಆಧಾರ್ ಕಾರ್ಡ್ ನೋಂದಣಿ ಮಾಡದ ಫಲಾನುಭವಿಗಳನ್ನೇ ರದ್ದುಪಡಿಸುವ ಎಚ್ಚರಿಕೆಯ ಸಂದೇಶವನ್ನು ರಾಜ್ಯ ಸರ್ಕಾರಕ್ಕೆ ರವಾನಿಸಿದೆ.
Related Articles
Advertisement
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ರಾಜ್ಯದಲ್ಲಿ 53.78 ಲಕ್ಷ ಜಾಬ್‌ಕಾರ್ಡ್‌ಗಳಿದ್ದು, ಅದರಲ್ಲಿ 1.38 ಕೋಟಿ ಫಲಾನುಭವಿಗಳಿದ್ದಾರೆ. ಈ ಪೈಕಿ 94.38 ಲಕ್ಷ, ಅಂದರೆ ಶೇ. 68.32ರಷ್ಟು ಫಲಾನುಭವಿಗಳು ಆಧಾರ್ ಸಂಖ್ಯೆ ಹೊಂದಿದ್ದು, 43.76 ಲಕ್ಷ ಫಲಾನುಭವಿಗಳಿಗೆ ಆಧಾರ್ ಸಂಖ್ಯೆ ಇಲ್ಲ.
ಉದ್ಯೋಗ ಖಾತರಿಯ ವೇತನವನ್ನು “ನೇರ ನಗದು ವರ್ಗಾವಣೆ’ (ಡಿಬಿಟಿ) ಮೂಲಕ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮೆ ಮಾಡುವ ವ್ಯವಸ್ಥೆ ಇದೆ. ಇದಕ್ಕೆ ಫಲಾನುಭವಿಯ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಿಸುವುದು ಕಡ್ಡಾಯಗೊಳಿಸಲಾಗಿದೆ. ಆದರೆ, 1.38 ಕೋಟಿ ಫಲಾನುಭವಿಗಳ ಪೈಕಿ 80.73 ಲಕ್ಷ ಮಂದಿ ಬ್ಯಾಂಕ್ ಖಾತೆಗೆ ಜೊತೆಗೆ ಆಧಾರ್ ಸಂಖ್ಯೆ ಹೊಂದಿದ್ದಾರೆ.
ರಾಜ್ಯದಲ್ಲಿ ಆಯಾ ಜಿಲ್ಲೆಯ ಒಟ್ಟು ಫಲಾನುಭವಿಗಳ ಪೈಕಿ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು 3.91 ಲಕ್ಷ, ಕೊಪ್ಪಳ 2.91 ಲಕ್ಷ, ಬಳ್ಳಾರಿ 2.54 ಲಕ್ಷ, ವಿಜಯಪುರ 2.36 ಲಕ್ಷ ಮತ್ತು ಚಿತ್ರದುರ್ಗ ಜಿಲ್ಲೆಯ 2.15 ಲಕ್ಷ ಫಲಾನುಭವಿಗಳಿಗೆ ಆಧಾರ್ ಸಂಖ್ಯೆ ಇಲ್ಲ. ಅದೇ ರೀತಿ ರಾಯಚೂರು ಜಿಲ್ಲೆ ಶೇ.94.07, ಉಡುಪಿ ಶೇ. 90.31, ಬೆಂಗಳೂರು ಗ್ರಾಮಾಂತರ ಶೇ.80.29, ಹಾಸನ ಶೇ. 76.52 ಮತ್ತು ಧಾರವಾಡ ಶೇ.76.44ರಂತೆ ಅತಿ ಹೆಚ್ಚು ಫಲಾನುಭವಿಗಳು ಆಧಾರ್ ಸಂಖ್ಯೆ ಹೊಂದಿದ್ದಾರೆ.
ವಿಶೇಷ ಶಿಬಿರಕ್ಕೆ ಕೇಂದ್ರದ ಸೂಚನೆ: ಎಲ್ಲ ಬಗೆಯ ಬ್ಯಾಂಕ್ ಖಾತೆದಾರರು 2017ರ ಡಿ.31ರೊಳಗೆ ತಮ್ಮ ಖಾತೆಯೊಂದಿಗೆ ಆಧಾರ್ ಸಂಖ್ಯೆ ಜೋಡಿಸಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯ ನಿರ್ದೇಶನ ಕೊಟ್ಟಿದೆ. ಆದರೆ, ಇಡೀ ದೇಶದಲ್ಲಿ 5 ಕೋಟಿ ಉದ್ಯೋಗ ಖಾತರಿ ಫಲಾನುಭವಿಗಳು ಆಧಾರ್ ಸಂಖ್ಯೆ ಜೋಡಣೆ ಮಾಡಿಲ್ಲ. ಅದರಲ್ಲಿ ಕರ್ನಾಟಕದ 44 ಲಕ್ಷ ಫಲಾನುಭವಿಗಳು ಸೇರಿದ್ದಾರೆ. ಇವರಿಗಾಗಿ ಜುಲೈ 25ರಿಂದ ಸೆ.10ರವರೆಗೆ ಗ್ರಾಮ ಪಂಚಾಯಿತಿ ಹಾಗೂ ಬ್ಲಾಕ್ ಮಟ್ಟದಲ್ಲಿ ವಿಶೇಷ ಶಿಬಿರಗಳನ್ನು ನಡೆಸಬೇಕು, ಶಿಬಿರದ ವಿವರಗಳನ್ನು ಜು.20ರೊಳಗೆ ಕೇಂದ್ರಕ್ಕೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿರುವ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ, ಈ ಅವಧಿಯಲ್ಲಿ ಧಾರ್ ಸಂಖ್ಯೆ ಜೋಡಣೆ ಮಾಡಿಕೊಳ್ಳದ ಫಲಾನುಭವಿಗಳ ಖಾತೆ ರದ್ದುಗೊಳ್ಳುವ ಸಾಧ್ಯತೆಯಿರುತ್ತದೆ ಎಂದು ಎಚ್ಚರಿಕೆ ನೀಡಿದೆ.
“ಆಧಾರ್ ಸಂಖ್ಯೆ ಇಲ್ಲದ ಉದ್ಯೋಗ ಖಾತರಿ ಫಲಾನುಭವಿಗಳಿಗಾಗಿ ವಿಶೇಷ ಶಿಬಿರಗಳನ್ನು ಹಮ್ಮಿಕೊಳ್ಳುವಂತೆ ಕೇಂದ್ರ ಸರ್ಕಾರದಿಂದ ಈಗಷ್ಟೇ ಮಾರ್ಗಸೂಚಿ ಬಂದಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಏನು ಮಾಡಬೇಕು ಆನ್ನುವುದರ ರೂಪುರೇಷೆಗಳನ್ನು ಒಂದೆರಡು ದಿನಗಳಲ್ಲಿ ತಯಾರಿಸಲಾಗುವುದು. ಶಿಬಿರದ ಅವಧಿಯಲ್ಲಿ ಎಲ್ಲ ಫಲಾನುಭವಿಗಳ ಆಧಾರ್ ಸಂಖ್ಯೆಯನ್ನು ಅವರ ಬ್ಯಾಂಕ್ ಖಾತೆಗಳಿಗೆ ಜೋಡಣೆ ಮಾಡಿಸಲಾಗುವುದು’.- ಉಪೇಂದ್ರ ಪ್ರತಾಪ್ ಸಿಂಗ್, ಆಯುಕ್ತರು, ಉದ್ಯೋಗ ಖಾತರಿ ಯೋಜನೆ. – ರಫೀಕ್ ಅಹ್ಮದ್