ಬೆಂಗಳೂರು: ಹಾನಗಲ್‌ನಲ್ಲೇ ಮುಖ್ಯಮಂತ್ರಿಯವರು ಠಿಕಾಣಿ ಹೂಡಿರುವುದು ಅವರಿಗೆ ಉಪ ಚುನಾವಣೆಯಲ್ಲಿ ಸೊಲಿನ ಭಯ ಬಂದಿರುವುದಕ್ಕೆ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ನುಡಿದಂತೆ ನಡೆದಿಲ್ಲ, ಹಿಂದೆಯೂ ಕೊಟ್ಟ ಮಾತು ಉಳಿಸಿಕೊಂಡಿಲ್ಲ.ಹೀಗಾಗಿ ಅವರಿಗೆ ಭಯ ಬಂದಿದೆ ಎಂದು ಹೇಳಿದರು.
ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಎರಡೂ ಕಡೆ ಜಯಗಳಿಸಲಿದೆ . ಆಡಳಿತಾರೂಢ ಬಿಜೆಪಿ ಎಷ್ಟೇ ಅಧಿಕಾರ ದುರುಪಯೋಗ, ಹಣ ಹಂಚಿಕೆ ಮಾಡಿದರೂ ಗೆಲುವು ನಮ್ಮದೇ ಎಂದು ಹೇಳಿದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ 72 ರೋಹಿಂಗ್ಯಾಗಳು : ಗಡಿಪಾರು ಮಾಡುವ ಯೋಜನೆ ಇಲ್ಲ
ವಿಧಾನಸೌಧಕ್ಕೆ ಬೀಗ ಹಾಕಿ ಇಡೀ ಮಂತ್ರಿ ಮಂಡಲ ಹಾನಗಲ್‌ನಲ್ಲಿ ಠಿಕಾಣಿ ಹೂಡಿದೆ. ವಿಧಾನಸೌಧದಲ್ಲಿ ಒಬ್ಬ ಮಂತ್ರಿಯೂ ಇಲ್ಲ. ಇಲಾಖೆಗಳ ಸಭೆಯೂ ಆಗುತ್ತಿಲ್ಲ. ರಾಜ್ಯದ ಜನರ ಕಷ್ಟಕ್ಕಿಂತ ಇವರಿಗೆ ಉಪಚುನಾವಣೆ ಮುಖ್ಯವಾಗಿದೆ ಎಂದು ತಿಳಿಸಿದರು.
ಬಿಜೆಪಿ ಈಗಾಗಲೇ ಗೆದ್ದಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಅಧಿಕಾರ ಇರುವುದಕ್ಕೆ ದೊಡ್ಡ ಮಾತುಗಳಾಡುತ್ತಿದ್ದಾರೆ. ನಾವು ಚಿಕ್ಕವರು, ಅವರ ಮಾತು ಕೇಳಿಸಿಕೊಳ್ಳುತ್ತೇವೆ ಎಂದು ವ್ಯಂಗ್ಯವಾಡಿದರು.