Advertisement

ಕೊಳಚೆ ನೀರು ನಿಂತು ಸಾಂಕ್ರಾಮಿಕ ರೋಗ ಭೀತಿ

10:35 PM May 17, 2020 | Sriram |

ಮಲ್ಪೆ: ಮಳೆಗಾಲ ಸಮೀಪಿಸುತ್ತಿದ್ದರೂ ನಗರಸಭೆ ನಗರದ ಚರಂಡಿಗಳಲ್ಲಿ ತುಂಬಿದ ಹೂಳುಗಳನ್ನು ತೆರವು ಗೊಳಿಸುವ ಕಾರ್ಯಕ್ಕೆ ಇನ್ನೂ ಮುಂದಾಗಿಲ್ಲ. ನಗರಸಭೆ ವ್ಯಾಪ್ತಿಯ ಮುಡುಬೆಟ್ಟು ವಾರ್ಡ್‌ ನಲ್ಲಿ ಹಲವು ಭಾಗಗಳ ರಸ್ತೆ ಬದಿಯ ಚರಂಡಿಯಲ್ಲಿ ಹೂಳು ತುಂಬಿಕೊಂಡಿದ್ದು, ಕೊಳಚೆ ನೀರು ಚರಂಡಿಯಲ್ಲಿ ನಿಂತು ಸಾಂಕ್ರಾಮಿಕ ರೋಗ ಭೀತಿಯಲ್ಲಿ ಜನರು ಕಾಲಕಳೆಯುತ್ತಿದ್ದಾರೆ.

Advertisement

ಈ ಬಗ್ಗೆ ಸಾಕಷ್ಟು ದೂರು ನೀಡಿದರೂ ಸಂಬಂಧಪಟ್ಟವರು ಮುಂದಾಗುತ್ತಿಲ್ಲ ಎಂಬ ಆರೋಪಗಳು ಈ ಭಾಗದ ಜನರಿಂದ ಕೇಳಿ ಬರುತ್ತಿವೆ. ಇನ್ನು ಮಳೆ ಬಂದರೆ ಚರಂಡಿಯ ನೀರು ರಸ್ತೆಯ ಮೇಲೆ ಹರಿಯಲು ಪ್ರಾರಂಭವಾಗಿ ಇನ್ನಷ್ಟು ಸಮಸ್ಯೆ ಉದ್ಭವಿಸುವ ಆತಂಕದಲ್ಲಿದ್ದಾರೆ. ಇದು ಪ್ರತೀ ವರ್ಷ ಮರುಕಳಿಸುವ ಸಮಸ್ಯೆಯಾಗಿದ್ದರೂ, ನಗರಸಭೆ ಮಾತ್ರ ಮಳೆಗಾಲಕ್ಕೂ ಮುನ್ನ ಮುನ್ನೆಚ್ಚರಿಕೆ ಕ್ರಮವಾಗಿ ಚರಂಡಿ ಸ್ವಚ್ಛಗೊಳಿಸಲು ಮುಂದಾಗದೆ ಕೋವಿಡ್-19 ನೆಪ ಒಡ್ಡುತ್ತಿದೆ ಎನ್ನಲಾಗುತ್ತಿದೆ.

ಚರಂಡಿಯಲ್ಲಿ ಕಸ, ಹೂಳು, ಕೊಳಚೆ
ವಾರ್ಡ್‌ನ ಚರಂಡಿಗಳು ಕಸ ಮತ್ತು ಹೂಳು ತುಂಬಿಕೊಂಡಿವೆ. ಕೆಲವು ಚರಂಡಿಗಳು ಕಸದ ತೊಟ್ಟಿಗಳಾಗಿದೆ. ಆದಿವುಡುಪಿ -ಮೂಡುಬೆಟ್ಟು ಮುಖ್ಯರಸ್ತೆಯ ಚರಂಡಿಯಲ್ಲಿ ಹೂಳು ತುಂಬಿ, ಅದರ ಮೇಲೆ ಗಿಡಗಂಟಿಗಳು ಬೆಳೆದು ನಿಂತು ನೀರು ಮುಂದೆ ಹರಿಯದಂತೆ ಮುಚ್ಚಿಹೋಗಿವೆ. ಮಧ್ವನಗರ, ವಿಶ್ವಕರ್ಮ ಸಭಾಭವನದ ಬಳಿ, 8ನೇ ಅಡ್ಡರಸ್ತೆ, ಚಂದ್ರಕಟ್ಟ ಚೆನ್ನಂಗಡಿ, ಮುಖ್ಯಪ್ರಾಣ ರಸ್ತೆ, ಮಂಡೆ ಚಾವಡಿ, ಮೂಡುತೋಟ, ಎಸ್‌ಸಿ ಕಾಲನಿ ಭಾಗದ ಚರಂಡಿಯಲ್ಲಿ ಹೂಳು ತುಂಬಿದೆ. ಮಧ್ವನಗರದಿಂದ ವಿಷ್ಣು ಮೂರ್ತಿ ದೇವಸ್ಥಾನಕ್ಕೆ ಹೋಗುವ ರಸ್ತೆ ಸೇರಿದಂತೆ ಕೆಲವು ಭಾಗಗಳಲ್ಲಿ ಕೊಳಚೆ ನೀರು ಚರಂಡಿಯಲ್ಲಿ ತುಂಬಿಕೊಳ್ಳುತ್ತಿರುವುದಿಂದ ನೀರು ಮುಂದೆ ಹರಿಯದೆ ನಿಂತಲ್ಲೆ ಇರುವುದರಿಂದಾಗಿ ದುರ್ವಾಸನೆ ದಿನೇ ದಿನೇ ಹೆಚ್ಚಾಗುತ್ತಿದೆ. ಚರಂಡಿ ಪಕ್ಕದಲ್ಲಿನ ಮನೆಗಳ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಇನ್ನು ಕೆಲವೆ‌ಡೆ ವ್ಯವಸ್ಥಿತ ಚರಂಡಿಗಳೇ ಇಲ್ಲ.

ಚರಂಡಿ ಹೂಳೆತ್ತುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಮಳೆ ಪ್ರಾರಂಭವಾಗಿ ಸಾರ್ವಜನಿಕರು ತೊಂದರೆ ಅನುಭವಿಸುವ ಮುನ್ನ ಆಡಳಿತದ ಆಧಿಕಾರಿಗಳು ಎಚ್ಚೆತ್ತುಕೊಂಡು ಚರಂಡಿಗಳ ಸ್ವಚ್ಛತೆಗೆ ಮುಂದಾಗಬೇಕಾಗಿದೆ ಎಂದು ಸ್ಥಳೀಯರಾದ ಶಂಕರ ಪೂಜಾರಿ ಮಧ್ವನಗರ ಆಗ್ರಹಿಸಿದ್ದಾರೆ.

ರೋಗದ ಭೀತಿ
ಸುತ್ತಮುತ್ತಲಿನ ಕೊಳಚೆ ನೀರು ನಮ್ಮ ಮನೆಯ ಬದಿಯ ಚರಂಡಿಯಲ್ಲಿ ಶೇಖರಣೆಗೊಳ್ಳುತ್ತದೆ.ಕೊಳಚೆ ನೀರು ಮುಂದೆ ಹರಿದು ಹೋಗಲು ವ್ಯವಸ್ಥಿತ ಚರಂಡಿ ಇಲ್ಲ. ಪರಿಸರ ಇದೀಗ ಸೊಳ್ಳೆ ಉತ್ಪಾದನಾ ಕೇಂದ್ರವಾಗಿದೆ.ರೋಗ ಭೀತಿ ಎದುರಾಗಿದೆ.
ನೀತಾ ಮಧ್ವನಗರ, ಸ್ಥಳೀಯ ಮಹಿಳೆ

Advertisement

ಪ್ರಯತ್ನ ಮಾಡಲಾಗುವುದು.
ಮಳೆಗಾಲದ ಮೊದಲು ಚರಂಡಿಯ ಮಣ್ಣು ತೆರವುಗೊಳಿಸುವ ಬಗ್ಗೆ ನಗರಸಭೆಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇನೆ. ಅಧಿಕಾರಿಗಳು ಕೋವಿಡ್-19 , ಜೆಸಿಬಿ ಇಲ್ಲ. ಕಾರ್ಮಿಕರ ಕೊರತೆಯ ಕಾರಣವನ್ನು ನೀಡುತ್ತಾರೆ. ಏನೇ ಆದರೂ ಅಧಿಕಾರಿಗಳ ಮೇಲೆ ಸಾಧ್ಯವಾದಷ್ಟು ಒತ್ತಡವನ್ನು ಹೇರಿ ಕಾಮಗಾರಿಯನ್ನು ನಡೆಸುವ ಪ್ರಯತ್ನ ಮಾಡಲಾಗುವುದು.
ಶ್ರೀಶ ಕೊಡವೂರು,
ನಗರಸಭಾ ಸದಸ್ಯರು, ಮೂಡುಬೆಟ್ಟು ವಾರ್ಡ್‌

Advertisement

Udayavani is now on Telegram. Click here to join our channel and stay updated with the latest news.

Next