Advertisement
ಫ್ಯಾಟಿ ಲಿವರ್ ಕಾಯಿಲೆ ಉಂಟಾಗಲು ಕಾರಣವಾಗಬಲ್ಲ ಅಂಶಗಳು
- ಮದ್ಯಪಾನ
- ಬೊಜ್ಜು, ಮಧುಮೇಹ, ಡಿಸ್‌ಲಿಪಿಡೇಮಿಯ
- ಸ್ಟಿರಾಯ್ಡಗಳಂತಹ ಔಷಧಗಳು
- ಹೈಪೊ ಥೈರಾಯ್ಡಿಸಂನಂತಹ ಚಯಾಪಚಯ ಸಂಬಂಧಿ ಕಾಯಿಲೆಗಳು
Related Articles
Advertisement
ಬಹುತೇಕ ಫ್ಯಾಟಿ ಲಿವರ್‌ಗಳು ಯಾವುದೇ ಗಂಭೀರ ತೊಂದರೆಯನ್ನು ಉಂಟುಮಾಡುವುದಿಲ್ಲ. ಕೆಲವು ಮಂದಿಯಲ್ಲಿ (ಶೇ. 10-20) ಕಾಲಕ್ರಮೇಣ ತೊಂದರೆಯು ಉಲ್ಬಣಿಸಬಹುದು ಮತ್ತು ಸಿರೋಸಿಸ್‌ನಂತಹ ಗಂಭೀರ ಯಕೃತ್ ಕಾಯಿಲೆಗೆ ಎಡೆಮಾಡಿಕೊಡಬಹುದು. ಸಿರೋಸಿಸ್ ಉಲ್ಬಣಗೊಂಡು ಯಕೃತ್ ವೈಫಲ್ಯ ಉಂಟಾಗುವ ಸಾಧ್ಯತೆಗಳಿದ್ದು, ಇದಕ್ಕೆ ಯಕೃತ್ ಕಸಿಯಂತಹ ಅತೀವ ವೆಚ್ಚದಾಯಕ ಚಿಕಿತ್ಸೆ ಅಗತ್ಯವಾಗಬಹುದು.
ಫ್ಯಾಟಿ ಲಿವರ್ ಪತ್ತೆ ಹಚ್ಚುವುದು ಹೇಗೆ?
ಬಹುತೇಕ ಫ್ಯಾಟಿ ಲಿವರ್ ಪ್ರಕರಣಗಳು ಯಾವುದೇ ಲಕ್ಷಣಗಳನ್ನು ತೋರ್ಪಡಿಸುವುದಿಲ್ಲ. ರೂಢಿಗತ ಆರೋಗ್ಯ ತಪಾಸಣೆಯ ಸಂದರ್ಭದಲ್ಲಿ ರಕ್ತ ಪರೀಕ್ಷೆ ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನ್ ಮೂಲಕ ಇದು ಪತ್ತೆಯಾಗುತ್ತದೆ. ಈ ಪರೀಕ್ಷೆಗಳ ವರದಿಯ ಆಧಾರದಲ್ಲಿ ಇತರ ರಕ್ತ ಪರೀಕ್ಷೆಗಳು, ಫೈಬ್ರೊಸ್ಕ್ಯಾನ್ (ಯಕೃತ್ತಿನಲ್ಲಿ ಕೊಬ್ಬು ಸಂಗ್ರಹ ಮತ್ತು ಯಕೃತ್ತಿಗೆ ಆಗಿರುವ ಗಾಯ ಪತ್ತೆಹಚ್ಚಲು ನಡೆಸಲಾಗುವ ವಿಶೇಷ ಅಲ್ಟ್ರಾಸೌಂಡ್ ಸ್ಕ್ಯಾನ್) ಮತ್ತು ಅಪರೂಪಕ್ಕೆ ಯಕೃತ್ತಿನ ಬಯಾಪ್ಸಿ ನಡೆಸಬೇಕಾಗಬಹುದು.
ಫ್ಯಾಟಿ ಲಿವರ್ ಕಾಯಿಲೆಯ ಲಕ್ಷಣಗಳು
ಫ್ಯಾಟಿ ಲಿವರ್ ಕಾಯಿಲೆಯು ಸಾಮಾನ್ಯವಾಗಿ ಯಾವುದೇ ಲಕ್ಷಣಗಳನ್ನು ತೋರ್ಪಡಿಸುವುದಿಲ್ಲ; ವ್ಯಕ್ತಿಯು ರೂಢಿಗತ ಆರೋಗ್ಯ ತಪಾಸಣೆಗೆ ಒಳಗಾಗುವ ಸಂದರ್ಭದಲ್ಲಿ ಇದು ಪತ್ತೆಯಾಗುತ್ತದೆ. ಕೆಲವರಲ್ಲಿ ಮಾತ್ರ ಹೊಟ್ಟೆಯ ಮೇಲ್ಭಾಗದಲ್ಲಿ ಸ್ವಲ್ಪ ನೋವು, ತೊಂದರೆ ಅನುಭವಕ್ಕೆ ಬರಬಹುದು. ಜಾಂಡಿಸ್ ಉಂಟಾಗುವ ಸಾಧ್ಯತೆಗಳಿದ್ದು, ಇದು ಉಲ್ಬಣಗೊಂಡಾಗ ಕಾಲುಗಳಲ್ಲಿ ಬಾವು, ದಣಿವಿನಂತಹ ಲಕ್ಷಣಗಳು ಕಂಡುಬರಬಹುದು.
ಮದ್ಯಪಾನ ಮತ್ತು ಫ್ಯಾಟಿ ಲಿವರ್ ಕಾಯಿಲೆ
ಭಾರೀ ಪ್ರಮಾಣದಲ್ಲಿ ತಿಂಗಳುಗಟ್ಟಲೆ ಅಥವಾ ವರ್ಷಗಟ್ಟಲೆ ಮದ್ಯಪಾನ ಮಾಡುವುದರಿಂದ ಫ್ಯಾಟಿ ಲಿವರ್ ಕಾಯಿಲೆ ಉಂಟಾಗಬಹುದು. ಮದ್ಯಪಾನ ಸಂಬಂಧಿ ಯಕೃತ್ ಕಾಯಿಲೆಗಳಲ್ಲಿ ಫ್ಯಾಟಿ ಲಿವರ್ ಕಾಯಿಲೆಯು ಅತ್ಯಂತ ಪ್ರಾಥಮಿಕ ಹಂತವಾಗಿದ್ದು, ನಿರ್ಲಕ್ಷಿಸಿದರೆ ಮದ್ಯಪಾನ ಸಂಬಂಧಿ ಹೆಪಟೈಟಿಸ್ ಮತ್ತು ಸಿರೋಸಿಸ್ ಆಗಿ ಉಲ್ಬಣಿಸಬಹುದು.
ಮಧುಮೇಹ ಮತ್ತು ಫ್ಯಾಟಿ ಲಿವರ್ – ಅಪಾಯಕಾರಿ ಅವಳಿಗಳು
ಮಧುಮೇಹಿಗಳಲ್ಲಿ ಯಕೃತ್ ಕಾಯಿಲೆಯಿಂದಾಗಿ ಮರಣ ಪ್ರಮಾಣವು ಶೇ. 4ರಷ್ಟು ಹೆಚ್ಚುತ್ತದೆ ಮತ್ತು ಇದರಿಂದ ಸಹ ಅನಾರೋಗ್ಯಗಳೂ ಅಧಿಕವಾಗುತ್ತವೆ. ಭಾರತದಲ್ಲಿ ಮಧುಮೇಹಿಗಳು ಸಂಖ್ಯೆ ಹೆಚ್ಚಿದ್ದು, ಫ್ಯಾಟಿ ಲಿವರ್ ಕಾಯಿಲೆಯು ದೀರ್ಘಕಾಲೀನ ಯಕೃತ್ ಕಾಯಿಲೆಯ ಪ್ರಧಾನ ಕಾರಣವಾಗಿರುವುದು ಕಂಡುಬಂದಿದೆ. ಶೇ. 50ರಿಂದ 80ರಷ್ಟು ಮಂದಿಯಲ್ಲಿ ಯಾವುದೇ ವಯಸ್ಸಿನಲ್ಲಿ ಫ್ಯಾಟಿ ಲಿವರ್ ಕಾಯಿಲೆಯು ಕಂಡುಬರಬಹುದು; ಬೊಜ್ಜು ಹೊಂದಿರುವ ಮಧುಮೇಹಿಗಳಲ್ಲಿ ಶತ ಪ್ರತಿಶತ ಕಂಡುಬರುತ್ತದೆ.
ಬೊಜ್ಜು ಮತ್ತು ಫ್ಯಾಟಿ ಲಿವರ್: ಇನ್ನೊಂದು ಅಪಾಯಕಾರಿ ಅವಳಿಗಳು
ಬೊಜ್ಜು ಹೆಚ್ಚಾದಂತೆ ಫ್ಯಾಟಿ ಲಿವರ್ ಕಾಯಿಲೆ ಉಂಟಾಗುವ ಸಾಧ್ಯತೆಗಳು ಹೆಚ್ಚುತ್ತ ಹೋಗುತ್ತವೆ. ಬಿಎಂಐ ಹೆಚ್ಚಿದಂತೆ ಫ್ಯಾಟಿ ಲಿವರ್ ಕಾಯಿಲೆಗೆ ತುತ್ತಾಗುವ ಅಪಾಯ 4.1ರಿಂದ 14 ಪಟ್ಟು ಅಧಿಕವಾಗುತ್ತದೆ. ದೀರ್ಘಕಾಲೀನ ಬೊಜ್ಜು ಇದ್ದು, ಮಧುಮೇಹ ಇದ್ದರೂ ಇಲ್ಲದಿದ್ದರೂ ಯಕೃತ್ ಹಾನಿ, ಫೈಬ್ರೋಸಿಸ್, ಸಿರೋಸಿಸ್ ಮತ್ತು ಯಕೃತ್ ಕ್ಯಾನ್ಸರ್ ಉಂಟಾಗುವ ಅಪಾಯ ಕಾಲಕ್ರಮೇಣ ಹೆಚ್ಚುತ್ತದೆ. ನಿಮ್ಮ ಮಾದರಿ ದೇಹತೂಕವನ್ನು ತಿಳಿದುಕೊಳ್ಳುವುದಕ್ಕೆ ವಿವಿಧ ಆನ್‌ಲೈನ್ ಕ್ಯಾಲ್ಕುಲೇಟರ್‌ಗಳು, ಮೊಬೈಲ್ ಆ್ಯಪ್‌ಗಳು ಲಭ್ಯವಿವೆ.
ಫ್ಯಾಟಿ ಲಿವರ್ ಕಾಯಿಲೆಯಿಂದ ಮಧುಮೇಹ, ಹೃದ್ರೋಗ ಅಥವಾ ಕ್ಯಾನ್ಸರ್‌ನಂತಹ ಭವಿಷ್ಯದ ಕಾಯಿಲೆಗಳ ಬಗ್ಗೆ ತಿಳಿಯಬಹುದೇ?
ಹೌದು. ಫ್ಯಾಟಿ ಲಿವರ್ ಹೊಂದಿರುವವರು ಕಾಲಕ್ರಮೇಣ ಮಧುಮೇಹ, ಕೊಲೆಸ್ಟರಾಲ್, ಹೃದಯ ಸಮಸ್ಯೆಗಳು ಮತ್ತು ಕೆಲವು ವಿಧದ ಕ್ಯಾನ್ಸರ್‌ಗಳಿಗೆ ತುತ್ತಾಗುತ್ತಾರೆ ಎಂದು ಅಧ್ಯಯನಗಳಿಂದ ಕಂಡುಕೊಳ್ಳಲಾಗಿದೆ. ಫ್ಯಾಟಿ ಲಿವರ್ ಕಾಯಿಲೆಯು ಮೆಟಬಾಲಿಕ್ ಸಿಂಡ್ರೋಮ್ ಎಂದು ಕರೆಯಲಾಗುವ ಕಾಯಿಲೆಗಳ ಸಮೂಹದ ಭಾಗವಾಗಿದ್ದು, ಇದಕ್ಕೆ ತುತ್ತಾಗಿರುವ ರೋಗಿಗಳು ಭವಿಷ್ಯದಲ್ಲಿ ಮೆಟಬಾಲಿಕ್ ಸಿಂಡ್ರೋಮ್ ಅನಾರೋಗ್ಯ ಗುತ್ಛದ ಭಾಗವಾಗಿರುವ ಮಧುಮೇಹ, ಕೊಲೆಸ್ಟರಾಲ್ ಮತ್ತು ಅಧಿಕ ರಕ್ತದೊತ್ತಡಗಳಿಂದ ಬಾಧಿತರಾಗುವ ಸಾಧ್ಯತೆಗಳು ಅಧಿಕವಾಗಿರುತ್ತವೆ.
ಫ್ಯಾಟಿ ಲಿವರ್ ಕಾಯಿಲೆಯನ್ನು ತಡೆಯಬಹುದೇ?
ಹೌದು. ಆರೋಗ್ಯಪೂರ್ಣ ದೇಹತೂಕ ಕಾಪಾಡಿಕೊಳ್ಳುವುದು (ಸಮತೋಲಿತ ಆಹಾರಾಭ್ಯಾಸ ಮತ್ತು ವ್ಯಾಯಾಮಗಳ ಸಹಾಯದಿಂದ) ಮತ್ತು ಮದ್ಯಪಾನ ವರ್ಜಿಸುವ ಮೂಲಕ ಫ್ಯಾಟಿ ಲಿವರ್ ಕಾಯಿಲೆ ಉಂಟಾಗದಂತೆ ತಡೆಯಬಹುದಾಗಿದೆ.
ಫ್ಯಾಟಿ ಲಿವರ್ ಕಾಯಿಲೆಯಿಂದ ರಕ್ಷಿಸಿಕೊಳ್ಳಲು ಸಲಹೆಗಳೇನು?
ಈ ಕೆಳಗಿನ ಪ್ರಾಥಮಿಕ ನಿಯಮಗಳನ್ನು ಪಾಲಿಸಿ: ¬ ಮದ್ಯಪಾನ ಮಾಡದಿರಿ ¬ ಮಾದರಿ ದೇಹತೂಕವನ್ನು ಕಾಪಾಡಿಕೊಳ್ಳಿ ¬ ಆರೋಗ್ಯಪೂರ್ಣ ಆಹಾರಾಭ್ಯಾಸ ಪಾಲಿಸಿ ಮತ್ತು ವ್ಯಾಯಾಮ ಮಾಡಿ ¬ ಅನಗತ್ಯ ಔಷಧ ಮತ್ತು ಆರೋಗ್ಯಪೂರಕ ಆಹಾರ ಸೇವನೆ ತಪ್ಪಿಸಿ
ದೇಹತೂಕ ಇಳಿಸಿಕೊಳ್ಳುವುದ ರಿಂದ ಫ್ಯಾಟಿ ಲಿವರ್ ಕಡಿಮೆಯಾಗುತ್ತದೆಯೇ?
ಹೌದು. ದೇಹತೂಕವನ್ನು ಶೇ. 5ರಷ್ಟು ಕಡಿಮೆ ಮಾಡಿಕೊಂಡರೆ ಯಕೃತ್ತಿನಲ್ಲಿ ಸಂಗ್ರಹವಾಗಿರುವ ಕೊಬ್ಬು ಶೇ. 7-10ರಷ್ಟು ಕಡಿಮೆಯಾಗುತ್ತದೆ ಮತ್ತು ನಿಧಾನವಾಗಿ ತೂಕ ಇಳಿಸಿಕೊಳ್ಳುವುದರಿಂದ ಫ್ಯಾಟಿ ಲಿವರ್ ಕ್ರಮೇಣ ಪೂರ್ವಸ್ಥಿತಿಗೆ ಮರಳುತ್ತದೆ. ಕಡಿಮೆ ಕಾಬೊìಹೈಡ್ರೇಟ್, ಕಡಿಮೆ ಕೊಬ್ಬಿರುವ ಆಹಾರ ಸೇವನೆ, ಜಂಕ್ ಆಹಾರಗಳನ್ನು ಸೇವಿಸದಿರುವುದು ಮತ್ತು ನಿಯಮಿತವಾಗಿ ಏರೋಬಿಕ್ ವ್ಯಾಯಾಮಗಳನ್ನು ಮಾಡುವುದರ ಮೂಲಕ ದೇಹದಿಂದ ಹೆಚ್ಚುವರಿ ಕ್ಯಾಲೊರಿಗಳನ್ನು ತೆಗೆದುಹಾಕಬಹುದು.
ಫ್ಯಾಟಿ ಲಿವರ್ ಕಾಯಿಲೆಯಿದ್ದರೆ ಮದ್ಯಪಾನ ಮಾಡಬಹುದೇ?
ಇಲ್ಲ, ಮಾಡಲೇಬಾರದು. ಮದ್ಯಪಾನವು ಫ್ಯಾಟಿ ಲಿವರ್ ಕಾಯಿಲೆ ಉಂಟಾಗಲು ಪ್ರಮುಖ ಕಾರಣಗಳಲ್ಲಿ ಒಂದು. ಮಧುಮೇಹ, ಬೊಜ್ಜು ಮತ್ತು ಮದ್ಯಪಾನಗಳು ಜತೆಗೂಡಿದರೆ ಅಪಾಯ ಖಚಿತ. ಆದ್ದರಿಂದ ಫ್ಯಾಟಿ ಲಿವರ್ ಹೊಂದಿರುವವರು ಕಡ್ಡಾಯವಾಗಿ ಮದ್ಯಪಾನವನ್ನು ತ್ಯಜಿಸಬೇಕು.
ಫ್ಯಾಟಿ ಲಿವರ್‌ಗೆ ಯಶಸ್ವಿಯಾಗಿ ಚಿಕಿತ್ಸೆ ಒದಗಿಸುವುದು ಸಾಧ್ಯವೇ?
ಹೌದು. ಮದ್ಯಪಾನವನ್ನು ತ್ಯಜಿಸುವುದು ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಫ್ಯಾಟಿ ಲಿವರ್ ಕಾಯಿಲೆಗೆ ಮೊತ್ತಮೊದಲ ಚಿಕಿತ್ಸಾ ಕ್ರಮಗಳು. ನಿಮ್ಮ ಹಾಲಿ ದೈಹಿಕ ಸ್ಥಿತಿಗತಿಗಳು ಮತ್ತು ಜೀವನಶೈಲಿ ಅಭ್ಯಾಸಗಳನ್ನು ಆಧರಿಸಿ ವೈದ್ಯರು ಈ ಕೆಳಗಿನ ಸಲಹೆಗಳನ್ನು ನೀಡಬಹುದಾಗಿದೆ:
ತೂಕ ಕಳೆದುಕೊಳ್ಳುವುದು – ಪಥ್ಯಾಹಾರ ಮತ್ತು ವ್ಯಾಯಾಮ
– ದಿನಕ್ಕೆ 30-45 ನಿಮಿಷಗಳ ವ್ಯಾಯಾಮ
– ಕ್ಯಾಲೊರಿಗಳು, ಸ್ಯಾಚುರೇಟೆಡ್ ಫ್ಯಾಟ್ ಕಡಿಮೆ ಇರುವ; ಪ್ರೊಟೀನ್ ಮತ್ತು ನಾರಿನಂಶ ಸಮೃದ್ಧವಾಗಿರುವ ಆಹಾರ ಸೇವಿಸಿ
ಮದ್ಯಪಾನವನ್ನು ತ್ಯಜಿಸಿ
ಮಧುಮೇಹ, ಕೊಲೆಸ್ಟರಾಲ್‌ನಂತಹ ಸಹ ಅನಾರೋಗ್ಯಗಳನ್ನು ನಿಯಂತ್ರಣದಲ್ಲಿಡಿ
ಕೊನೆಯದಾಗಿ
ಬೊಜ್ಜು, ಮಧುಮೇಹ ಮತ್ತು ಮದ್ಯಪಾನ ಚಟಗಳ ಹೆಚ್ಚಳದಿಂದಾಗಿ ಫ್ಯಾಟಿ ಲಿವರ್ ಕಾಯಿಲೆಯು ದೇಶದಲ್ಲಿ ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ಮದ್ಯಪಾನ ಮಾಡದೆ ಇರುವವರಲ್ಲಿ ಫ್ಯಾಟಿ ಲಿವರ್ ಕಾಯಿಲೆ ಉಂಟಾಗುವುದಕ್ಕೆ ಅನಾರೋಗ್ಯಕರ ಜೀವನ ಶೈಲಿ ಪ್ರಧಾನ ಕಾರಣವಾಗಿದ್ದರೆ ಈ ಕುರಿತಾದ ತಿಳಿವಳಿಕೆಯು ಈ ಅನಾರೋಗ್ಯ ಉಂಟಾಗದಂತೆ ತಡೆಯಲು ಪ್ರಾಮುಖ್ಯವಾಗಿದೆ. ದೇಹತೂಕ (ಎಷ್ಟು ದೇಹ ತೂಕ ಹೊಂದಿದ್ದೀರಿ), ಆಹಾರ ಸೇವನೆ (ಏನನ್ನು ತಿನ್ನುತ್ತೀರಿ) ಗಳ ಮೇಲೆ ನಿಗಾ ಇರಿಸಿಕೊಳ್ಳುವುದು ಮತ್ತು ವ್ಯಾಯಾಮ (ಏನು ಮಾಡುತ್ತೀರಿ) ಮಾಡುವುದು ಆರೋಗ್ಯಪೂರ್ಣ ದೀರ್ಘ ಜೀವನ ನಡೆಸಲು ಮೂರು ಮುಖ್ಯ ಅಂಶಗಳಾಗಿವೆ.
-ಡಾ| ಗಣೇಶ್ ಭಟ್
ಪ್ರೊಫೆಸರ್ ಮತ್ತು ಯೂನಿಟ್ ಹೆಡ್,
ಗ್ಯಾಸ್ಟ್ರೊಎಂಟರಾಲಜಿ ವಿಭಾಗ,
ಕೆಎಂಸಿ ಆಸ್ಪತ್ರೆ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಗ್ಯಾಸ್ಟ್ರೊಎಂಟರಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)