“ಬಾಲ್ಯದಿಂದ ಪಡೆದ ಎಲ್ಲ ಕಹಿ ಅನುಭವಗಳನ್ನು ಮರೆತು ಯೌವನದ ಜೊತೆ ಹೆಜ್ಜೆ ಹಾಕುತ್ತಿದ್ದೇನೆ. ಆದರೂ ಮನದ ಭಾವ ನಿರಾಳತೆಯ ಹುಡುಕುವಲ್ಲಿ ಸೋಲುತ್ತಿದೆ ಎಂದೆನಿಸುತ್ತದೆ. ಪ್ರತಿ ಒಬ್ಬ ಹೆಣ್ಣು ಮಗಳು ಕೂಡ ಆಕೆಯ ತಂದೆಯಲ್ಲೇ ಪ್ರೀತಿ ಪ್ರಪಂಚ ಕಾಣುತ್ತಾಳೆ. ಹೆಗಲ ಮೇಲೆ ಕೂತು ಸ್ವರ್ಗ ನೋಡುತ್ತಾಳೆ. ಗದರಿಸುವಾಗ ತಂದೆಯ ಕೆಂಗಣ್ಣಿಗೆ ಬಲಿಯಾಗುವ ನಾವು ಬೆನ್ನ ಮೇಲೆ ಕೂರಿಸಿ ಅಂಬಾರಿ ಮಾಡುವಾಗ ಜಗವನ್ನೇ ಮರೆತು ಸಂಭ್ರಮಿಸುತ್ತೇವೆ. ಹೌದು, ಈ ಎಲ್ಲದಕ್ಕೂ ಕಾರಣವಾಗುವ ಆ ನನ್ನ ಜನ್ಮದಾತ ಇಂದೂ ಈ ಸುದಿನ ನನ್ನೊಂದಿಗೆ ಇರಬೇಕಾಗಿತ್ತು,
ಅಪ್ಪಾ ನೀನಿಲ್ಲದೆ ನನಗೆ ರಾತ್ರಿ ಕಳೆದ ನೆನಪಿರಲಿಲ್ಲ. ಆಗಷ್ಟೆ ಹೊಸ ಮನೆಯ ಕಾರ್ಯಗಳು ಪ್ರಗತಿಯಲ್ಲಿರುವಾಗಲೇ ನನ್ನ ನೀನು ಮನೆಯ ಪಂಚಾಂಗದಲ್ಲಿ ಹಾಸಿಗೆ ಹಾಕಿ ಮಲಗಿಸುತ್ತಿದ್ದೆ. ಚಂದಿರನ ತೊಡೆಯ ಮೇಲೆ ಮೊಲ ಕೂತ ಕಥೆ ಹೇಳುತ್ತಿದ್ದೆ ನೋಡು. ನನ್ನ ಹುಟ್ಟಿಸಿದ ಜನ್ಮದಾತೆಯೂ ನೀನೆ ಎಂಬುವಷ್ಟರ ಮಟ್ಟಿಗೆ ಅನ್ನಿಸಿಬಿಡುತ್ತಿತ್ತು. ನಿನ್ನ ಅಪ್ಪುಗೆಯ ಆ ರಾತ್ರಿ ಅಮ್ಮನ ದೂರುಗಳನ್ನು ನಿನ್ನೆದುರಿಗಿಡಲು ಕಾರಣವಾಗುತ್ತಿತ್ತು. ಎಲ್ಲ ಸುಂದರ ಲೋಕದಲ್ಲಿ ತಲ್ಲೀನವಾಗಿರಲು ಅಪ್ಪಳಿಸಿತು ನೋಡು ಬದುಕಿಗೊಂದು ಬಿರುಗಾಳಿ.
ನನ್ನ ಕಾಳಜಿಯ ಕಣಜವಾಗಿದ್ದ ನಿನ್ನನ್ನು, ಸಾಕಾರ ಮೂರ್ತಿಯಾಗಿದ್ದ ನಿನ್ನನ್ನು ಬಿಟ್ಟು ಬಾಳುವ ದುರ್ಗತಿ ಒದಗಿತು. ಕಪ್ಪು ಕೋಟು ಧರಿಸಿ ಕೋರ್ಟಿಗೆ ತೆರಳುತ್ತಿದ್ದ ನನ್ನ ಹೆಮ್ಮೆಯ ತಂದೆ ನನ್ನನಗಲಿ ದೂರ ಹೊರಟು ಹೋದರು. ಬದುಕಿದ್ದಾಗ ಅದೇ ಕೋಟು ನಾನು ಧರಿಸಿ ಅಪ್ಪನ ಜೊತೆ ಭರವಸೆಯ ಹೆಜ್ಜೆಯ ಹಾಕುತ್ತಿದ್ದೆ. ಮಾತಿನ ಮಲ್ಲಿಯಾಗಿದ್ದ ನನ್ನ ನೋಡಿ ನೀನು ಹೇಳುತ್ತಿದ್ದದ್ದು ಒಂದೇ ಮಾತು ” ನಿನ್ನ ಮುಖದಲ್ಲಿ ನಿನಗೂ ನನ್ನಂತೆ ವಕೀಲೆಯಾಗುವ ಕಳೆಯಿದೆ’ ಎಂದು.
ಬಾಲ್ಯ ಕಳೆದು ಇಲ್ಲಿಯವರೆಗೆ ಬಂದ ಹಂತದಲ್ಲಿ ನನಗನಿಸಿದ್ದು ಒಂದೇ. ನಾವು ಇನ್ನೊಬ್ಬರ ವಿಚಾರದಲ್ಲಿ ಜಡ್ಜ್ ಆದರೆ ನಮ್ಮದೇ ವಿಚಾರದಲ್ಲಿ ನಾವು ಲಾಯರ್‌ಗಳಾಗುತ್ತೇವೆ ಎನ್ನುವುದು. ಅದೇನೇ ಆದರೂ ಅಗಲಿ. ಹೋದ ನಿನ್ನ ನೆನಪು ಕಣ್ಣೀರ ರೂಪದಲ್ಲಿ ಕೆನ್ನೆ ತೋಯಿಸುತ್ತದೆ. ಅದಕ್ಕಾಗಿ ನನ್ನ ಅಶ್ರುಧಾರೆಗೆ ಅದರದೇ ಆದ ಬೆಲೆಯಿದೆ. ನಿನ್ನ ನೆನಪಿಸುವ ಸೆಳೆತವಿದೆ, ಸಾಮರ್ಥ್ಯವಿದೆ’ ಹೀಗೆ ನುಡಿದು ಭಾವುಕಳಾಗುತ್ತಾಳೆ ತಂದೆಯಿಲ್ಲದ ಆ ಮುಗ್ಧ ಹುಡುಗಿ. ಇಂತಹ ಅದೆಷ್ಟೋ ಕಥೆಗಳು ಇಂತಹ ಅನೇಕ ವಾಸ್ತವ ಸತ್ಯಗಳು ಹೆಚ್ಚಿನವರ ಬಾಳಲ್ಲಿ ನಡೆದು ಹೋಗಿರುತ್ತದೆ. ಅದು ಇಂತಹ ಭಾವನಾತ್ಮಕತೆಗೆ ಮುನ್ನುಡಿ ಬರೆಯುವ ಅಪ್ಪಂದಿರ ದಿನದಂದು ಅಕ್ಷರದಲ್ಲಿ ರೂಪ ಪಡೆದುಕೊಳ್ಳುತ್ತದೆ.
– ಅರ್ಪಿತಾ ಕುಂದರ್, ಪ್ರಥಮ ಎಂಸಿಜೆ, ವಿವೇಕಾನಂದ ಕಾಲೇಜು, ಪುತ್ತೂರು