ಪಡುಬಿದ್ರಿ: ನವಯುಗ ಕಂಪೆನಿ ವಿರುದ್ಧ ಪಡುಬಿದ್ರಿ ಜಿ. ಪಂ. ವ್ಯಾಪ್ತಿಗೆ ಟೋಲ್ ವಿನಾಯತಿ ಕೋರಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಪಡುಬಿದ್ರಿಯ ಟೆಂಪೋ ನಿಲ್ದಾಣದ ಬಳಿ ನಡೆಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ತಾಣಕ್ಕೆ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಭೇಟಿಯಿತ್ತು ಮುಷ್ಕರ ಹಾಗೂ ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಮನವೊಲಿಸಲೆತ್ನಿಸಿದರು.
ಮುಷ್ಕರ ಹಾಗೂ ಉಪವಾಸಗಳನ್ನು ನಿಲ್ಲಿಸಿದಲ್ಲಿ ಪಡುಬಿದ್ರಿಯ ವಾಹನ ಸವಾರರಿಗೆ ಜ. 20ರವರೆಗೆ ಹೆಜಮಾಡಿ ಟೋಲ್‌ಗೇಟ್‌ನಲ್ಲಿ ವಿನಾಯತಿಯನ್ನು ಒದಗಿಸುವ ಭರವಸೆಯನ್ನೂ ಜಿಲ್ಲಾಡಳಿತದ ವತಿಯಿಂದ ಪ್ರತಿಭಟನಕಾರರಿಗೆ ನೀಡಲಾಯಿತು. ನವಯುಗ ಕಂಪೆನಿ ಅಧಿಕಾರಿಗಳು ಸದ್ಯ ಸಂಕ್ರಾಂತಿ ರಜೆಯಲ್ಲಿರುವುದರಿಂದ ಜ. 20ರ ಬಳಿಕ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲರ ಸಮಕ್ಷಮ ಸಭೆ ನಡೆಸಿ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುವುದೆಂದೂ ತಿಳಿಸಲಾಯಿತು.
ಆದರೆ ಅಪರ ಜಿಲ್ಲಾಧಿಕಾರಿಗಳ ಮನವಿಯ ಮೇರೆಗೆ ತಾವು ಉಪವಾಸ ಸತ್ಯಾಗ್ರಹವನ್ನು ತ್ಯಜಿಸುವುದಾಗಿಯೂ ಮತ್ತು ಜ. 20ರವರೆಗೆ ಶಾಂತಿಯುತ ಮುಷ್ಕರವನ್ನು ಮುಂದುವರಿಸುವುದಾಗಿಯೂ ಪ್ರತಿಭಟನಕಾರರು ತಿಳಿಸಿದರು. ಜಿಲ್ಲಾಧಿಕಾರಿಗಳ ಸಭೆಯ ತೀರ್ಮಾನದ ಬಳಿಕ ಪರಸ್ಪರ ಒಮ್ಮತದ ನಿರ್ಧಾರಕ್ಕೆ ಬಂದು ಪಡುಬಿದ್ರಿ ಜಿ. ಪಂ. ವ್ಯಾಪ್ತಿಗೆ ಸಂಪೂರ್ಣ ಸುಂಕ ವಿನಾಯತಿಯನ್ನು ನವಯುಗ ಕಂಪೆನಿ ಅಧಿಕಾರಿಗಳು ನೀಡಲು ಬದ್ಧರಾದಲ್ಲಿ ಮುಷ್ಕರವನ್ನೂ ಕೈಬಿಡಲಿದ್ದೇವೆ. ಒಂದು ವೇಳೆ ಒಪ್ಪಂದವು ಮುರಿದುಬಿದ್ದಲ್ಲಿ ತಮ್ಮ ಪ್ರತಿಭಟನಾ ಸ್ವರೂಪವನ್ನು ತೀವ್ರಗೊಳಿಸುವುದಾಗಿಯೂ ಕರವೇ ಮುಖಂಡರು ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.
ಈ ಸಂದರ್ಭದ ಮಾತುಕತೆಯಲ್ಲಿ ಕಾಪು ಸಿಪಿಐ ಮಹೇಶ್ ಪ್ರಸಾದ್, ಪಡುಬಿದ್ರಿ ಪಿಎಸ್‌ಐ ಸತೀಶ್, ಕಾಪು ಪ್ರಭಾರ ತಹಶೀಲ್ದಾರ್ ಪ್ರದೀಪ್ ಕುಡೇìಕರ್, ಕಾಪು ಆರ್‌ಐ ರವಿಶಂಕರ್, ಪ್ರತಿಭಟನಕಾರರ ಪರವಾಗಿ ಮಾಜಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ದಸಂಸ ನಾಯಕ ಲೋಕೇಶ್ ಕಂಚಿನಡ್ಕ, ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮ್ಮದ್, ಆಸೀಫ್ ಆಪದಾºಂಧವ, ರಝಾಕ್ ಕಂಚಿನಡ್ಕ, ಹಸನ್ ಬಾವ ಕಂಚಿನಡ್ಕ, ಫಿರೋಝ್ ಕಂಚಿನಡ್ಕ, ಸಂಪತ್ ಆಚಾರ್ಯ ಮತ್ತಿತರಿದ್ದರು.