Advertisement

ದಿಢೀರ್‌ ನೋಟು ರದ್ದು ಮಾಡಿಲ್ಲ

07:56 AM Jan 19, 2017 | Team Udayavani |

ಹೊಸದಿಲ್ಲಿ: 500 ರೂ. ಮತ್ತು 1000 ರೂ. ನೋಟುಗಳ ಅಪನಗದೀಕರಣವಾದ ಮೇಲೆ ರಿಸರ್ವ್‌ ಬಾಂಕ್‌ ಆಫ್ ಇಂಡಿಯಾಗೆ ವಾಪಸ್‌ ಬಂದ ಹಣವೆಷ್ಟು? ಬ್ಯಾಂಕುಗಳಿಗೆ ನೀವು ಮರಳಿ ಕೊಟ್ಟ ನಗದಿನ ಪ್ರಮಾಣವೇನು? ಕ್ಯಾಶ್‌ ವಿತ್‌ಡ್ರಾವಲ್‌ ಮೇಲೆ ಹೇರಿರುವ ನಿರ್ಬಂಧವನ್ನು ತೆಗೆದುಹಾಕಿದರೆ ಏನಾದರೂ ಸಮಸ್ಯೆಯಾಗುತ್ತದೆಯೇ?

Advertisement

ಇವು ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ಅವರಿಗೆ ಹಣಕಾಸು ಇಲಾಖೆಯ ಸ್ಥಾಯಿ ಸಮಿತಿ ಸದಸ್ಯರು ಕೇಳಿದ ಕಠಿನ ಸರಣಿ ಪ್ರಶ್ನೆಗಳು. ಈ ಪ್ರಶ್ನೆಗಳು ಇಲ್ಲಿಗೆ ನಿಲ್ಲದೇ ಸಾಕಷ್ಟು ಅತಿರೇಕಕ್ಕೆ ಹೋದಾಗ ಒಂದು ಹಂತದಲ್ಲಿ ಊರ್ಜಿತ್‌ ಪಟೇಲ್‌ ಅವರನ್ನು ರಕ್ಷಿಸಿದ್ದು ಆರ್‌ಬಿಐನ ಮಾಜಿ ಗವರ್ನರ್‌ ಹಾಗೂ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌!

500-1000 ರೂ. ನೋಟುಗಳ ಅಪನಗದೀಕರಣ ನಂತರ ಪರಿಣಾಮದ ಕುರಿತಂತೆ ಬುಧವಾರ ಸಂಸತ್ತಿನ ಹಣಕಾಸು ಇಲಾಖೆಯ ಸ್ಥಾಯಿ ಸಮಿತಿ ಏರ್ಪಡಿಸಿದ್ದ ವಿಚಾರಣೆಯಲ್ಲಿ ಆರ್‌ಬಿಐ ಗವರ್ನರ್‌, ಹಣಕಾಸು ಇಲಾಖೆಯ ಅಧಿಕಾರಿಗಳು ಮತ್ತು ಪ್ರಮುಖ ಬ್ಯಾಂಕುಗಳ ಮುಖ್ಯಸ್ಥರು ಹೇಳಿಕೆ ನೀಡಿದರು. ಈ ಸಂದರ್ಭದಲ್ಲಿ ಅತಿ ಹೆಚ್ಚು ಪ್ರಶ್ನೆಗಳು ಬಿದ್ದದ್ದು ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ಅವರಿಗೆ. 

ಸರಕಾರ ಮತ್ತು ಆರ್‌ಬಿಐ ಸಮನ್ವಯತೆ ಯಿಂದ ಈ ನಿರ್ಧಾರ ತೆಗೆದುಕೊಂಡಿವೆಯೇ ಎಂಬ ಪ್ರಶ್ನೆಯಿಂದ ಹಿಡಿದು, ಪ್ರತಿ  ಲೆಕ್ಕವನ್ನು ಕೇಳಿದ ಸಮಿತಿ, ಹಾಜರಾದ ಎಲ್ಲರನ್ನೂ ಇಕ್ಕಟ್ಟಿಗೆ ಸಿಲುಕಿಸಿತು. 

ವರ್ಷದ ಕಸರತ್ತು: ನೋಟು ಅಪನ ಗದೀಕರಣ ಪ್ರಕ್ರಿಯೆ ಒಂದು ದಿನದ್ದಲ್ಲ, ಅದು ಒಂದು ವರ್ಷದ್ದು ಎಂದು ಸ್ಪಷ್ಟವಾಗಿ ಹೇಳಿದ್ದು ಗವರ್ನರ್‌ ಊರ್ಜಿತ್‌ ಪಟೇಲ್‌. ಕೇಂದ್ರ ಸರಕಾರ, ಆರ್‌ಬಿಐ ಅನ್ನು ಗಂಭೀರವಾಗಿ ಪರಿಗಣಿಸದೇ ಈ ನಿರ್ಧಾರ ತೆಗೆದುಕೊಂಡಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸ್ಥಾಯೀ ಸಮಿತಿ ಎಷ್ಟು ದಿನಗಳ ಮುನ್ನ ನಿಮಗೆ ಹೇಳಲಾಗಿತ್ತು ಎಂಬ ಪ್ರಶ್ನೆ ಕೇಳಿದಾಗ ಊರ್ಜಿತ್‌ ಪಟೇಲ್‌ ಅವರು ಈ ಉತ್ತರ ನೀಡಿದ್ದಾರೆ. 2016ರ ವರ್ಷಾರಂಭದಲ್ಲೇ ಕೇಂದ್ರ ಸರಕಾರ ಮತ್ತು ಆರ್‌ಬಿಐ ಇದಕ್ಕಾಗಿ ಪ್ರಕ್ರಿಯೆ ಶುರು ಮಾಡಿಕೊಂಡಿದ್ದವು. ಆದರೆ ಇದನ್ನು ಘೋಷಿಸಿದ್ದು ಮಾತ್ರ ನವೆಂಬರ್‌ 8ರಂದು ಎಂದು ಹೇಳಿದ್ದಾರೆ. ಅಲ್ಲದೆ ಈ ಸಂಬಂಧ ಕೇಂದ್ರ ಸರಕಾರದೊಂದಿಗೆ ಒಪ್ಪಂದವೊಂದನ್ನೂ ಮಾಡಿಕೊಳ್ಳಲಾಗಿತ್ತು ಎಂಬ ಮಾಹಿತಿಯನ್ನೂ ನೀಡಿದ್ದಾರೆ. 

Advertisement

9.2 ಲಕ್ಷ ಕೋಟಿ ರೂ. ಹೊಸ ನೋಟು ಬಿಡುಗಡೆ: ನೋಟುಗಳ ಅಪನಗದೀಕರಣದ ಅನಂತರ ಆರ್‌ಬಿಐಗೆ ಎಷ್ಟು ಹಣ ಬಂದಿದೆ ಎಂಬ ಲೆಕ್ಕ ಇಲ್ಲಿವರೆಗೂ ಸಿಕ್ಕಿಲ್ಲ. ಆದರೆ ನಾವು ಮಾತ್ರ ವಾಪಸ್‌ ಬ್ಯಾಂಕಿಂಗ್‌ ವ್ಯವಸ್ಥೆಗೆ ಸುಮಾರು 9.2 ಲಕ್ಷ ಕೋಟಿ ರೂ. ಹೊಸ ನೋಟುಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು ಊರ್ಜಿತ್‌ ಪಟೇಲ್‌ ಹೇಳಿದ್ದಾರೆ.

“ಅಂದರೆ ಒಟ್ಟಾರೆ ಮೌಲ್ಯದ ಶೇ.60 ರಷ್ಟನ್ನು ವಾಪಸ್‌ ಕಳುಹಿಸಿದ್ದೇವೆ. ಎಷ್ಟು ಬಂದಿದೆ ಎಂಬ ಬಗ್ಗೆ ಇನ್ನೂ ಲೆಕ್ಕಾಚಾರ ನಡೆಯುತ್ತಲೇ ಇದೆ’ ಎಂದು ತಿಳಿಸಿದ್ದಾರೆ. ಅಲ್ಲದೆ ಇಡೀ ವ್ಯವಸ್ಥೆ ಯಾವಾಗ ಸರಿಹೋಗುತ್ತದೆ, ಇನ್ನೆಷ್ಟು ದಿನ ಬೇಕಾಗುತ್ತದೆ ಎಂಬ ಪ್ರಶ್ನೆಗಳಿಗೂ ಊರ್ಜಿತ್‌ ಪಟೇಲ್‌ ಆಗಲಿ, ಹಣಕಾಸು ಇಲಾಖೆಯ ಅಧಿಕಾರಿಗಳಾಗಲಿ ಖಚಿತವಾಗಿ ಉತ್ತರಿಸಿಲ್ಲ. ಹೀಗಾಗಿ ಸಂಸದೀಯ ಸ್ಥಾಯಿ ಸಮಿತಿ ಮತ್ತೂಮ್ಮೆ ಇವರೆಲ್ಲರನ್ನೂ ವಾಪಸ್‌ ಕರೆಯುವ ಸಾಧ್ಯತೆ ಇದೆ. ಇದರ ಜತೆಗೆ, ಜ.20 ರಂದು ಊರ್ಜಿತ್‌ ಪಟೇಲ್‌ ಅವರನ್ನು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯೂ ಕರೆದಿದೆ. ಅಂದು ಕೂಡ ಆರ್‌ಬಿಐ ಗವರ್ನರ್‌  ಇಂಥದ್ದೇ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ.

ಇದ್ದ ಪ್ರಮುಖರು: ವೀರಪ್ಪ ಮೊಲಿ ಅಧ್ಯಕ್ಷತೆಯ ಹಣಕಾಸು ಸಮಿತಿಯಲ್ಲಿ ಸದಸ್ಯರಾದ ಮನಮೋಹನ್‌ ಸಿಂಗ್‌, ದಿಗ್ವಿಜಯ್‌ ಸಿಂಗ್‌, ಶಿವಕುಮಾರ್‌ ಉದಾಸಿ, ಜ್ಯೋತಿರಾದಿತ್ಯ ಸಿಂಧಿಯಾ, ಸೌಗತಾ ರಾಯ್‌, ಸತೀಶ್‌ ಚಂದ್ರ ಮಿಶ್ರಾ ಸೇರಿ 31 ಮಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next