Advertisement
ದೇಶದ ಗಡಿಗಳಲ್ಲಿ ಕರಾವಳಿಯೂ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿಯೇ ಕೇಂದ್ರ ರಕ್ಷಣ ಇಲಾಖೆಯ ಕೋಸ್ಟ್‌ಗಾರ್ಡ್ ಹಾಗೂ ರಾಜ್ಯ ಗೃಹ ಇಲಾಖೆಯ ಕರಾವಳಿ ಕಾವಲು ಪಡೆ ಕಾರ್ಯನಿರ್ವಹಿಸುತ್ತಿದೆ. 12 ನಾಟಿಕಲ್ ಮೈಲ್ ಒಳಗಿನ ಭದ್ರತೆ ಕರಾವಳಿ ಕಾವಲು ಪಡೆ ಗಮನಿಸಿದರೆ ಅದರಿಂದಾಚೆ ಕೋಸ್ಟ್‌ಗಾರ್ಡ್ ಕಣ್ಗಾವಲು ಇರಲಿದೆ. ಆದರೂ ಅಕ್ರಮ ನುಸುಳುವಿಕೆ ನಿಂತಿಲ್ಲ. ಮಲ್ಪೆ ಬಂದರಿಗೆ ಆಗಿಂದಾಗೇ ಹೊರ ರಾಜ್ಯದ ಬೋಟುಗಳು ಅಕ್ರಮ ಪ್ರವೇಶ ಮಾಡುತ್ತವೆ. ಎಷ್ಟು ಜನ ಬರುತ್ತಾರೆ. ಎಷ್ಟು ಜನ ಬೋಟಿನಲ್ಲಿ ಮರಳುತ್ತಾರೆ ಮುಂತಾದ ಯಾವುದೇ ಮಾಹಿತಿ ಪೊಲೀಸರಿಗೆ ಸಿಗುತ್ತಿಲ್ಲ.
ಉತ್ತೇಜನ
ಬಂದರಿಗೆ ಅಕ್ರಮವಾಗಿ ಯಾವುದೇ ರಾಜ್ಯದ ಬೋಟು ಪ್ರವೇಶಿಸಿದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮೀನುಗಾರಿಕೆ ಇಲಾಖೆ ಅಥವಾ ಕರಾವಳಿ ಕಾವಲು ಪಡೆಗೆ ಅಧಿಕಾರವೇ ಇಲ್ಲ. ಕರಾವಳಿ ಕಾವಲು ಪಡೆಯುವರು ಬೋಟನ್ನು ತಡೆದು ನಿಲ್ಲಿಸಬಹುದು, ದಂಡ ವಿಧಿಸುವ ಅಥವಾ ಬೋಟನ್ನು ಮುಟ್ಟುಗೋಲು ಹಾಕುವ ಅಧಿಕಾರ ಇಲ್ಲ. ಇನ್ನೂ ಮೀನುಗಾರಿಕೆ ಇಲಾಖೆಯವರಿಗೆ ದಂಡ ವಿಧಿಸುವ ಅಧಿಕಾರ ಇದೆ. ಆದರೆ ದಂಡದ ಮೊತ್ತ ಕೇವಲ 5 ಸಾವಿರ ರೂ. ಮಾತ್ರ. ಹೀಗಾಗಿ ಅಕ್ರಮ ಪ್ರವೇಶ ಮಾಡುವವರಿಗೂ ಅದು ಲೆಕ್ಕಕ್ಕೆ ಇಲ್ಲದಂತಾಗಿದೆ. ಆದರೆ ಹೊರ ರಾಜ್ಯದ ಬಂದರಿಗೆ ಕರ್ನಾಟಕ ಬೋಟು ಪ್ರವೇಶ ಮಾಡಿದರೆ 10 ಲಕ್ಷ ರೂ.ಗಳ ವರೆಗೂ ದಂಡ ವಿಧಿಸಲಾಗುತ್ತದೆ. ರಾಜ್ಯದಲ್ಲೂ ಕಾನೂನು ತಿದ್ದುಪಡಿ ತರಬೇಕು ಎಂಬ ಬೇಡಿಕೆ ವರ್ಷಗಳಿಂದ ಇದೆ. ಇನ್ನೂ ತಿದ್ದುಪಡಿಯಾಗಿಲ್ಲ. 170ಕ್ಕೂ ಅಧಿಕ
ಅಕ್ರಮ ಬೋಟು ಪ್ರವೇಶ
ಒಂದು ವರ್ಷದಲ್ಲಿ ಮಲ್ಪೆ ಬಂದರಿಗೆ 170ಕ್ಕೂ ಹೊರ ರಾಜ್ಯದ ಬೋಟುಗಳು ಅಕ್ರಮ ಪ್ರವೇಶ ಮಾಡಿವೆ. ಇದರ ವೀಡಿಯೋ ಚಿತ್ರೀಕರಣ ಸಹಿತ ದಾಖಲೆ ಸಮೇತವಾಗಿ ಮೀನುಗಾರಿಕೆ ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಆದರೆ ಯಾವ ಬೋಟುಗಳ ಮಾಲಕರ ಮೇಲೂ ಗಂಭೀರವಾದ ಕ್ರಮ ಆಗಿಲ್ಲ.
Related Articles
ಜಲ ಮಾರ್ಗದಲ್ಲಿ ತಪಾಸಣೆ ಅಷ್ಟು ಸುಲಭವಿಲ್ಲ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ರಸ್ತೆ(ವಾಹನ), ರೈಲು ಅಥವಾ ವಿಮಾನದ ಮೂಲಕ ಬರುವಾಗ ತಪಾಸಣೆ ಹೆಚ್ಚಿರುತ್ತದೆ. ಆದರೆ ಬೋಟುಗಳ ಮೂಲಕ ಸುಲಭವಾಗಿ ಅಕ್ರಮ ಪ್ರವೇಶ ಮಾಡಬಹುದು. ಕರ್ನಾಟಕದ ಕರಾವಳಿಗೆ ಯಾರೇ ಬಂದರೂ ಕೇಳುವವರಿಲ್ಲ ಎಂಬ ಸ್ಥಿತಿಯಿದೆ. ಹೊರ ರಾಜ್ಯದ ಬೋಟುಗಳಲ್ಲಿ ಎಷ್ಟು ಜನ ಬಂದಿದ್ದಾರೆ, ಎಷ್ಟು ದಿನ ಆ ಬೋಟು ಇಲ್ಲಿ ತಂಗಿದೆ, ಬಂದ ಕಾರಣ ಏನು ಎಂಬಿತ್ಯಾದಿ ಯಾವುದನ್ನು ಕಾನೂನಾತ್ಮಕವಾಗಿ ಇಲ್ಲಿ ವಿಚಾರಿಸುವುದಿಲ್ಲ. ಮೀನುಗಾರರಿಂದ ದೂರು ಬಂದಾಗ ಮಾತ್ರ ಪೊಲೀಸರು ಸ್ಥಳಕ್ಕೆ ಭೇಟಿ ನೀಡುತ್ತಾರೆ. ಪೊಲೀಸರ ಮಾಹಿತಿ ಆಧರಿಸಿ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಬಂದರಿಗೆ ಬರುತ್ತಾರೆ. ರಜೆ ದಿನ ಅಥವಾ ಸಂಜೆ 6ರ ಅನಂತರ ಮೀನುಗಾರಿಕೆ ಇಲಾಖೆಯವರು ಬಂದರು ಕಡೆ ಬರುವುದೇ ಇಲ್ಲ. ಹೀಗಾಗಿ ಕಾನೂನು ಬಿಗಿಯಾಗದೆ ಅಕ್ರಮ ಪ್ರವೇಶ ತಡೆಯಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಸ್ಥಳೀಯ ಮೀನುಗಾರರು.
Advertisement
ಬೆಳಗ್ಗಿನ ಜಾವ ಅಕ್ರಮ ಪ್ರವೇಶ ಹೆಚ್ಚುಮಧ್ಯರಾತ್ರಿಯಿಂದ ಬೆಳಗ್ಗೆ 4 ಗಂಟೆ ಒಳಗೆ ಹೊರ ರಾಜ್ಯದ ಬೋಟುಗಳ ಅಕ್ರಮ ಪ್ರವೇಶ ಹೆಚ್ಚಿರುತ್ತದೆ. ಒಮ್ಮೆ ಬಂದರು ಸೇರಿದ ಮೇಲೆ ನೂರಾರು ಬೋಟುಗಳ ಮಧ್ಯೆ ಅದು ಸೇರುವುದರಿಂದ ತತ್‌ಕ್ಷಣ ಗುರುತಿಸುವುದೂ ಕಷ್ಟ. ಗುರುತಿಸಿದರೂ ಅಧಿಕಾರಿಗಳಿಗೆ ಆ ಬೋಟನ್ನು ಪ್ರತ್ಯೇಕವಾಗಿ ಹಿಡಿದಿಟ್ಟುಕೊಳ್ಳಲು ವ್ಯವಸ್ಥೆಯಿಲ್ಲ ಮತ್ತು ಸ್ಥಳವೂ ಇಲ್ಲ. ಇನ್ನೂ ಕಾರ್ಯಾಚರಣೆಗೆ ಮೀನುಗಾರಿಕೆ ಇಲಾಖೆ ಹಾಗೂ ಕರಾವಳಿ ಪೊಲೀಸ್ ಪಡೆಯಲ್ಲಿ ಸಿಬಂದಿಯೂ ಇಲ್ಲ. ಉದ್ಯೋಗ ಸುಲಭ
ಬಂದರು ಒಳಗೆ ಯಾರೇ ಬಂದರೂ ಉದ್ಯೋಗ ಸುಲಭವಾಗಿ ಸಿಗುತ್ತದೆ. ಮೀನು ಹೊರುವುದು, ಎತ್ತುವುದು, ಐಸ್ ತುಂಬುವುದು ಹೀಗೆ ಹತ್ತಾರು ಕೆಲಸ ಇರುತ್ತದೆ. ದಾಖಲೆ ಕೇಳುವವರೂ ಇಲ್ಲ. ಸುಳ್ಳು ಹೇಳಿದರೂ ನಡೆಯುತ್ತದೆ. ಈಗಂತು ಹೊರ ರಾಜ್ಯದ ಕಾರ್ಮಿಕರೇ ಹೆಚ್ಚಿರುವುದರಿಂದ(ಕನ್ನಡ ಬಾರದೆ) ಹಿಂದಿ ಅಥವಾ ಬೇರ್ಯಾವ ಭಾಷೆಯಲ್ಲಿ ಮಾತನಾಡಿದರೂ ಯಾರೂ ಸಂಶಯ ಪಡುವುದಿಲ್ಲ. ಹೀಗಾಗಿ ನಿತ್ಯವೂ ಹೊಸಬರು ಬರುತ್ತಿರುತ್ತಾರೆ. ಇಲ್ಲಿ ಅವರಿಗೆ ಯಾರ ಭಯವೂ ಇರುವುದಿಲ್ಲ. ಪೊಲೀಸ್ ಪರಿಶೀಲನೆಯಂತೂ ಇಲ್ಲವೇ ಇಲ್ಲವಾಗಿದೆ ಎನ್ನುತ್ತಾರೆ ಸ್ಥಳೀಯ ಮೀನುಗಾರರು. ಏನೇನು ಆಗಬೇಕು?
– ಬಂದರಿನ ಆಯಕಟ್ಟಿನ ಪ್ರದೇಶದಲ್ಲಿ ಸಿಸಿಟಿವಿ ಅಳವಡಿಕೆ ಮತ್ತು ನಿರಂತರ ಮೇಲ್ವಿಚಾರಣೆ.
– ಹೊರ ರಾಜ್ಯದ ಬೋಟುಗಳು ಬಂದಾಗ ಕೂಲಂಕಷ ಪರಿಶೀಲನೆ ಅಗತ್ಯ.
– ಹೊರ ರಾಜ್ಯದ ಬೋಟುಗಳ ಪೂರ್ಣ ಮಾಹಿತಿ ಪಡೆದು ಎಷ್ಟು ಜನ ಬಂದಿದ್ದಾರೆ, ವಾಪಸ್ ಎಷ್ಟು ಜನ ಹೋಗಿದ್ದಾರೆ ಎಂಬುದನ್ನು ದಾಖಲಿಸಿಕೊಳ್ಳುವುದು.
– ಹೊಸ ಕಾರ್ಮಿಕರು ಬಂದಾಗ ಅವರ ದಾಖಲೆ ಪರಿಶೀಲನೆ.
– ಮೀನುಗಾರರ ಸಂಘಟನೆಗಳೊಂದಿಗೆ ಇಲಾಖೆ ಸಮನ್ವಯ ಸಾಧಿಸಿಕೊಳ್ಳುವುದು. ಮಲ್ಪೆ ಬಂದರಿನಲ್ಲಿ ಭದ್ರತ ವ್ಯವಸ್ಥೆ ಇನ್ನಷ್ಟು ಉತ್ತಮಗೊಳಿಸಲು ಪೊಲೀಸ್ ಹಾಗೂ ಕರಾವಳಿ ಕಾವಲು ಪಡೆಗೆ ಸೂಚನೆ ನೀಡಲಾಗುವುದು. ಅಕ್ರಮವಾಗಿ ಪ್ರವೇಶಿಸುವ ಬೋಟುಗಳಲ್ಲಿರುವ ಮೀನನ್ನು ಮುಟ್ಟುಗೋಲು ಹಾಕಿಕೊಂಡು, ಮೀನಿನ ಒಟ್ಟು ಮೌಲ್ಯದ 5 ಪಟ್ಟು ದಂಡ ವಿಧಿಸಲು ಅವಕಾಶ ಇದೆ. ಈ ದಂಡಾಸ್ತ್ರ ಪ್ರಯೋಗಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಾನೂನು ತಿದ್ದುಪಡಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
-ಡಾ| ಕೆ. ವಿದ್ಯಾಕುಮಾರಿ,
ಜಿಲ್ಲಾಧಿಕಾರಿ ಉಡುಪಿ ಕಾರ್ಮಿಕರ ವಿಚಾರವಾಗಿ ಶೀಘ್ರವೇ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದೇವೆ. ಅಲ್ಲದೆ ಕಾರ್ಮಿಕರನ್ನು ಕರೆದುಕೊಂಡು ಬರುವವರಿಗೂ ಈ ಬಗ್ಗೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದೇವೆ. ಬಂದರು ಭದ್ರತೆ ಎನ್ನುವುದನ್ನು ಹಲವು ಆಯಾಮಗಳಲ್ಲಿ ನೋಡಬೇಕಾಗುತ್ತದೆ.
-ಡಾ| ಕೆ. ಅರುಣ್, ಎಸ್‌ಪಿ, ಉಡುಪಿ ಮಲ್ಪೆ ಬಂದರು ಭದ್ರತೆಗೆ ಸಂಬಂಧಿಸಿ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಾ ಬಂದಿದ್ದೇವೆ. ಅಕ್ರಮವಾಗಿ ಪ್ರವೇಶಿಸುವವರ ಪತ್ತೆಗೂ ಕ್ರಮ ವಹಿಸುತ್ತಿದ್ದೇವೆ. ಈಗಾಗಲೇ ಮೀನುಗಾರರಿಗೆ, ಫಿಶ್‌ಮೀಲ್ ಮಾಲಕರಿಗೆ ಈ ಬಗ್ಗೆ ಸಂದೇಶ ರವಾನಿಸಿದ್ದೇವೆ. ಹೊರ ರಾಜ್ಯದ ಕಾರ್ಮಿಕರ ವಿವರನ್ನು ಸಂಗ್ರಹಿಸುತ್ತಿದ್ದೇವೆ.
-ಮಿಥುನ್, ಎಸ್‌ಪಿ, ಕರಾವಳಿ ಕಾವಲು ಪಡೆ ರಾಜು ಖಾರ್ವಿ ಕೊಡೇರಿ