Advertisement

CCB ಪೊಲೀಸರ ಕಾರ್ಯಾಚರಣೆ: ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ನಾಲ್ವರ ಬಂಧನ

11:19 PM Aug 19, 2024 | Team Udayavani |

ಮಂಗಳೂರು: ಕೇರಳದಲ್ಲಿ ಖೋಟಾ ನೋಟು ಮುದ್ರಿಸಿ ಮಂಗಳೂರಿನಲ್ಲಿ ಚಲಾವಣೆ ಮಾಡುತ್ತಿದ್ದ ನಾಲ್ವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Advertisement

ಕಾಸರಗೋಡು ಕೊಳತ್ತೂರಿನ ವಿ. ಪ್ರಿಯೇಶ್‌ (38), ಕಾಸರಗೋಡು ಮುಳಿಯಾರು ಗ್ರಾಮದ ವಿನೋದ್‌ ಕುಮಾರ್‌ ಕೆ. (33), ಕಾಸರಗೋಡು ಪೆರಿಯಾದ ಅಬ್ದುಲ್‌ ಖಾದರ್‌ ಎಸ್‌.ಎ. (58) ಮತ್ತು ಪುತ್ತೂರು ಬಲಾ°ಡಿನ ಆಯೂಬ್‌ ಖಾನ್‌ (51) ಬಂಧಿತರು.

ಆರೋಪಿಗಳಿಂದ 2,13,500 ರೂ. ಮೌಲ್ಯದ 500 ರೂ. ಮುಖಬೆಲೆಯ 427 ಖೋಟಾ ನೋಟುಗಳು ಹಾಗೂ 4 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಲಾಡ್ಜ್ ಬಳಿ ಚಲಾವಣೆಗೆ ಯತ್ನ
ಆರೋಪಿಗಳು ಸೋಮವಾರ ನಗರದ ಲಾಡ್ಜ್ ಬಳಿ ಖೋಟಾ ನೋಟುಗಳ ಚಲಾವಣೆಗೆ ಯತ್ನಿಸು ತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದರು. ಆರೋಪಿಗಳ ಪೈಕಿ ಪ್ರಿಯೇಶ್‌ ಕಾಸರಗೋಡು ಜಿಲ್ಲೆಯ ಚೆರ್ಕಳದಲ್ಲಿ ಪ್ರಿಂಟಿಂಗ್‌ ಪ್ರಸ್‌ ಹೊಂದಿದ್ದು ಅಲ್ಲಿ ಖೋಟಾ ನೋಟು ಗಳನ್ನು ಮುದ್ರಿಸುತ್ತಿದ್ದ. ಖೋಟಾ ನೋಟುಗಳನ್ನು ತಯಾರಿಸಲು ಬೇಕಾದ ಕಚ್ಚಾ ಸಾಮಗ್ರಿಗಳನ್ನು ಕೇರಳದ ಕೋಯಿಕ್ಕೋಡ್‌ ಮತ್ತು ಹೊಸದಿಲ್ಲಿಯಿಂದ ಖರೀದಿಸುತ್ತಿದ್ದ. ಖೋಟಾ ನೋಟುಗಳನ್ನು ಮುದ್ರಿಸುವ ವಿಧಾನವನ್ನು ಯೂಟ್ಯೂಬ್‌ ಮೂಲಕ ವೀಕ್ಷಿಸುತ್ತಿದ್ದ. ಈತ ಮುದ್ರಣ ತಂತ್ರಜ್ಞಾನದಲ್ಲಿ 20 ವರ್ಷಗಳ ಅನುಭವ ಹೊಂದಿದ್ದಾನೆ. ಈತ ಸಾಕಷ್ಟು ತುಂಬಾ ಸಾಲ ಹೊಂದಿದ್ದ. 1 ಲಕ್ಷ ನೋಟುಗಳನ್ನು ಮುದ್ರಿಸಲು 25,000 ರೂ.ಗಳನ್ನು ಪಡೆದುಕೊಳ್ಳುತ್ತಿದ್ದ ಎಂದು ಪೊಲೀಸ್‌ ಆಯುಕ್ತರು ತಿಳಿಸಿದರು.

ಆರೋಪಿಗಳು ಈ ಖೋಟಾ ನೋಟುಗಳನ್ನು ಕೇರಳದಿಂದ ತಯಾ ರಿಸಿಕೊಂಡು ತಂದು ಮಂಗಳೂರು ನಗರ ದಲ್ಲಿ ಚಲಾವಣೆ ಮಾಡಲು ಯತ್ನಿಸು ತ್ತಿದ್ದರು. ಸುಮಾರು 4 ತಿಂಗಳು ಗಳಿಂದ ಈ ಕೃತ್ಯ ನಡೆಸುತ್ತಿರುವುದು ಗೊತ್ತಾಗಿದೆ. ಈ ಜಾಲದಲ್ಲಿ ಹಲವಾರು ಮಂದಿ ಭಾಗಿಯಾಗಿರುವ ಸಾಧ್ಯತೆಯಿದ್ದು ಈ ನಿಟ್ಟಿನಲ್ಲಿ ತನಿಖೆ ಕೈಗೊಳ್ಳ ಲಾಗುವುದು. ಆರೋಪಿಗಳು ಉನ್ನತ ಗುಣಮಟ್ಟದಲ್ಲಿಯೇ ಖೋಟಾ ನೋಟುಗಳನ್ನು ತಯಾರಿಸು ತ್ತಿದ್ದರು. ಇವುಗಳನ್ನು ಯಂತ್ರಗಳ ಸಹಾಯವಿಲ್ಲದೆ ಪತ್ತೆ ಹಚ್ಚುವುದು ಕಷ್ಟಸಾಧ್ಯವಿತ್ತು ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

Advertisement

ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಗೀತಾ ಡಿ. ಕುಲಕರ್ಣಿ, ಪೊಲೀಸ್‌ ನಿರೀಕ್ಷಕ ಶ್ಯಾಮ್‌ ಸುಂದರ್‌ ಎಚ್‌.ಎಂ., ಸಿಸಿಬಿ ಪಿಎಸ್‌ಐಯವರಾದ ನರೇಂದ್ರ, ಸುದೀಪ್‌, ಎಎಸ್‌ಐ ಮೋಹನ್‌ ಕೆ.ವಿ., ರಾಮ ಪೂಜಾರಿ, ಶೀನಪ್ಪ, ಸುಜನ್‌ ಶೆಟ್ಟಿ ಪಾಲ್ಗೊಂಡಿದ್ದರು.ಡಿಸಿಪಿ ಸಿದ್ಧಾರ್ಥ ಗೋಯಲ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next