ಅಪೌಷ್ಟಿಕತೆಯು ಸಾಮಾಜಿಕ ಪಿಡುಗಾಗಿದೆ. ಹದಿಹರೆಯದವರು ಫಾಸ್ಟ್ ಫುಡ್‌ಗಳಿಗೆ ದಾಸರಾಗುತ್ತಾರೆ, ಇವುಗಳೇನೋ ನಮ್ಮ ನಾಲಗೆಗೆ ಆನಂದದ ಸ್ವಾದವನ್ನು ನೀಡುತ್ತದೆ. ಆದರೆ, ಆರೋಗ್ಯಕ್ಕೆ ಮಾರಕವಾಗಿರುತ್ತದೆ ಎಂಬುದನ್ನು ಸೌಂದರ್ಯದ ದೃಷ್ಟಿಯಿಂದ ಮರೆತೇಬಿಟ್ಟಿದ್ದಾರೆ.
ಫಾಸ್ಟ್‌ಫುಡ್‌ಗಳಲ್ಲಿ ಫೋಷಕಾಂಶಗಳು ದೇಹಕ್ಕೆ ಬೇಕಾದ ಅಗತ್ಯ ಪ್ರಮಾಣದಲ್ಲಿ ಇರುವುದಿಲ್ಲ. ಅತಿಯಾದ ಫಾಸ್ಟ್ ಫುಡ್‌ಗಳ ಬಳಕೆಯಿಂದಾಗಿ ದೇಹದ ಆರೋಗ್ಯವೂ ಹದಗೆಡಲು ಆಮಂತ್ರಣ ನೀಡುವುದಂತೂ ನಗ್ನ ಸತ್ಯ.
ದೇಹ ಬಳುಕುವ ಬಳ್ಳಿಯಂತಿರಬೇಕು ಎಂಬುದು ಈಗಿನ ಯುವತಿಯರ ಆಕಾಂಕ್ಷೆ. ತೆಳ್ಳಗಿರುವವರು ಸುಂದರಿಯರು ಎಂಬುದು ಇಂದಿನ ಸೌಂದರ್ಯ ಮೀಮಾಂಸೆ ಕೂಡ ಹೌದು. ಬಹುತೇಕರು ಡಯೆಟ್ ಹೆಸರಿನಲ್ಲಿ ತಮ್ಮ ಶರೀರವನ್ನು ದಂಡಿಸುವ, ಬಳಲಿಸುವ ಕಾರ್ಯಕ್ಕೆ ಮುಂದಾಗುತ್ತಾರೆ. ಇದು ಮೂರ್ಖತನವೋ ಅಥವಾ ಬುದ್ಧಿಹೀನತೆಯೋ ಎಂದು ಅರ್ಥವಾಗುತ್ತಿಲ್ಲ. ಇದು ಸ್ವಲ್ಪ ದಿನದ ಮಟ್ಟಿಗೆ ಖುಷಿಯನ್ನು ಮತ್ತು ಫಲವನ್ನು ನೀಡಬಹುದು, ಆದರೆ, ಮುಂದಿನ ಹಂತಗಳಲ್ಲಿ ಅಪೌಷ್ಟಿಕತೆಯ ಬಹುದೊಡ್ಡ ಸಮಸ್ಯೆ ತಂದೊಡ್ಡುವುದು ಖಚಿತ.
ಹದಿಹರೆಯದ ಹಂತಗಳಲ್ಲಿ ಪೌಷ್ಟಿಕಯುಕ್ತವಾದ ಆಹಾರ ಅಂದರೆ ಪ್ರೊಟೀನ್, ಜೀವಸತ್ವಗಳು ಮತ್ತು ಕಬ್ಬಿಣಾಂಶವುಳ್ಳ ಆಹಾರ ಪದಾರ್ಥಗಳು ನಮ್ಮ ದೇಹಕ್ಕೆ ಅಗತ್ಯ ಪ್ರಮಾಣದಲ್ಲಿ ಬೇಕಾಗಿರುತ್ತದೆ.
ಇದನ್ನೆಲ್ಲ ಹೊರತುಪಡಿಸಿ ಇನ್ನು ಅನೇಕ ಹದಿಹರೆಯದವರು ಮದ್ಯ ಮತ್ತು ಮಾದಕ ವಸ್ತು ಎಂಬ ಬಳಕೆಗೆ ದಾಸರಾಗಿ ಕ್ಷಣಕಾಲದ ಖುಷಿಯನ್ನು ಅನುಭವಿಸಲು ಹಾಗೆಯೇ ಹೊಸ ಅನುಭವವನ್ನು ಪಡೆಯಲು ಹಾತೊರೆಯುತ್ತಾರೆ. ಅದರ ಜೊತೆಗೆ ವಯಸ್ಕರು ಮಾಡುವ ಕೆಲಸ-ಕಾರ್ಯ ಮತ್ತು ಚಟುವಟಿಕೆಯನ್ನು ತಾವು ಕೂಡ ಮಾಡಲು ಬಯಸುತ್ತಾರೆ. ತಮ್ಮ ನೋವುಗಳನ್ನು ಮರೆಯಬೇಕೆಂಬ ಕೆಟ್ಟ ಛಲವನ್ನು ಹೊಂದಿರುತ್ತಾರೆ. ಇದರ ಪರಿಣಾಮವಾಗಿ ನಶೆ ತರಿಸುವ ವಸ್ತುಗಳನ್ನು ಉಪಯೋಗಿಸಲು ಪ್ರಾರಂಭಿಸುತ್ತಾರೆ. ಆದರೆ, ಇಂತಹ ಮಾದಕ ಪದಾರ್ಥಗಳು ನಮ್ಮ ದೇಹಕ್ಕೆ ಅಗತ್ಯವೇ ಇರುವುದಿಲ್ಲ. ಇಂದಿನ ಯುವಜನತೆಯ ದೃಷ್ಟಿಕೋನವನ್ನು ಫ್ಯಾಶನ್ ಅನ್ನೋ ಮೂಢನಂಬಿಕೆಯಿಂದ ಹೋಗಲಾಡಿಸಿ ಆರೋಗ್ಯವೇ ಭಾಗ್ಯ ಎನ್ನುವತ್ತ ಕರೆದೊಯ್ಯೋಣ.
ವೃಂದಾ ಎಸ್‌ಡಿಎಂ ಕಾಲೇಜು, ಉಜಿರೆ