ಉಳ್ಳಾಲ : ರಾಜ್ಯದಲ್ಲೇ ಮಾದರಿಯಾದ ಅತ್ಯುತ್ತಮ ಜೈಲು ನಿರ್ಮಾಣಕ್ಕೆ ಇರಾ ಗ್ರಾಮವನ್ನು ಆಯ್ಕೆ ಮಾಡಿದ್ದು, ತಡೆಗೋಡೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದೆ. 200 ಕೋಟಿ ರೂ. ವೆಚ್ಚದಲ್ಲಿ ಜೈಲು ನಿರ್ಮಾಣಕ್ಕೆ ಸಂಬಂಧಿಸಿದ ಕಡತ ಸರಕಾರದ ಕ್ಯಾಬಿನೆಟ್‌ನ ಅಂಗೀಕಾರಕ್ಕೆ ಬಂದಿದ್ದು ಶೀಘ್ರದಲ್ಲೇ ಅನುಮೋದನೆ ದೊರೆಯಲಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕುರ್ನಾಡು ಮತ್ತು ಚೇಳೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿರುವ ನೂತನ ಕೇಂದ್ರ ಕಾರಾಗೃಹದ ನಿವೇಶನದ ಆವರಣ ಗೋಡೆ ನಿರ್ಮಾಣಕ್ಕೆ ಶನಿವಾರ ಶಂಕುಸ್ಥಾಪನೆಗೈದು ಅವರು ಮಾತನಾಡಿದರು.
ರಾಜ್ಯಕ್ಕೆ ಮಾದರಿಯಾಗಿ ನಿರ್ಮಾಣವಾಗಲಿರುವ ಕೇಂದ್ರ ಕಾರಾಗೃಹಕ್ಕೆ ಹಂತಹಂತವಾಗಿ ಕಾಮಗಾರಿ ನಡೆಯಲಿದೆ. ಮೊದಲ ಹಂತದ ತಡೆಗೋಡೆ ನಿರ್ಮಾಣಕ್ಕೆ ಎರಡು ಕೋಟಿ ರೂ. ಟೆಂಡರ್ ಆಗಿ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಮುಖ್ಯ ಕಾಮಗಾರಿಗೆ 200 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರವೇ ಯೋಜನೆಗೆ ಅನುಮೋದನೆ ಸಿಗಲಿದೆ ಎಂದರು.
ರಸ್ತೆ ಕಾಮಗಾರಿ: ಅಸಮಾಧಾನ
ಮೂಳೂರಿನಿಂದ ಕೆಐಡಿಬಿಐ ವಲಯ ತನಕ ಕೆಐಡಿಬಿಐ ರಸ್ತೆಗೆ ಅಷ್ಟೊಂದು ಖರ್ಚು ಮಾಡಿದ್ದು ಮುಳೂರು ಬಳಿಯಲ್ಲಿಯೇ ಕೆಲವೇ ಮೀ. ರಸ್ತೆ ದುರಸ್ತಿ ಮಾಡಲು ಬಾಕಿ ಉಳಿಸಿದ್ದಕ್ಕೆ ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.
ಸ. ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್ ಭಟ್ ಜೈಲಿನ ಕಾಮಗಾರಿಯ ಮಾಹಿತಿ ನೀಡಿದರು. ಜಿ. ಪಂ. ಸದಸ್ಯೆ ಮಮತಾ ಗಟ್ಟಿ. ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕಾಜವ, ಕೆಐಡಿಬಿಐ ಅಧಿಕಾರಿ ಕುಮಾರಪ್ಪ, ಕಾಂಗ್ರೆಸ್ ಕ್ಷೇತ್ರ ಉಸ್ತುವಾರಿ, ರಾಜಶೇಖರ ಕೋಟ್ಯಾನ್, ತಾ.ಪಂ. ಸದಸ್ಯ ಹೈದರ್ ಕೈರಂಗಳ, ಪದ್ಮಾವತಿ, ಉಮಾ ವತಿ, ಪಜೀರು ಗ್ರಾ.ಪಂ.ಅಧ್ಯಕ್ಷ ಸೀತಾ ರಾಮ ಶೆಟ್ಟಿ, ತಾ. ಪಂ. ಮಾಜಿ ಸದಸ್ಯ ಉಮ್ಮರ್ ಪಜೀರು, ಗಣೇಶ್ ಪೂಜಾರಿ ಕೆಐಡಿಬಿ ಹಾಗೂ ಕಾರಾ ಗೃಹ ಅಧಿಕಾರಿಗಳು, ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರ.ಕಾ.ಅಬ್ದುಲ್ ಜಲೀಲ್ ಮೋಂಟುಗೋಳಿ, ನಾಸಿರ್ ನಡು ಪದವು, ದೇವದಾಸ ಭಂಡಾರಿ ಕುರ್ನಾಡು ಹಾಗೂ ಪದ್ಮನಾಭ ನರಿಂಗಾನ ಉಪಸ್ಥಿತರಿದ್ದರು. ಅಬ್ದುಲ್ ರಝಾಕ್ ಕುಕ್ಕಾಜೆ ನಿರೂಪಿಸಿದರು. ಜೈಲು ಅಧಿಕಾರಿ ಬಿ.ಆರ್. ಅಂದನ್ ವಂದಿಸಿದರು.