Advertisement

ಮುಖದ ಅಂದವ ಇಮ್ಮಡಿಗೊಳಿಸುವ ಬಿಂದಿಗಳು

06:25 AM Sep 08, 2017 | Team Udayavani |

ಭಾರತೀಯ ಸಂಪ್ರದಾಯದಲ್ಲಿ ಬಿಂದಿಗಳು ಅಥವಾ ಹಣೆಯ ಬೊಟ್ಟಿಗೆ ಬಹಳ ಪ್ರಾಶಸ್ತ್ಯ ಮತ್ತು ಮಹತ್ವವನ್ನು ನೀಡಲಾಗಿದೆ. ನಮ್ಮ  ಪ್ರತಿಯೊಂದೂ ಸಾಂಸ್ಕೃತಿಕ ಸಂಪ್ರದಾಯಗಳಿಗೂ ಅದರದೇ ಆದ ವೈಜ್ಞಾನಿಕ ಹಿನ್ನಲೆ ಮತ್ತು ಕಾರಣಗಳಿರುವುದನ್ನು ಕಾಣುತ್ತೇವೆ. ಕಾಲ್ಗೆಜ್ಜೆಗಳು, ಕೈ ಬಳೆಗಳು, ಮೂಗುತಿ, ಕಿವಿಯೋಲೆ ಮತ್ತು ಹಣೆಯ ಬೊಟ್ಟುಗಳು ಇವೇ ಮೊದಲಾದ ಸಾಂಪ್ರದಾಯಿಕ ಆಭರಣಗಳ ಧರಿಸುವಿಕೆಯಿಂದಾಗುವ ಅನೇಕ ಅನುಕೂಲತೆಗಳನ್ನು ನಮ್ಮ ವಿಜ್ಞಾನವು ವಿವರಿಸುತ್ತದೆ. ಬೊಟ್ಟನ್ನು ಸಾಮಾನ್ಯವಾಗಿ ಎರಡು ಹುಬ್ಬುಗಳ ಕೂಡುವಿಕೆಯ ಸ್ವಲ್ಪಮೇಲೆ ಇಟ್ಟುಕೊಳ್ಳುವುದು ಸರಿಯಾದ ಕ್ರಮವಾಗಿದೆ. ಈ ಜಾಗವು ನಮ್ಮ ಜ್ಞಾನಚಕ್ರವನ್ನು ತಲುಪುವ ನರಕ್ಕೆ ಸಂಬಂಧಿಸಿರುತ್ತದೆ ಎನ್ನಲಾಗುತ್ತದೆ. ಈ ಬಿಂದಿಗಳು ಕೇವಲ ನಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುವುದಷ್ಟೇ ಅಲ್ಲದೆ ದೇಹಾರೋಗ್ಯವನ್ನೂ  ಮತ್ತು ಮಾನಸಿಕ ಆರೋಗ್ಯವನ್ನೂ ಹೆಚ್ಚಿಸುವಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಇವುಗಳನ್ನು ಧರಿಸುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಎನ್ನಲಾಗಿದೆ. ಆದ್ದರಿಂದ ಕುಂಕುಮದ ಬೊಟ್ಟನ್ನು ಇಡಲು ಲಿಂಗಬೇಧವಿರುವುದಿಲ್ಲ. ಇನ್ನು ಹಿಂದಿನಿಂದ ಧರಿಸುತ್ತಿದ್ದ ಕುಂಕುಮದ ಬೊಟ್ಟುಗಳು ಇಂದು ಬಿಂದಿಗಳು ಅಥವಾ ಆರ್ಟಿಫಿಶಿಯಲ್‌ ಬೊಟ್ಟುಗಳ ರೂಪವನ್ನು ಪಡೆದಿದೆ. ಅಲ್ಲದೆ ಈ ಬೊಟ್ಟುಗಳು ಕೂಡ ಸ್ಟೈಲ್‌ ಫ್ಯಾಕ್ಟರ್‌ ಆಗಿವೆ. ಇಂತಹ ಬಿಂದಿಗಳಲ್ಲಿ ಹಲವು ಪ್ರಕಾರಗಳಿವೆ. ಅವುಗಳ ಬಗೆಗೆ ಒಂದಿಷ್ಟು ಬೆಳಕನ್ನು ಚೆಲ್ಲುವ ಮಾಹಿತಿಗಳಿಲ್ಲಿವೆ.

Advertisement

1.ಸಾಂಪ್ರದಾಯಿಕ ಕೆಂಪು  ಬಿಂದಿಗಳು: ಸಾಂಪ್ರದಾಯಿಕ ಕೆಂಪು ಬಿಂದಿಗಳಲ್ಲಿ ಇಂದು ಟ್ರೆಂಡಿನಲ್ಲಿರುವ ಬಗೆಯೆಂದರೆ ದೊಡ್ಡ ಗಾತ್ರದ ಕೆಂಪು ಬಿಂದಿಗಳು. ಎಥಿಕ್‌ ಸೀರೆಗಳಿಗೆ ಮತ್ತು ಎಥಿ°ಕ್‌ ಆಭರಣಗಳೊಂದಿಗೆ ಈ ಬಗೆಯ ದೊಡ್ಡ ಗಾತ್ರದ ಬಿಂದಿಗಳು ಬಹಳ ಚೆನ್ನಾಗಿ ಕಾಣುತ್ತವೆ. ಈ ಬಗೆಯ ಕಾಂಬಿನೇಷನ್ನನ್ನು ಹಲವು ಸೆಲೆಬ್ರಿಟಿಗಳು ಬಳಸುವುದನ್ನು ಕಾಣಬಹುದಾಗಿದೆ. ಮುಖದ ಗಾತ್ರಕ್ಕನುಗಣವಾಗಿ ಬಿಂದಿಯ ಆಯ್ಕೆ ಸೂಕ್ತವಾದುದಾಗಿದೆ. ಇವುಗಳು ಮುಖಕ್ಕೆ ಮತ್ತು ದಿರಿಸಿಗೆ ಬೇಕಾದ ಸಾಂಪ್ರದಾಯಿಕ ಲುಕ್ಕನ್ನು ಕೊಡುತ್ತವೆ.

2.ಮಹಾರಾಷ್ಟ್ರ ಮಾದರಿಯ ಬಿಂದಿಗಳು: ಅರ್ಧ ಚಂದ್ರಾಕಾರದ ಬಿಂದಿಗಳಿವಾಗಿವೆ. ಆದರಿಂದಲೇ ಇವುಗಳನ್ನು ಚಂದ್ರಕೋರ್‌ ಬಿಂದಿ ಅಥವಾ ಚಂದ್ರ ಬಿಂದಿಗಳು ಎನ್ನಲಾಗುತ್ತವೆ. ಮೂಗಿನ ನತ್ತು ಮತ್ತು ಅರ್ಧ ಚಂದ್ರಾಕಾರದ ಬಿಂದಿಗಳು ಮಹಾರಾಷ್ಟ್ರೀಯನ್ನರ ಸಾಂಪ್ರದಾಯಿಕ ಆಭರಣಗಳಲ್ಲಿ ಕೆಲವೆನಿಸಿವೆ. ಇವುಗಳು ನೋಡಲು ಬಹಳ ಸುಂದರವಾಗಿರುತ್ತವೆ ಮತ್ತು ಸಾಂಪ್ರದಾಯಿಕ ಸೀರೆಗಳಿಗೆ ಮತ್ತು ಎಥಿ°ಕ್‌ ಉಡುಗೆಗಳಿಗೆ ಸೂಕ್ತವೆನಿಸುತ್ತವೆ.

3.ಜ್ಯಾಮಿತೀಯ ಆಕೃತಿಯ ಬಿಂದಿಗಳು: ವಿವಿಧ ಬಗೆಯ ಜಿಯೋಮೆಟ್ರಿಕ್‌ ಗಳಲ್ಲಿರುವ ಬಿಂದಿಗಳಿವಾಗಿವೆ. ತ್ರಿಕೋನ, ಚೌಕ, ಪಂಚ ಭುಜಾಕೃತಿಗಳು ಹೀಗೆ ಬಗೆ ಬಗೆ ಆಕಾರದ ಬಿಂದಿಗಳು ದೊರೆಯುತ್ತವೆ. ನಾವು ಧರಿಸುವ ಬಿಂದಿಗಳು ನಮ್ಮ ಮುಖದ ಆಯಾಮವನ್ನು ಬದಲಿಸುವಂತಿರುತ್ತವೆ. ಸಂದರ್ಭಗಳಿಗೆ ತಕ್ಕಂತಹ ಬಿಂದಿಗಳನ್ನು ಆಯ್ಕೆ ಮಾಡುವುದು ಸಮಂಜಸವಾದುದಾಗಿದೆ.

4. ಟ್ರೈಬಲ್‌ ಮಾದರಿಯ ಬಿಂದಿಗಳು: ಬುಡಕಟ್ಟು ಜನಾಂಗಗಳಿಂದ ಪ್ರೇರಿತವಾದ ಆಭರಣಗಳೆಲ್ಲವೂ ಸದ್ಯದ ಟ್ರೆಂಡಿ ಬಗೆಗಳಾಗಿವೆ. ಅಂತೆಯೇ ಅವರು ಬಳಸುವ ಶೈಲಿಯನ್ನು ಆಧಾರವಾಗಿಸಿಕೊಂಡು ತಯಾರಿಸಿದ ಬಿಂದಿಗಳು. ಇವುಗಳ ವಿಚಿತ್ರವೆನಿಸುವ ಆದರೆ ಸುಂದರವಾಗಿರುವ ಡಿಸೈನುಗಳೇ ಇವುಗಳ ವಿಶೇಷತೆಯಾಗಿದೆ. ಇವುಗಳು ಫ್ಯೂಷನ್‌ ವೇರುಗಳಿಗೆ ಮತ್ತು ಸೀರೆಗಳಿಗೆ ಬಹಳ ಚೆನ್ನಾಗಿ ಒಪ್ಪುತ್ತವೆ. ಕಾಟನ್‌ ದಿರಿಸುಗಳಿಗೆ ಹೇಳಿಮಾಡಿಸಿದಂತಿರುತ್ತವೆ. ಸಿಂಪಲ್ಲಾದ ಮೂಗುತಿಯೊಂದಿಗೆ ಈ ವಿಭಿನ್ನ ಬಗೆಯ ಬಿಂದಿಗಳು ಎಲಿಗ್ಯಾಂಟ್‌ ಲುಕ್ಕನ್ನು ನೀಡುತ್ತವೆ. ಈ ಬಿಂದಿಗಳ ಧರಿಸುವುದಕ್ಕೆ ವಯಸ್ಸಿನ ಮಿತಿಯಿರುವುದಿಲ್ಲ.

Advertisement

5. ವರ್ಟಿಕಲ್‌ ಬಿಂದಿಗಳು: ಇವೂ ಕೂಡ ಎವರ್‌ಗ್ರೀನ್‌ ಎನಿಸಿಕೊಳ್ಳುವ ಬಿಂದಿಗಳು. ಹೆಸರೇ ಹೇಳುವಂತೆ ಲಂಬವಾಗಿರುವ ಇವು ಸರಳವಾದ ಮತ್ತು ಹಲವು ಡಿಸೈನುಗಳು ಜಡಿಸಿರುವಂತಹ ಬಗೆಗಳಲ್ಲಿಯೂ ದೊರೆಯುತ್ತವೆ. ಬೇಕಾದ ಬಣ್ಣಗಳಲ್ಲಿ ದೊರೆಯುವುದರಿಂದ ಬಟ್ಟೆಗೆ ಮ್ಯಾಚ್‌ ಆಗುವಂತಹ ಬಿಂದಿಗಳನ್ನು ಕೊಳ್ಳುವಿಕೆಗೆ ಬಹಳಷ್ಟು ಆಯ್ಕೆಗಳಿರುತ್ತವೆ. ಇವುಗಳನ್ನು ಧರಿಸಿದಾಗ ಮುಖವು ಸ್ವಲ್ಪಉದ್ದವಾಗಿ ಕಾಣುವುದರಿಂದ ಸ್ವಲ್ಪ$ವೃತ್ತಾಕಾರದ ಮುಖವುಳ್ಳವರಿಗೆ ಹೆಚ್ಚು ಸೂಕ್ತವೆನಿಸುತ್ತದೆ. ಇವುಗಳು ಕೂಡ ಕ್ಯಾಷುವಲ್‌ ಆಗಿ ಅಥವಾ ಕೆಲವು ಫ್ಯೂಷನ್‌ವೇರುಗಳಿಗೆ ಮ್ಯಾಚ್‌ ಮಾಡಿಕೊಳ್ಳಬಹುದಾಗಿದೆ.

6. ಸ್ನೇಕ್‌ ಮಾದರಿಯ ಬಿಂದಿಗಳು: ನಿಮ್ಮ ಟ್ರೆಡಿಶನಲ್‌ ದಿರಿಸುಗಳಿಗೆ ವೈಲ್ಡ… ಲುಕ್ಕನ್ನು ನೀಡಬೇಕಾದರೆ ಈ ವಿಧದ ಬಿಂದಿಗಳನ್ನು ಬಳಸಬಹುದು. ಇವುಗಳು ಹೆಸರಿಗೆ ತಕ್ಕಂತೆ ಹಾವಿನಂಥ ವಕ್ರ ವಕ್ರವಾದ ಮಾದರಿಯಲ್ಲಿರುತ್ತವೆ. ಇವುಗಳಲ್ಲಿ ಸಾಧಾರಣವಾದ ಮಾದರಿ ಮತ್ತು ಅತ್ಯಂತ ಗ್ರ್ಯಾಂಡ್‌ ಲುಕ್ಕಿರುವ ಬಿಂದಿಗಳೂ ದೊರೆಯುತ್ತವೆ. ಮುಖದ ಅಂದವನ್ನು ಹೆಚ್ಚಸುತ್ತವೆ. ಇವುಗಳು ವೆಸ್ಟರ್ನ್ ಮಾದರಿಯ ಬಟ್ಟೆಗಳನ್ನು ಹೊರತುಪಡಿಸಿ ಎಥಿಕ್‌ ಮತ್ತು ಫ್ಯಾಶನ್‌ ಎರಡೂ ಬಗೆಯ ದಿರಿಸುಗಳಿಗೆ ಹೊಂದುವಂಥವುಗಳಾಗಿವೆ. 

7.ಲೇಯರ್ಡ್‌ ಬಿಂದಿಗಳು: ಇವುಗಳೂ ಇತ್ತೀಚಿನ ಟ್ರೆಂಡಿ ಬಿಂದಿಗಳೆನಿಸಿವೆ. ಹಲವು ಬಿಂದಿಗಳನ್ನು ಸೇರಿಸಿ ತಯಾರಿಸಿದ ಬಿಂದಿಗಳಿವು. ನಿರ್ದಿಷ್ಟ ಆಕಾರವಿಲ್ಲದಿದ್ದರೂ ನೋಡಲು ಮತ್ತು ಬಳಸಲು ಸುಂದರವಾಗಿರುತ್ತವೆ. ಇವು ವಿವಿಧ ಅಳತೆಗಳಲ್ಲಿ ದೊರೆಯುವುದರಿಂದ ಮುಖಕ್ಕೆ ಹೊಂದುವಂತಹ ಬಿಂದಿಯನ್ನು ಆರಿಸಿಕೊಳ್ಳಬಹುದಾಗಿದೆ.

8.ಸ್ಟೋನ್‌ ಬಿಂದಿಗಳು: ಸ್ಟೋನುಗಳು, ಕ್ರಿಸ್ಟಲ್‌ಗಳು, ಹಾಲ್‌ ಪರ್ಲುಗಳು, ಮಣಿಗಳು ಮೊದಲಾದವುಗಳಿಂದ ತಯಾರಿಸಿದ ಇವುಗಳು ಫಾರ್ಮಲ್‌ ವೇರುಗಳೊಂದಿಗೆ ಹೆಚ್ಚು ಅಂದವಾಗಿ ಒಪ್ಪುತ್ತವೆ. ಸಣ್ಣ ಸೈಜಿನ ಸ್ಟೋನ್‌ ಬಿಂದಿಗಳು ಮುಖಕ್ಕೆ ಲಕ್ಷಣವಾಗಿಯೂ ಅತಿಶಯವೂ ಆಗದಂತಹ ಲುಕ್ಕನ್ನು ನೀಡುತ್ತವೆ.

9.ಬ್ರೈಡಲ್‌ ಬಿಂದಿಗಳು: ಕೆಲವು ಜನಾಂಗಗಳ ಸಾಂಪ್ರದಾಯಿಕ ಉಡುಗೆಗಳಂತೆಯೇ ಸಾಂಪ್ರದಾಯಿಕ ಆಭರಣಗಳೂ ಇರುತ್ತವೆ. ಇವುಗಳನ್ನು ಸಾಮಾನ್ಯವಾಗಿ ಗ್ರ್ಯಾಂಡ್‌ ಲುಕ್ಕನ್ನು ನೀಡುವಂತೆಯೇ ತಯಾರಿಸಲಾಗಿರುತ್ತದೆ. ಇವುಗಳು ಸೆಟ್ಟಿನಲ್ಲಿ ಸಿಗುವಂಥವುಗಳು. ಒಂದು ಹಣೆಯ ಮಧ್ಯೆ ಎರಡು ಹುಬ್ಬುಗಳ ನಡುವೆ ಧರಿಸುವ ಸ್ವಲ್ಪದೊಡ್ಡ ಗಾತ್ರದ ಬಿಂದಿ. ಇನ್ನೊಂದು ಸಣ್ಣ ಬಿಂದಿಗಳು. ಇವುಗಳನ್ನು ಹುಬ್ಬಿನ ಮೇಲ್ಭಾಗಕ್ಕೆ ಧರಿಸುವಂಥವುಗಳಾಗಿರುತ್ತವೆ. ಸಂಪೂರ್ಣವಾದ ಬ್ರೈಡಲ್‌ ಲುಕ್ಕನ್ನು ನೀಡಿ ಮುಖದ ಅಂದವನ್ನು ಇಮ್ಮಡಿಗೊಳಿಸುವಲ್ಲಿ ಈ ಬಗೆಯ ಬಿಂದಿಗಳು ಮುಂಚೂಣಿಯಲ್ಲಿರುತ್ತವೆ.

ಹೀಗೆ ಹಲವಾರು ಬಗೆಯ ಬಿಂದಿಗಳು ಇಂದು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಸಂದರ್ಭಕ್ಕೆ ತಕ್ಕಂತಹ ಮತ್ತು ಮುಖಕ್ಕೆ ಒಪ್ಪುವಂತಹ ಬಿಂದಿಗಳ ಆಯ್ಕೆ ಮಾಡುವುದು ಸೂಕ್ತವಾದುದು. ಬಿಂದಿಗಳು ಮುಖದ ಅಂದವನ್ನ ಹೆಚ್ಚಿಸುವುದರೊಂದಿಗೆ ತೊಟ್ಟಂತಹ ಉಡುಗೆಯ ಮೆರುಗನ್ನೂ ಹೆಚ್ಚಿಸುತ್ತವೆ. ಖಾಲಿ ಹಣೆಯಲ್ಲಿರುವುದಕ್ಕಿಂತ ಆರೋಗ್ಯಕ್ಕೂ ಸಹಾಯ ಮಾಡುವ ಬಿಂದಿಗಳನ್ನು ಧರಿಸುವುದು ಉತ್ತಮವಾದ ಅಂಶವಾಗಿದೆ.  

– ಪ್ರಭಾ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next