ಭಾರತದ ಆಟೋಮೊಬೈಲ್ ಕ್ಷೇತ್ರಕ್ಕೆ ಹೆಚ್ಚು ಕಡಿಮೆ ನಾಲ್ಕು ದಶಕದ ಹಿಂದೆಯೇ ಪ್ರವೇಶಿಸಿದ ಯಮಹಾ, ತನ್ನ ಗ್ರಾಹಕರ ಪಟ್ಟಿಯನ್ನು ಕಾಲ ಕಾಲಕ್ಕೆ ವೃದ್ಧಿಸಿಕೊಳ್ಳುತ್ತಲೇ ಬಂದಿದೆ. 1977ರಲ್ಲಿಯೇ ಉತ್ಪಾದನೆ ಕಂಡುಕೊಂಡು ಏಷ್ಯಾ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಗಳಿಸಿ, ಉಳಿಸಿಕೊಂಡು ಬಂದ ಆರ್‌ಎಸ್ 100 ಇಂದಿಗೂ ಬೇಡಿಕೆ ಹೊಂದಿರುವ ಬೈಕ್. ಹೆಸರು ಹೇಳಿದರೆ ಯಮಹಾ ಕಂಪನಿಯನ್ನು ನೆನಪಿಸಿಕೊಳ್ಳುವಷ್ಟರ ಮಟ್ಟಿಗೆ ಆರ್‌ಎಸ್ 100 ಭಾರತ ಸೇರಿ ಏಷ್ಯಾ ರಾಷ್ಟ್ರಗಳಲ್ಲಿ ಸದ್ದು ಮಾಡಿವೆ.
ಮಿಲೇನಿಯಂ ವರ್ಷದ ತನಕವೂ ಪಾಲುದಾರಿಕೆಯಲ್ಲೇ ಮಾರುಕಟ್ಟೆ ಬೆಳೆಸಿಕೊಂಡಿದ್ದ ಜಪಾನ್‌ನ ಕಂಪನಿ ಯಮಹಾ, 2001ರಲ್ಲಿ ಶೇ.100ರಷ್ಟು ತನ್ನದೇ ಉತ್ಪಾದನಾ ಕೇಂದ್ರದೊಂದಿಗೆ ಭಾರತದಲ್ಲಿ ಇನ್ನಷ್ಟು ಭದ್ರವಾಗಿ ನೆಲೆಯೂರಲು ನಿರ್ಧರಿಸಿತು. ಭಾರತದ ಆಟೋಮೊಬೈಲ್ ಕ್ಷೇತ್ರ ಶರವೇಗದ ಪ್ರಗತಿ ಕಾಣುತ್ತಿರುವುದೂ ಇದಕ್ಕೊಂದು ಪ್ರಮುಖ ಕಾರಣವಾಯಿತು.
ಆನಂತರದ ದಿನಗಳಲ್ಲಿ ಬಲಿಷ್ಠ ಕಂಪನಿಗಳಿಗೆ ಪ್ರಬಲ ಪೈಪೋಟಿಯನ್ನೇ ನೀಡುತ್ತ ಬಂದಿರುವ ಯಮಹಾ ಮಧ್ಯಮ ವರ್ಗದವರನ್ನೇ ಗುರಿಯಾಗಿಸಿಕೊಂಡು ಒಂದಿಷ್ಟು ಸ್ಕೂಟರ್, ಬೈಕ್‌ಗಳನ್ನು ಪರಿಚಯಿಸಿತು. ಇವುಗಳಲ್ಲಿ ಸ್ಕೂಟರ್ ಫ್ಯಾಸಿನೋ ಕೂಡ ಒಂದು. ಹೋಂಡಾ, ಬಜಾಜ್‌ನಂಥ ಘಟಾನುಘಟಿ ಕಂಪನಿಗಳ ಸ್ಕೂಟರ್‌ಗಳ ಸ್ಪರ್ಧೆಯ ನಡುವೆಯೂ ಫ್ಯಾಸಿನೋ ಉತ್ತಮ ಮಾರುಕಟ್ಟೆಯನ್ನೇ ಕಂಡುಕೊಂಡಿತು. ಇದೀಗ ಫ್ಯಾಸಿನೋ ಮತ್ತೆ ಸಣ್ಣಪುಟ್ಟ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಬದಲಾದ ಫ್ಯಾಸಿನೋ ಬದಲಾದ ಹೋಂಡಾ ಆ್ಯಕ್ಟೀವಾ 5ಜಿ ಸ್ಕೂಟರ್‌ಗೆ ಪ್ರತಿಸ್ಪರ್ಧಿಯಾಗಿದೆ.
ಏನೇನು ಬದಲಾವಣೆ?: ತಾಂತ್ರಿಕವಾಗಿ ಯಾವುದೇ ಬದಲಾವಣೆ ಇಲ್ಲದಿದ್ದರೂ, ಔಟ್‌ಲುಕ್‌ನಲ್ಲಿ ಕೆಲವೊಂದು ಸಣ್ಣ-ಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ. ಮಾರುಕಟ್ಟೆಯ ಬೇಡಿಕೆಯನ್ನಾಧರಿಸಿ ಮತ್ತೆರಡು ಬಣ್ಣಗಳಲ್ಲಿ ಫ್ಯಾಸಿನೋ ಸ್ಕೂಟರ್ ಪರಿಚಯಿಸಿರುವುದು ಗ್ರಾಹಕರ ಆಯ್ಕೆಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ.
ಸ್ವರ್ಣ ಹಳದಿ ಹಾಗೂ ಡ್ಯಾಪ್ಪರ್ ಬ್ಲೂ ಬಣ್ಣಗಳಲ್ಲಿಯೂ ಈಗ ಫ್ಯಾಸಿನೋ ಲಭ್ಯವಿದೆ. ಈ ಎರಡೂ ಬಣ್ಣಗಳಲ್ಲಿ ಫ್ಯಾಸಿನೋ ಇನ್ನಷ್ಟು ಪ್ರಜ್ವಲಿಸುವಂತೆ ಇದ್ದು, ರಸ್ತೆಯ ಮೇಲೆ ಆಕರ್ಷಿಸುವ ಬಣ್ಣಗಳಿಂದ ಕೂಡಿದೆ ಎನ್ನಲಡ್ಡಿಯಿಲ್ಲ. ಬ್ರಾಂಡ್‌ಗೆ ಹೆಚ್ಚಿನ ಒತ್ತು ನೀಡಿರುವ ಕಂಪನಿ ಮುಂಭಾಗದಲ್ಲಿದ್ದ ತನ್ನ ಲೋಗೋವನ್ನು ಬದಲಾಯಿಸಿದೆ. ಹಿಂಬದಿ ಸವಾರ ಹಿಡಿದುಕೊಳ್ಳಲು ಇದ್ದ ಹ್ಯಾಂಡಲ್‌ನ ವಿನ್ಯಾಸ ಬದಲಾಗಿದೆ.
ಎಂಜಿನ್ ಬದಲಾಗಿಲ್ಲ: ಫ್ಯಾಸಿನೋದಲ್ಲಿರುವ ಸಿವಿಟಿ ತಂತ್ರಜ್ಞಾನದ ಟ್ರಾನ್ಸ್‌ಮಿಷನ್ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 7.1ಪಿಎಸ್ ಮತ್ತು 7500ಆರ್‌ಪಿಎಂ ಹಾಗೂ 7ಬಿಎಚ್‌ಪಿ ಮತ್ತು 8ಎನ್‌ಎಂ ಟಾರ್ಕ್‌ನಿಂದ ಕೂಡಿದ 113ಸಿಸಿ ಸಾಮರ್ಥ್ಯದ ಫ್ಯಾಸಿನೋ ಮುನ್ನುಗ್ಗುವಲ್ಲಿ ಯಾವುದೇ ಸ್ಕೂಟರ್‌ಗೆ ಸವಾಲು ಹಾಕಬಲ್ಲದು. ಸಿಂಗಲ್ ಸಿಲಿಂಡರ್, 4ಸ್ಟ್ರೋಕ್ ಸ್ಕೂಟರ್ ಇದಾಗಿದೆ.
ಎಕ್ಸ್ ಶೋ ರೂಂ ದರ: 54,590 ರೂ.
ಮೈಲೇಜ್: ಪ್ರತಿ ಲೀಟರ್‌ಗೆ 60-70 ಕಿ.ಮೀ.
ಹೈಲೈಟ್ಸ್
– ಇಂಧನ ಸಾಮರ್ಥ್ಯ 5.2 ಲೀಟರ್
– ಗರಿಷ್ಠ ವೇಗದ ಮಿತಿ 80 ಕಿ.ಮೀ.
– ಕರ್ಬ್ ವೇಟ್ 103 ಕಿ.ಗ್ರಾಂ
– ಎರಡೂ ವೀಲ್‌ಗಳಲ್ಲಿ ಡ್ರಮ್ ಬ್ರೇಕ್ ಬಳಕೆ
– ಅಲಾಯ್ ವೀಲ್, ಟ್ಯೂಬ್‌ಲೆಸ್ ಟಯರ್
* ಗಣಪತಿ ಅಗ್ನಿಹೋತ್ರಿ