ತುಮಕೂರು: ಈ ದೇಶದಲ್ಲಿರುವ ಮುಸ್ಲಿಮರು ಎಂದಿಗೂ ಭಾರತದ ಮುಸಲ್ಮಾನರು. ಅವರೆಂದೂ ಚೀನಾ, ಪಾಕಿಸ್ತಾನದವರಲ್ಲ. ನಾವು ಸುಳ್ಳು ಹೇಳುತ್ತಿಲ್ಲ. ಅಂದಿನಿಂದ ಇಂದಿನವರೆಗೆ ನಾವೆಲ್ಲರೂ ಒಂದೇ ಜಾತಿಯಲ್ಲಿ ಬದುಕುತ್ತಿದ್ದೇವೆ. ಇದಕ್ಕೆ ಸಾಕ್ಷಿ ನೀಡುವ ಅಗತ್ಯವಿಲ್ಲ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ನಡೆದ ಜೆಡಿಎಸ್ ಅಲ್ಪಸಂಖ್ಯಾತರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕೆಲವು ಸಮಾಜಘಾತುಕ ಶಕ್ತಿಗಳು ನಮ್ಮನ್ನು ವಿವಿಧ ರೀತಿಯಲ್ಲಿ ವಿಭಜಿಸಿ, ಒಂದಾಗಲು ಬಿಡುತ್ತಿಲ್ಲ. ಮುಸ್ಲಿಮರು ಹಿಂದುತ್ವದ ವಿರೋಧಿ ಎಂಬಂತೆ ಬಿಂಬಿಸಲಾಗುತ್ತಿದೆ. ಅದರಲ್ಲಿಯೂ ಮೂಲ ನಿವಾಸಿಗಳು ವಾಸವಾಗಿರುವ ದಕ್ಷಿಣ ಭಾರತದಲ್ಲಿ ಇತ್ತೀಚೆಗೆ ಮುಸ್ಲಿಮರ ವಿರುದ್ಧ ಇತರ ವರ್ಗದವರನ್ನು ಎತ್ತಿ ಕಟ್ಟುವ ಕೆಲಸ ನಡೆಯುತ್ತಿದೆ. ನಾವು ಎಂದಿಗೂ ಪಾಕಿಸ್ತಾನಕ್ಕೆ ಹೋಗುವವರಲ್ಲ. ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ನಾವು ಪಾಕಿಸ್ತಾನದಿಂದ ಪಡೆದುಕೊಳ್ಳಬೇಕಿದೆ. ಕಾಶ್ಮೀರ ಸಮಸ್ಯೆಯನ್ನು ಮಾತುಕತೆ ಮೂಲಕ ಕೇವಲ 12 ಗಂಟೆಯೊಳಗೆ ಬಗೆಹರಿಸಿಕೊಳ್ಳಬಹುದು. ಆದರೆ, ಕಾಣದ ಶಕ್ತಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ವಿವಾದವನ್ನು ಜೀವಂತಗೊಳಿಸಿದ್ದಾರೆ ಎಂದು ವಿಷಾದಿಸಿದರು.
ಭಾರತ, ಪಾಕಿಸ್ತಾನ ವಿಭಜನೆಯಾದಾಗ ಬಹುತೇಕ ಮುಸ್ಲಿಮರು ಪಾಕಿಸ್ತಾನಕ್ಕೆ ಹೋದರು. ಆದರೆ, ಕಾಶ್ಮೀರದ ಶೇ.99ರಷ್ಟು ಮುಸ್ಲಿಮರು ಗಾಂಧಿ, ನೆಹರೂ ಕೈಹಿಡಿದು ಭಾರತದಲ್ಲಿಯೇ ಉಳಿದರು. ಆದರೆ, ಇಂದು ಗಾಂಧಿಯನ್ನು ಗುಂಡಿಟ್ಟು ಕೊಂದ ಘೋಡ್ಸೆಗೆ ದೇವಾಲಯ ಕಟ್ಟಿರುವ ವ್ಯಕ್ತಿಗಳು ನಮ್ಮ ದೇಶಭಕ್ತಿಯನ್ನು ಪ್ರಶ್ನಿಸುತ್ತಿದ್ದಾರೆ. ಇವರಿಗೆ ಉತ್ತರ ನೀಡುವ ಅಗತ್ಯ ನಮಗಿಲ್ಲ. ಪ್ರತಿ ಬಾರಿಯೂ ಭಾರತ-ಪಾಕ್ ಯುದ್ಧ ನಡೆದಾಗ ಹೆಚ್ಚಿನ ಸಂಕಷ್ಟಕ್ಕೆ ಸಿಲುಕುವವರು ಮುಸ್ಲಿಮರು ಎಂದರು.
ಗಾಂಧಿ, ಆಜಾದ್ ಕಂಡ ಕನಸಿನ ಭಾರತವನ್ನು ನಮ್ಮ ತಂದೆ ಶೇಕ್ ಅಬ್ದುಲ್ಲಾ ಕಂಡಿದ್ದರು. ನನ್ನ ಜೀವಮಾನದಲ್ಲಿ ಆ ಕನಸಿನ ಭಾರತವನ್ನು ನೋಡಬೇಕು. ಇದು ಸಾಕಾರಗೊಳ್ಳಲು ದೇವೇಗೌಡರಂತಹ ನಾಯಕರು ಬೇಕು ಎಂದರು.
ಜಾತ್ಯತೀತವಾಗಿ ಎಲ್ಲಾ ವರ್ಗದ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪಕ್ಷ ಜೆಡಿಎಸ್. ಆದರೆ, ಪಕ್ಷದಿಂದ ಎಲ್ಲಾ ಸ್ಥಾನಮಾನ ಪಡೆದ ಕೆಲ ಮುಸ್ಲಿಂ ಮುಖಂಡರು ಪಕ್ಷ ಬಿಟ್ಟು ಹೋಗಿದ್ದಾರೆ. ಆದರೆ, ಪಕ್ಷ ಸದೃಢವಾಗಿದೆ. ಎಲ್ಲರೂ ಜೆಡಿಎಸ್‌ನ್ನು ಬೆಂಬಲಿಸಬೇಕು.
– ಡ್ಯಾನಿಷ್ ಅಲಿ, ಜೆಡಿಎಸ್ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ.