Advertisement
ಹೌದು.. ತೆಲಸಂಗ ಹೋಬಳಿಯಲ್ಲಿ ವಾಡಿಕೆಗಿಂತ ಪ್ರಸಕ್ತ ವರ್ಷ ಜೂನ್ ತಿಂಗಳಿಗೂ ಮುನ್ನ ಅಂದರೆ ಮೇ 13 ರಂದು 27.2 ಮಿ.ಮೀ, 18 ರಂದು 6.1, 20 ರಂದು 104.2, 21 ರಂದು 28.2 ಮಿ.ಮೀ ಮಳೆ ಸುರಿದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಈ ಹಿಂದಿನ 10 ವರ್ಷದಲ್ಲಿ ಈ ಭಾಗದಲ್ಲಿ ಮೇ ತಿಂಗಳಲ್ಲಿ ಮಳೆ ಆಗಿದ್ದೇ ಇಲ್ಲ. ಬೇಸಿಗೆಯಲ್ಲಿ ಹೊಲಗೆಲಸ ಮಾಡಿ ಬಿತ್ತನೆಗೆ ಭೂಮಿಯನ್ನು ಸಿದ್ದಗೊಳಿಸಿದ್ದ ರೈತರು ಆರಂಭಿಕ ಮಳೆ ವಾಡಿಕೆಗಿಂತ ಮೊದಲೇ ಸುರಿದಿದ್ದರಿಂದ ತೊಗರಿ, ಹೆಸರು, ಉದ್ದು ಬಿತ್ತನೆ ಮಾಡಿದ್ದಾರೆ. ಮೋಡಗಳ ಚೆಲ್ಲಾಟ ರೈತನಿಗೆ ಪ್ರಾಣ ಸಂಕಟ ಎನ್ನುವಂತೆ, ಭೂಮಿಗೂ ತಾಗದಂತೆ ಜೂ.1 ರಂದು ಕೇವಲ 9.1, 3ರಂದು 5.2, 6ರಂದು 4.2 ಮಿ.ಮೀಟರ್ ಮಳೆ ಸುರಿದಿದ್ದು ನಂತರ ಮಾಯವಾಗಿದೆ. ಸದ್ಯಕ್ಕೆ ವರುಣನ ಕಣ್ಣುಮುಚ್ಚಾಲೆಯಿಂದ ಮೊಳಕೆಯೊಡೆದು ಮೇಲೆ ಬಂದ ಬೆಳೆ, ಮಳೆಗಾಗಿ ಬಾಯಿತೆರೆದು ನಿಂತಿದೆ. ಈ ವಾರದಲ್ಲಿ ಚೆನ್ನಾಗಿ ಮಳೆ ಸುರಿದರೆ ಮಾತ್ರ ಬಿತ್ತಿದ ಬೆಳೆಯಲ್ಲಿ ಅರ್ಧದಷ್ಟಾದರೂ ಇಳುವರಿ ಕೈಗೆಟುಕಲಿದ್ದು, ಹೀಗೆ ಮುಂದುವರೆದರೆ ಬಿತ್ತನೆಗೆ ಮಾಡಿದ ಖರ್ಚು ಒಂದೆಡೆ ಇರಲಿ, ಹೊಲ ಸ್ವತ್ಛಗೊಳಿಸುವ ಕೂಲಿಯೂ ದೊರೆಯುವುದಿಲ್ಲ ಎನ್ನುವಂತಾಗಿದೆ.
Related Articles
Advertisement
ಪ್ರಸಕ್ತ ವರ್ಷ ಆರಂಭಿಕ ಮಳೆಯಿಂದ ಭಾರಿ ಪ್ರಮಾಣದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. 9 ಕಡೆ ಬೀಜ ವಿತರಣಾ ಕೇಂದ್ರ ತೆರೆದು ಸಕಾಲಕ್ಕೆ ಬೀಜ ವಿತರಣೆ ಮಾಡಿದ್ದೆವು. ಆದರೆ ಇಷ್ಟೊತ್ತಿಗೆ ಒಂದೆರೆಡು ಒಡ್ಡು ತುಂಬಿ ಹರಿಯುವಷ್ಟು ಮಳೆ ಸುರಿಯಬೇಕಿತ್ತು. ವಾರದಲ್ಲಿ ಚೆನ್ನಾಗಿ ಮಳೆ ಸುರಿಯದಿದ್ದರೆ ಬೆಳೆಗೆ ತೊಂದರೆ ತಪ್ಪಿದ್ದಲ್ಲ. -ಯಂಕಪ್ಪ ಉಪ್ಪಾರ,ಕೃಷಿ ಅಧಿಕಾರಿ, ತೆಲಸಂಗ.
ಈ ವರ್ಷ ಮಳೆಗಾಲದ ಆರಂಭದಲ್ಲಿಯೇ ಸುರಿದ ಮಳೆಯಿಂದ ತುಂಬಾ ಹರ್ಷಗೊಂಡಿದ್ದೆವು. ಕಳೆದ ಹತ್ತು ವರ್ಷದಿಂದ ಮಳೆ ಚೆನ್ನಾಗಿ ಬಾರದ್ದಕ್ಕೆ ನಷ್ಟ ಅನುಭವಿಸಿದ್ದು, ಈ ವರ್ಷವಾದರೂ ದೇವರು ಕೈ ಹಿಡಿಯುತ್ತಾನೆ ಎಂದುಕೊಂಡಿದ್ದೆವು. ಸದ್ಯ ಮಳೆ ಸುರಿಯದಿದ್ದರೆ ಭೂತಾಯಿ ನಂಬಿ ಬೆಳೆಗೆ ಮಾಡಿದ ಖರ್ಚು ಕೈಗೆಟಕುವುದಿಲ್ಲ. –ನವೀನ ಪೋಳ, ಯುವ ರೈತ, ತೆಲಸಂಗ.
ತೆಲಸಂಗ ಹೋಬಳಿಯಲ್ಲಿಯೇ ಹೆಚ್ಚು ತುಂತುರು ನೀರಾವರಿ ಮಾಡಿ ವಾಣಿಜ್ಯ ಬೆಳೆಗಳನ್ನು ಮಾಡಿದ್ದಾರೆ. ಮಳೆಯ ಕೊರತೆಯಿಂದ ಅಂತರ್ಜಲ ಕುಸಿದಿದ್ದರ ಪರಿಣಾಮ ಸದ್ಯಕ್ಕೆ ತೋಟಗಾರಿಕಾ ಬೆಳೆ ಉಳಿಸಿಕೊಳ್ಳಲು ಮಳೆ ಚೆನ್ನಾಗಿ ಸುರಿಯಬೇಕು. ಎಂದರೆನೇ ಬೋರ್ವೆಲ್ ನೀರು ಹೆಚ್ಚುತ್ತವೆ. ಬೋರ್ವೆಲ್ ನೀರು ಹೆಚ್ಚಿದರೆ ಮಾತ್ರ ಬರುವ ದಿನಗಳಲ್ಲಿ ಬೆಳೆ ಚೆನ್ನಾಗಿ ಪಡೆಯಲು ಸಾಧ್ಯವಿದೆ. -ಶ್ವೇತಾ ಹಾಡಕರ, ತೋಟಗಾರಿಕಾ ಸಹಾಯಕ ನಿರ್ದೇಶಕಿ, ಅಥಣಿ.
-ಜೆ.ಎಂ.ಖೊಬ್ರಿ