Advertisement

ಕೃಷಿಯಿಂದ ವಿಮುಖರಾಗುತ್ತಿರುವ ರೈತರು

11:05 PM Sep 26, 2021 | Team Udayavani |

ಕೋಟ: ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಚಿತ್ರಪಾಡಿಯ ದೊಡ್ಡ ಹೊಳೆಗೆ ಇಲ್ಲಿನ ಸ್ಥಳೀಯ ವಸತಿ ಸಂಕೀರ್ಣಗಳಿಂದ ತ್ಯಾಜ್ಯ ನೀರನ್ನು ನೇರವಾಗಿ ಬಿಡುತ್ತಿದ್ದು ಇದರಿಂದ ಹೊಳೆ ನೀರು ಸಂಪೂರ್ಣ ಕಲುಷಿತಗೊಳ್ಳುತ್ತಿದ್ದು ಮತ್ತುಇಲ್ಲಿಯ ರೈತರು ಇದೇ ನೀರನ್ನು ಉಪಯೋಗಿಸಿ ಬೆಳೆ ಬೆಳೆಯುವುದರಿಂದ ಕೃಷಿ ಚಟುವಟಿಕೆಗೆ ಅಡಚಣೆ ಉಂಟಾಗಿದೆ.

Advertisement

ಕೃಷಿಯಲ್ಲಿ ತೊಡಗುವ ರೈತರ ಆರೋಗ್ಯದ ಮೇಲೂ ಇದು ದುಷ್ಪರಿಣಾಮ ಬೀರುತ್ತಿದೆ ಎನ್ನುವ ಆರೋಪವಿದೆ. ಹೀಗಾಗಿ ಈ ಸಮಸ್ಯೆಗೆ ಸ್ಥಳೀಯಾಡಳಿತ ಸೂಕ್ತ ಪರಿಹಾರ ನೀಡಬೇಕಿದೆ.

ಇಲ್ಲಿನ ಸ್ಥಳೀಯ ಎರಡು ಖಾಸಗಿ ರೆಸಿಡೆನ್ಸಿಗಳಲ್ಲಿ ನೂರಾರು ಕುಟುಂಬ ವಾಸವಿದ್ದು ಹಾಗೂ ವಾಣಿಜ್ಯ ಸಂಕೀರ್ಣದ ಮೇಲ್ಭಾಗದಲ್ಲಿರುವ ವಸತಿ ಗೃಹವೊಂದರಲ್ಲಿ ನೂರಾರು ಮಂದಿ ಬಾಡಿಗೆಗಿದ್ದಾರೆ. ಆದರೆ ಇಲ್ಲಿನ ತ್ಯಾಜ್ಯ ನೀರನ್ನು ವಿಲೇವಾರಿ ಮಾಡಲು ಸರಿಯಾದ ವ್ಯವಸ್ಥೆ ಇಲ್ಲಿಲ್ಲ. ಹೀಗಾಗಿ ಉತ್ಪತ್ತಿಯಾದ ಕಲುಷಿತ ನೀರನ್ನು ಒಳಚರಂಡಿ ಮೂಲಕ ಹಾಗೂ ದೊಡ್ಡ ಪೈಪ್‌ ಮೂಲಕ ನೇರವಾಗಿ ಹೊಳೆಗೆ ಸಂಪರ್ಕ ನೀಡಲಾಗಿದೆ.

ಕೃಷಿಗೆ ಆಪತ್ತು; ಬಾವಿ ನೀರು ಹಾಳು
ಚಿತ್ರಪಾಡಿಯಲ್ಲಿ ನೂರಾರು ಎಕ್ರೆ ಕೃಷಿಭೂಮಿ ಇದ್ದು ಈ ದೊಡ್ಡ ಹೊಳೆಯ ನೀರನ್ನೇ ಬಳಸಿಕೊಂಡು ಭತ್ತ, ಶೇಂಗಾ, ತರಕಾರಿಗಳನ್ನು ಬೆಳೆಯಲಾಗುತ್ತಿದೆ. ಆದರೆ ಕಳೆದ ಕೆಲವು ವರ್ಷದಿಂದ ತ್ಯಾಜ್ಯ ನೀರು ಕೃಷಿಭೂಮಿಗೆ ಸೇರುತ್ತಿದ್ದು ಬೆಳೆಗಳು ನಾಶವಾಗುತ್ತಿವೆ. ಕೃಷಿ ಕಾರ್ಯದಲ್ಲಿ ತೊಡಗುವ ರೈತರಲ್ಲಿ ಚರ್ಮದ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ರೈತರು ಈ ನೀರನ್ನು ಬಳಸಲು ಹಿಂಜರಿಯುತ್ತಿದ್ದು ನಿಧಾನವಾಗಿ ಕೃಷಿ ಚಟುವಟಿಕೆಯಿಂದಲೇ ದೂರವಾಗುತ್ತಿದ್ದಾರೆ. ಇಲ್ಲಿನ ಹಲವು ಮನೆಗಳ ಬಾವಿಯ ನೀರು ಕೂಡ ಹಾಳಾಗಿದೆ.

ಇದನ್ನೂ ಓದಿ:ಶಿಕ್ಷಕರ ಅರ್ಹತಾ ಪರೀಕ್ಷೆ : ಬ್ಲೂಟೂತ್‌ ಶೂ ಧರಿಸಿ ಮೋಸ ಮಾಡುವ ಯತ್ನ

Advertisement

ಪ.ಪಂ.ಗೆ ಮನವಿ
ಸ್ಥಳೀಯರು ನಾಗರಿಕ ಹಿತರಕ್ಷಣ ವೇದಿಕೆ ಎನ್ನುವ ಸಂಘಟನೆಯೊಂದನ್ನು ಸ್ಥಾಪಿಸಿಕೊಂಡಿದ್ದು ಸಮಸ್ಯೆ ಪರಿಹಾರಕ್ಕೆ ಮನವಿ ಪತ್ರವನ್ನು ಇತ್ತೀಚೆಗೆ ಪ.ಪಂ.ಗೆ ಸಲ್ಲಿಸಿದ್ದಾರೆ. ಅನಂತರ ಪ.ಪಂ. ಅಧ್ಯಕ್ಷೆ ಸುಲತಾ ಹೆಗ್ಡೆ, ಮುಖ್ಯಾಧಿಕಾರಿ ಶಿವ ನಾಯ್ಕ ಹಾಗೂ ಸ್ಥಳೀಯ ವಾರ್ಡ್‌ ಸದಸ್ಯೆ ಸುಕನ್ಯಾ ಶೆಟ್ಟಿ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮೂಲ ಸೌಕರ್ಯ ಇಲ್ಲದ ವಸತಿ ಗೃಹ
ವಿಜಯಪುರ, ಹಾವೇರಿ ಮುಂತಾದ ಅನ್ಯ ಜಿಲ್ಲೆಗಳಿಂದ ಕೆಲಸಕ್ಕೆ ಬರುವ ಕಾರ್ಮಿಕರಿಗೆ ಪ.ಪಂ. ವ್ಯಾಪ್ತಿಯ ವಿವಿಧೆಡೆ ವಾಣಿಜ್ಯ ಸಂಕೀರ್ಣದ ಮೇಲ್ಭಾಗದಲ್ಲಿ ವಸತಿಗೃಹ ನಿರ್ಮಿಸಿ ಬಾಡಿಗೆಗೆ ನೀಡಲಾಗುತ್ತಿದೆ. ಇಲ್ಲಿ ನೂರಾರು ಮಂದಿ ಯಾವುದೇ ಮೂಲ ಸೌಕರ್ಯಗಳಿಲ್ಲದೆ ವಾಸಿಸುತ್ತಿದ್ದಾರೆ. ಹಾಗೂ ಇಲ್ಲಿನ ನಿವಾಸಿಗಳು ಸ್ನಾನ, ಶೌಚಕ್ಕೆ ಬಳಸಿದ ನೀರನ್ನು ವಿಲೇವಾರಿ ಮಾಡಲು ಯಾವುದೇ ವ್ಯವಸ್ಥೆ ಇಲ್ಲಿಲ್ಲ.

ಕ್ರಮ ಕೈಗೊಳ್ಳಲಾಗುವುದು
ಈ ಬಗ್ಗೆ ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದ್ದು ತ್ಯಾಜ್ಯ ನೀರು ಹೊಳೆ ಸೇರುವುದರಿಂದ ಅಸಹ್ಯ ವಾತಾವರಣ ಉಂಟಾಗಿದೆ. ಇಲ್ಲಿನ ವಸತಿ ಗೃಹಗಳಲ್ಲಿ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕ ಇಲ್ಲದಿರುವುದರಿಂದ ಈ ಸಮಸ್ಯೆ ಎದುರಾಗಿದೆ. ಸಂಬಂಧಪಟ್ಟವರಿಗೆ ಶೀಘ್ರ ನೋಟಿಸ್‌ ನೀಡಿ ಹೊಳೆಗೆ ಅಳವಡಿಸಲಾದ ಪೈಪ್‌ ಸಂಪರ್ಕ ತೆರವುಗೊಳಿಸಲಾಗುವುದು. ಶುದ್ಧೀಕರಣ ಘಟಕ ಅಳವಡಿಸಿಕೊಳ್ಳುವಂತೆ ಎಚ್ಚರಿಕೆ ನೀಡಲಾಗುವುದು. ತಪ್ಪಿದಲ್ಲಿ ಕಠಿನ ಕ್ರಮಕೈಗೊಳ್ಳಲಾಗುವುದು.
-ಸುಲತಾ ಹೆಗ್ಡೆ,
ಸಾಲಿಗ್ರಾಮ ಪ.ಪಂ. ಅಧ್ಯಕ್ಷೆ

-ರಾಜೇಶ್‌ ಗಾಣಿಗ ಅಚ್ಲಾಡಿ

 

Advertisement

Udayavani is now on Telegram. Click here to join our channel and stay updated with the latest news.

Next