ಚಿತ್ರದುರ್ಗ: ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಕೇಂದ್ರ ಬರ ಅಧ್ಯಯನ ತಂಡ ಭಾನುವಾರ ಭೇಟಿ ನೀಡಿ ಬೆಳೆ ಹಾನಿ ಅಧ್ಯಯನ ನಡೆಸಿತು. ಕೇಂದ್ರ ನೀತಿ ಆಯೋಗದ ಜಂಟಿ ಸಲಹೆಗಾರ ಮಾನಸ್ ಚೌಧರಿ ನೇತೃತ್ವದ ನಾಲ್ವರು ಅಧಿಕಾರಿಗಳನ್ನೊಳಗೊಂಡ ಕೇಂದ್ರ ಬರ ಅಧ್ಯಯನ ತಂಡದಲ್ಲಿ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ಸತ್ಯಕುಮಾರ್, ಕೇಂದ್ರ ಆರ್ಥಿಕ ವೆಚ್ಚಗಳ ಇಲಾಖೆ ಜಂಟಿ ನಿರ್ದೇಶಕ ಸುಭಾಶ್ಚಂದ್ರ ಮೀನಾ ಹಾಗೂ
ಎಂಎನ್‌ಸಿಎಫ್‌ಸಿಯ ಸಹಾಯಕ ನಿರ್ದೇಶಕಿ ಡಾ| ಶಾಲಿನಿ ಸಕ್ಸೇನಾ ಇದ್ದರು.
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಲಿಂಗದಹಳ್ಳಿ ಮೂಲಕ ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದ ತಂಡ, ಚಳ್ಳಕೆರೆ ತಾಲೂಕಿನ ಕೆಂಚಮ್ಮನಹಳ್ಳಿ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಅವಲೋಕಿಸಿತು. ಅಲ್ಲಿಂದ ಪರಶುರಾಂಪುರ ಗ್ರಾಮಕ್ಕೆ ಆಗಮಿಸಿ ಹತ್ತಾರು ವರ್ಷಗಳ ಕಾಲ ಮಳೆಯಿಲ್ಲದೆ ಸಂಪೂರ್ಣ ಒಣಗಿರುವ ಕೆರೆ ಪರಿಶೀಲನೆ ನಡೆಸಿತು. ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ಕೆರೆ ಕಾಮಗಾರಿ ಹಾಗೂ ಜನ ಜಾನುವಾರುಗಳಿಗೆ ಮಾಡಲಾಗಿರುವ ಟ್ಯಾಂಕರ್ ನೀರು ಪೂರೈಕೆ ವ್ಯಸ್ಥೆಯನ್ನು ಪರಿಶೀಲಿಸಿತು. ಬಳಿಕ ತಿಮ್ಮನಹಳ್ಳಿಯ ಜಮೀನುಗಳಲ್ಲಿ ಶೇಂಗಾ ಕಾಯಿ ಕಟ್ಟದೆ ಒಣಗಿರುವ ಬೆಳೆ ವೀಕ್ಷಣೆ ಮಾಡಿದ ತಂಡದ ಸದಸ್ಯರು, ರೈತರ ಸಮಸ್ಯೆಗಳನ್ನು ಆಲಿಸಿದರು. ಪುರ್ಲೆಹಳ್ಳಿ, ನನ್ನಿವಾಳ ಗ್ರಾಮಗಳ ಬರಪೀಡಿತ ಪ್ರದೇಶ ಹಾಗೂ ಗೋಶಾಲೆಗೆ ಭೇಟಿ ನೀಡಿದರು.
ಕಣ್ಣೀರಿಟ್ಟ ರೈತರು: ಬರ ಅಧ್ಯಯನ ತಂಡದ ಎದುರು ಬೆಳೆ ಕಳೆದುಕೊಂಡ ರೈತರು ಕಣ್ಣೀರಿಟ್ಟರು. ಹೀಗೆ ಬಂದು ಹಾಗೆ ಹೋಗುವ ಕೆಲಸ ಮಾಡಬೇಡಿ. ಸತತ ಹತ್ತು ವರ್ಷಗಳಿಂದ ಜಿಲ್ಲೆಯ ರೈತರು ತೀವ್ರ ಬರಗಾಲಕ್ಕೆ ತುತ್ತಾಗಿ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಸಾಲ ಮಾಡಿ ಬಿತ್ತನೆ ಮಾಡಿದ ಶೇಂಗಾ, ಸೂರ್ಯ ಕಾಂತಿ, ಮೆಕ್ಕೆಜೋಳ, ಈರುಳ್ಳಿ ಸೇರಿದಂತೆ ತೋಟಗಾರಿಕೆ ಬೆಳೆಗಳು ಸಂಪೂರ್ಣ ಒಣಗಿ ಹೋಗಿ ಕೋಟ್ಯಂತರ ರೂ.ಗಳ ಬೆಳೆ ಹಾನಿಯಾಗಿದೆ. ಸಾವಿರ ಅಡಿ ಕೊಳವೆಬಾವಿ ಕೊರೆಸಿದರೂ ಹನಿ ನೀರು ಬರುತ್ತಿಲ್ಲ. ಜಾನುವಾರುಗಳನ್ನು ಮಾರಾಟ ಮಾಡಿ ಉದ್ಯೋಗಕ್ಕಾಗಿ ಗುಳೆ ಹೋಗಬೇಕಾಗಿದೆ ಎಂದು ಅಹವಾಲು ಹೇಳಿಕೊಂಡರು. ಬರದ ಬವಣೆಯಿಂದ ಬೇಸತ್ತಿರುವ ರೈತರಿಗೆ ಹೆಚ್ಚಿನ ಪರಿಹಾರ ಕೊಡಿಸುವಂತೆ ಮನವಿ ಮಾಡಿದರು.
ಅಧಿಕಾರಿಗಳು ನೀಡುವ ಅಂಕಿ ಅಂಶಗಳನ್ನು ಪಡೆದು ವಾಪಸ್ ಹೋದರೆ ಮತ್ತೆ ಅವರು ಬರುವುದು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದಾಗಲೇ. ಕೇಂದ್ರ ಬರ ಅಧ್ಯಯನ ತಂಡ “ಬಂದ ಪುಟ್ಟ ಹೋದ ಪುಟ್ಟ’ ಎನ್ನುವಂತಾಗಿದೆ. ಕೇಂದ್ರ ಬರ ಅಧ್ಯಯನ ತಂಡ ನೀಡಿದ ಬೆಳೆ ಹಾನಿ ವರದಿಯಿಂದ ಒಂದಿಷ್ಟೂ ಉಪಯೋಗವಾಗಿಲ್ಲ ಎಂದು ಆರೋಪಿಸಿದರು.
ಸತತ ಬರದ ದವಡೆಗೆ ಸಿಲುಕಿರುವ ಜಿಲ್ಲೆಯಲ್ಲಿ ಈ ವರ್ಷ ಬೆಳೆ ಹಾನಿಯಾಗಿ ನೂರಾರು ಕೋಟಿ ರೂ. ನಷ್ಟವಾಗಿದೆ. ಕೇಂದ್ರ ತಂಡ ಬರಪೀಡಿತ ಪ್ರದೇಶಗಳಿಗೆ ಹಾಗೆ ಬಂದು ಹೀಗೆ ಹೋಗಿದ್ದು ರೈತರ ಕಣ್ಣೊರೆಸುವ ತಂತ್ರವಾಗಿದೆ ಎಂದು ಹಲವಾರು ರೈತರು ಆಕ್ರೋಶ ವ್ಯಕ್ತಪಡಿಸಿದರು.