ಕುಷ್ಟಗಿ: ತಾಲೂಕಿನ ಕಂದಕೂರ ಸೀಮಾದ ರೈತರ ಜಮೀನುಗಳ ದಾರಿಗೆ ಅದೇ ದಾರಿಯ ರೈತರೊಬ್ಬರು ತಕರಾರು ವ್ಯಕ್ತಪಡಿಸಿದ ಪ್ರಕರಣದ ಹಿನ್ನೆಲೆ ದಾರಿ ಸಮಸ್ಯೆ ಪರಿಹರಿಸುವಂತೆ ರೈತರು ಶುಕ್ರವಾರ ತಹಶೀಲ್ದಾರ ಕಚೇರಿಗೆ ಏಕಾಏಕಿ ಮುತ್ತಿಗೆ ಹಾಕಿದರು.
ಕಂದಕೂರ ಗ್ರಾಮದ ಯಡ್ಡೋಣಿ ಗ್ರಾಮೀಣ ರಸ್ತೆಯಲ್ಲಿ 120 ಕ್ಕೂ ರೈತಾಪಿ ಜಮೀನುಗಳಿವೆ. ಹಲವು ವರ್ಷಗಳಿಂದ ಇದೇ ದಾರಿಯಲ್ಲಿ ರೈತರು ಸಂಚಾರಿಸುತ್ತಿದ್ದಾರೆ. ಗ್ರಾಮೀಣ ರಸ್ತೆಯ ಎರಡನೇ ಜಮೀನಿನ ಮಾಲೀಕರಾದ ಶರಣಮ್ಮ ಹೊಳೆಯಪ್ಪ ಕುಟುಗಮರಿ, ರಾಮಣ್ಣ ಎಂಬುವರ ಮೂಲ ನಕಾಶೆಯಲ್ಲಿ ಜಮೀನುಗಳಿಗೆ ದಾರಿ ಇಲ್ಲ. ಈಗಿರುವ ದಾರಿ ನಮ್ಮ ಜಮೀನಿನಲ್ಲಿದೆ ಎಂದು ಕ್ಯಾತೆ ತೆಗೆದಿದ್ದಾರೆ.
ಈ ಹಿಂದೆ ಉದ್ಯೋಗ ಖಾತ್ರಿಯ ʼನಮ್ಮ ಹೊಲ ನಮ್ಮ ರಸ್ತೆʼ ಯೋಜನೆಯಲ್ಲಿ ಈ ರೈತರು ಕ್ಯಾತೆ ತೆಗೆದಿದ್ದರಿಂದ 30 ಮೀಟರ್ ದಾರಿಯನ್ನು ಬಿಟ್ಟು ಈ ದಾರಿ ಅಭಿವೃದ್ಧಿಪಡಿಸಿದ್ದರು. ಕೆಲ ದಿನಗಳ ಹಿಂದೆ ಈ ಜಮೀನುದಾರರು ಒಡ್ಡು, ಹಾಕಿದ್ದು ನೂರಕ್ಕೂ ಅಧಿಕ ರೈತರ ಎತ್ತು ಬಂಡಿಗಳ ಸಂಚಾರ ಸದ್ಯಕ್ಕೆ ಸ್ಥಗಿತವಾಗಿದೆ. ರೈತರು ವಿಧಿ ಇಲ್ಲದೇ ತಾಲೂಕಾಡಳಿತದ ಮೊರೆ ಹೋಗಿದ್ದರು.
ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಾಡಳಿತದಿಂದ ಸ್ಪಷ್ಟನೆ ವಿಳಂಬವಾದ ಹಿನ್ನೆಲೆ ರೈತರು ತಹಶೀಲ್ದಾರರ ಕಚೇರಿಗೆ ಮುತ್ತಿಗೆ ಹಾಕಿದರು. ಈ ವೇಳೆ ತಹಶೀಲ್ದಾರ ಎಂ. ಸಿದ್ದೇಶ ಕಚೇರಿಗೆ ಆಗಮಿಸುವುದು ವಿಳಂಬವಾಗಿದ್ದರಿಂದ ರೊಚ್ಚಿಗೆದ್ದ ರೈತರು ತಹಶೀಲ್ದಾರ ಕಚೇರಿಗೆ ಬೀಗ ಜಡಿಯಲು ಮುಂದಾದರು.
ಬಳಿಕ ಸ್ಥಳದಲ್ಲಿದ್ದ ಪೊಲೀಸರು ತಡೆದು, ತಹಶೀಲ್ದಾರ್ ರನ್ನು ಸಂಪರ್ಕಿಸಿ ಸಂಜೆ 4 ಗಂಟೆಗೆ ಸ್ಥಳ ಪರಿಶೀಲನೆಗೆ ನಿಗದಿ ಮಾಡಿದರು. ಈ ಬೆಳವಣಿಗೆ ಹಿನ್ನೆಲೆ ರೈತರು ತಹಶೀಲ್ದಾರ ಅವರನ್ನು ಕರೆದುಕೊಂಡು ಹೋಗಲು ಬಿಗಿ ಪಟ್ಟು ಹಿಡಿದು ಮೌನ ಪ್ರತಿಭಟನೆಗೆ ಮುಂದಾದರು ಎಂದು ತಿಳಿದು ಬಂದಿದೆ.