ನರಗುಂದ: ದೇಶಕ್ಕೆ ಅನ್ನ ಕೊಡುತ್ತೇನೆಂದು ಹೇಳಿಕೊಳ್ಳುವ ತಾಕತ್ತು ಇರೋದು ರೈತನಿಗೆ ಮಾತ್ರ. ಅಂತಹ ರೈತ ಕೃಷಿಯಲ್ಲಿ ಸಾಕಷ್ಟು ಬದಲಾವಣೆ ಕಾಣಬೇಕಿದೆ. ಹಾಗಾಗಿ, ಪ್ರತಿಯೊಬ್ಬ ರೈತರೂ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಆರ್ಥಿಕ ಪ್ರಗತಿ ಸಾಧಿಸಬೇಕೆಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ರೈತರೊಂದಿಗೆ ಒಂದು ದಿನ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಗಂಗಾಪೂರ ಗ್ರಾಮದ ಪ್ರಗತಿಪರ ರೈತ ಮಲ್ಲಿಕಾರ್ಜುನ ಪಾಟೀಲ ಅವರ ಹೊಲದಲ್ಲಿ ಗೋವಿನಜೋಳ ಬೆಳೆ ಕ್ಷೇತ್ರೋತ್ಸವ ಹಾಗೂ ರಾಶಿ ಮಾಡುವ ಪದ್ಧತಿ ವೀಕ್ಷಿಸಿದ ಬಳಿಕ ನಡೆದ ಸಮಾರಂಭದಲ್ಲಿ ಸಚಿವರು ಮಾತನಾಡಿದರು.
ರಾಜ್ಯದ 10 ಕೃಷಿ ವಲಯದಲ್ಲಿ ಒಂದೊಂದು ಪ್ರದೇಶದಲ್ಲಿ ರೈತರ ಒಂದೊಂದು ಸಮಸ್ಯೆಗಳಿವೆ. ಸಮಗ್ರ ಕೃಷಿ ನೀತಿ, ಬಹುಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು. ಕೃಷಿಯನ್ನೇ ಅವಲಂಬಿಸಿ ಸಾಕಷ್ಟು ಪ್ರಗತಿ ಸಾಧಿಸಿದ ಭೈರನಹಟ್ಟಿ ಬಸನಗೌಡ ಚಿಕ್ಕನಗೌಡ್ರ ಎಂಬ ರೈತ ಮಾದರಿಯಾಗಿದ್ದಾರೆ ಎಂದು ಸಚಿವರು ಹೇಳಿದರು.
ಭೂಮಿತಾಯಿ ನಂಬಿದವರನ್ನು ಯಾವತ್ತೂ ಕೈಬಿಡುವುದಿಲ್ಲ. ಹಸಿರೆಲೆ, ಸಗಣಿ ಗೊಬ್ಬರ ಬಳಕೆ ಮತ್ತು ಕೆರೆ ಮಣ್ಣು ಭೂಮಿಗೆ ಹಾಕುವ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಿಸಬೇಕು. ಬಿತ್ತನೆ ಪೂರ್ವದಲ್ಲಿ ರೈತರು ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸುವುದು ಬಹಳಷ್ಟು ಉಪಯುಕ್ತವಾಗಿದೆ. ಬದುವಿನಲ್ಲಿ ಗಿಡ ಮರಗಳನ್ನು ಬೆಳೆಸಬೇಕು. ಹೈನುಗಾರಿಕೆ, ಕುರಿ ಸಾಕಾಣಿಕೆ ಮೂಲಕ ಆರ್ಥಿಕ ಬಲವರ್ಧನೆ ಹೊಂದಬೇಕು ಎಂದು ಹೇಳಿದರು.
ರೈತರೊಂದಿಗೆ ಸರ್ಕಾರವಿದೆ:
ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಜೊತೆಗೆ ಸರ್ಕಾರವೇ ನಿಮ್ಮ ಜೊತೆಗಿದೆ ಎಂದು ಭರವಸೆ ನೀಡಲು ರೈತರ ಮನೆ ಬಾಗಿಲಿಗೆ ಬಂದಿದ್ದೇವೆ. ರೈತರು ಎದೆಗುಂದದೇ ಕೃಷಿಯಲ್ಲಿ ಪ್ರಗತಿ ಸಾಧಿಸಬೇಕು ಎಂದು ಸಚಿವ ಬಿ.ಸಿ.ಪಾಟೀಲ ಹೇಳಿದರು. ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡ್ರ, ಎಂ.ಎಚ್.ತಿಮ್ಮನಗೌಡ್ರ, ಶಿವನಗೌಡ ಕರಿಗೌಡ್ರ, ಚಂದ್ರಶೇಖರ ದಂಡಿನ, ಬಿ.ಜಿ.ಸುಂಕದ, ಪ್ರಕಾಶಗೌಡ ತಿರಕನಗೌಡ್ರ, ಎಂ.ಬಿ.ವೀರನಗೌಡ್ರ,
ಮಲ್ಲಿಕಾರ್ಜುನ ಪಾಟೀಲ, ನಿಂಗಣ್ಣ ಗಾಡಿ, ಗುರಪ್ಪ ಆದೆಪ್ಪನವರ ಮುಂತಾದವರಿದ್ದರು.