Advertisement

ರೈತರಿಗೆ ನೆರವಾಗಲಿವೆ “ಕಿಸಾನ್‌ ಡ್ರೋನ್‌ಗಳು’

08:30 PM Feb 01, 2022 | Team Udayavani |

ಕಿಸಾನ್‌ ಡ್ರೋನ್‌! ಡ್ರೋನ್‌ಗಳ ಬಗ್ಗೆ ಈ ಕಾಲಘಟ್ಟದಲ್ಲಿ ಕೇಳದಿರುವವರೇ ಇಲ್ಲ. ಅತಿಪುಟ್ಟ ವಿಮಾನಗಳೆಂದು ಸರಳವಾಗಿ ಹೇಳಬಹುದು. ಬಹುತೇಕ ಇವು ಮಾನವ ರಹಿತ ಆಗಿರುತ್ತವೆ. ಹಾಗಾಗಿ, ಇವುಗಳ ಮೂಲಕ ಪ್ರಯಾಣಿಕರನ್ನು ಸಾಗಿಸಲು ಸಾಧ್ಯವೇ ಇಲ್ಲ. ಇವುಗಳ ಕೆಲಸವೇ ಆಗಸದಲ್ಲೇ ನಿಂತು ಕೆಳಗೆ ನಡೆಯುವ ಸಂಗತಿಗಳನ್ನು ಪರಿಶೀಲಿಸುವುದು ಅಥವಾ ತನ್ನಲ್ಲಿನ ಕ್ಯಾಮೆರಾಗಳ ಮೂಲಕ ಕಣ್ಗಾವಲು ನಡೆಸುವುದು. ಕೆಲವೊಮ್ಮೆ ಇವನ್ನು ಔಷಧ ರವಾನೆ, ಆಹಾರದ ರವಾನೆ ಅಥವಾ ಗುಪ್ತಚರ ಚಟುವಟಿಕೆಗಳಿಗೂ ಬಳಸಲಾಗುತ್ತದೆ.
ಇಂಥ ವೈವಿಧ್ಯಮಯ, ಬಹುಪಯೋಗಿಯಾದ ಡ್ರೋನ್‌ಗಳನ್ನು ರೈತರ ನೆರವಿಗೆ ಬಳಸಲು ಕೇಂದ್ರ ನಿರ್ಧರಿಸಿದೆ, ಇದಕ್ಕೆ “ಕಿಸಾನ್‌ ಡ್ರೋನ್‌’ ಎಂದು ಹೆಸರಿಡಲಾಗಿದೆ.

Advertisement

ಕೃಷಿಯಲ್ಲಿ ಬಳಕೆ ಹೇಗೆ?
ಇದರ ಮೂಲಕ ಎಷ್ಟು ಫ‌ಸಲು ಬರಬಹುದು, ಎಷ್ಟು ಬೆಳೆಯಬಹುದು ಎಂದು ಅಂದಾಜಿಸಬಹುದು. ಭೂಮಿ ಸಂಬಂಧಿಸಿದ ದಾಖಲೆಗಳನ್ನು ಡಿಜಿಟಲ್‌ ರೂಪದಲ್ಲಿ ಸಂಗ್ರಹಿಸಬಹುದು. ಎಷ್ಟು ಪ್ರಮಾಣದ ಕೀಟನಾಶಕಗಳನ್ನು ಜಮೀನಿಗೆ ಹೊಡೆಯಬಹುದು. ಹಾಗೆಯೇ ಗೊಬ್ಬರಗಳನ್ನು ಹಾಕಬಹುದು! ಸದ್ಯ ಈ ಮಟ್ಟಕ್ಕೆ ಡ್ರೋನ್‌ಗಳನ್ನು ತಾಂತ್ರಿಕವಾಗಿ ಪಳಗಿಸಬೇಕು ಅಥವಾ ಅದಕ್ಕೆಂದೇ ಡ್ರೋನ್‌ಗಳ ರೂಪವಿನ್ಯಾಸವನ್ನು ಬದಲಿಸಬೇಕು. ಒಂದು ವೇಳೆ ಹೀಗೆ ಡ್ರೋನ್‌ಗಳನ್ನು ಬಳಸುವುದು ಯಶಸ್ವಿಯಾದರೆ ರೈತರಿಗೆ ಬಹಳ ಅನುಕೂಲವಾಗಲಿದೆ. ಈ ಚಿಂತನೆ ಚೆನ್ನಾಗಿಯೇ ಇದ್ದರೂ, ಪ್ರಯೋಗಾತ್ಮಕವಾಗಿ ಎಷ್ಟು ಕಾರ್ಯಸಾಧು, ರೈತರಿಗೆ ಎಷ್ಟು ಸುಲಭ ಲಭ್ಯ ಎನ್ನುವುದನ್ನು ಇನ್ನಷ್ಟೇ ಅರಿಯಬೇಕು.

ಡಿಜಿಟಲ್‌ ಸೇವೆ ಪಿಪಿಪಿ ಮಾದರಿ
ರೈತರಿಗೆ ಡಿಜಿಟಲ್‌ ಮಾದರಿಯಲ್ಲಿ ನೆರವು ನೀಡಬೇಕು. ಅತ್ಯುನ್ನತ ತಂತ್ರಜ್ಞಾನವನ್ನೊದಗಿಸಬೇಕು ಎಂದು ಹಲವು ವರ್ಷಗಳಿಂದ ಹೇಳಿಕೊಂಡು ಬರಲಾಗುತ್ತಿದೆ. ಅದಿನ್ನೂ ಕಾರ್ಯಗತಗೊಂಡಿಲ್ಲ. ಇದನ್ನು ಸಾಕಾರ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಸರ್ಕಾರಿ ಸಂಶೋಧನಾ ಸಂಸ್ಥೆಗಳು, ಇವುಗಳ ಹೆಚ್ಚುವರಿ ಸಂಸ್ಥೆಗಳು ಹಾಗೆಯೇ ಕೃಷಿಕ್ಷೇತ್ರದ ಖಾಸಗಿ ಕಂಪನಿಗಳನ್ನು ಡಿಜಿಟಲ್‌ ಮತ್ತು ತಾಂತ್ರಿಕ ಸೇವೆ ನೀಡಲು ಕೇಂದ್ರ ಬಳಸಿಕೊಳ್ಳಲಿದೆ. ಇದಕ್ಕಾಗಿ ಪಿಪಿಪಿ (ಸರ್ಕಾರಿ-ಖಾಸಗಿ ಸಹಭಾಗಿತ್ವ) ಮಾದರಿಯನ್ನು ಕೇಂದ್ರ ಬಳಸಿಕೊಳ್ಳಲಿದೆ.

ಕೃಷಿ ವಿವಿಯ ಪಠ್ಯಗಳಲ್ಲಿ ಸುಧಾರಣೆ
ಕೃಷಿಯನ್ನು ಆಧುನಿಕ ಪರಿಸ್ಥಿತಿಯ ಅಗತ್ಯಗಳಿಗೆ ತಕ್ಕಂತೆ ಬದಲಿಸಲು ಕೇಂದ್ರ ನಿರ್ಧರಿಸಿದೆ. ಅದಕ್ಕಾಗಿ ರಾಜ್ಯ ಸರ್ಕಾರಗಳಿಗೆ ಕೃಷಿ ವಿವಿಯ ಪಠ್ಯಗಳನ್ನು ಸುಧಾರಿಸಲು ತಿಳಿಸಿದೆ. ಅಂದರೆ ಆನ್‌ಲೈನ್‌ಗೆ ಅನುಕೂಲವಾಗುವಂತೆಯೂ ಇವು ಇರಬೇಕು. ಇವುಗಳ ಮೂಲಕ ಸಹಜ, ವೆಚ್ಚರಹಿತ, ಸಾವಯವ ಕೃಷಿ ಮಾಡಲು ನೆರವು ನೀಡಬೇಕು. ಆಧುನಿಕ ಪದ್ಧತಿ ಅಳವಡಿಸಿಕೊಂಡು, ಮೌಲ್ಯವೃದ್ಧಿಸಬೇಕು, ಕೃಷಿಯ ನಿರ್ವಹಣೆಯೂ ಸುಲಭವಾಗಬೇಕೆನ್ನುವುದು ಕೇಂದ್ರದ ಇಂಗಿತ.

Advertisement

Udayavani is now on Telegram. Click here to join our channel and stay updated with the latest news.

Next