ರೋಣ: ಈ ಬಾರಿ ಉತ್ತಮ ಮುಂಗಾರು ಮಳೆ ಸುರಿದ ಪರಿಣಾಮ, ರೈತರು ‘ತಾ ಮುಂದು ನಾ ಮುಂದು’ ಎಂದು ಬಿತ್ತನೆ ಮಾಡಿ ಎರಡು ತಿಂಗಳ ಗತಿಸಿದರೂ ವರುಣ ದೇವರು ಕೃಪೆ ತೊರುತ್ತಿಲ್ಲ. ಈಗ ವಾಣಿಜ್ಯ ಬೆಳೆ ಈರುಳ್ಳಿ ಅಲ್ಪಸ್ವಲ್ಪ ಜೀವಂತವಾಗಿದ್ದರಿಂದ ರೈತರು ಟ್ಯಾಂಕರ್ ಮೂಲಕ ನೀರನ್ನು ಒದಗಿಸಿ ಬೆಳೆ ರಕ್ಷಿಸಲು ಮುಂದಾಗಿದ್ದಾರೆ.
ಪಟ್ಟಣದ ರೈತ ಮುತ್ತಣ್ಣ ಗಡಗಿ ಎಂಬುವರು ಹೊಲದಲ್ಲಿ ಕೊಳವೆ ಬಾವಿ ಇಲ್ಲ. ಕೆರೆಯೂ ಇಲ್ಲ. ತಾವೇ ತಯಾರಿಸಿದ ಒಂದು ಹೊಸ ಯಂತ್ರದ ಮೂಲಕ ಈರುಳ್ಳಿ ಬೆಳೆಗೆ ನೀರನ್ನು ನೀಡುತ್ತಿದ್ದಾರೆ. 3 ಎಚ್‌ಪಿ ಸಾಮರ್ಥ್ಯದ ಒಂದು ಯಂತ್ರಕ್ಕೆ ಟ್ಯಾಂಕರ್ ಮುಖಾಂತರ ನೀರನ್ನು ನೀಡಿ, ಸುಮಾರು 300 ಅಡಿ ಉದ್ದದ 2 ಇಂಚಿನ ಪೈಪ್‌ಗೆ ಸಣ್ಣ-ಸಣ್ಣ ರಂದ್ರಗಳನ್ನು ತೆಗೆದು ನೀರನ್ನು ಮಳೆ ಹನಿಗಳಂತೆ ಚಿಮ್ಮಿಸಿ ಬೆಳೆಗಳಿಗೆ ಉಣಿಸುತ್ತಿದ್ದಾರೆ.
ಎಕರೆಗೆ 10 ಸಾವಿರ ಖರ್ಚು: ಬೀಜ ಬಿತ್ತಲು ಬೆಳೆಯಲು ಮಾಡುವ ಖರ್ಚು ಒಂದು ಕಡೆಯಾದರೆ, ಬೆಳೆದು ನಿಂತಿರುವ ಬೆಳೆ ರಕ್ಷಿಸಲು ಮತ್ತೊಂದು ಖರ್ಚು ಮಾಡುವಂತಾಗಿದೆ ರೈತರ ಪಾಡು. ಒಂದು ಟ್ಯಾಂಕರ್ ನೀರಿಗೆ 500 ರಿಂದ 600 ರೂ. ನೀಡಬೇಕಾಗಿದೆ. ಅದನ್ನು ಹೊಲಕ್ಕೆ ತರಲು ಒಂದು ಟ್ಯಾಂಕ್‌ಗೆ 350 ರೂ. ಬಾಡಿಗೆ ನೀಡಬೇಕಿದೆ. ಇದಲ್ಲದೆ ಯಂತ್ರಕ್ಕೆ ಡಿಸೇಲ್ ಸೇರಿದಂತೆ ಒಂದು ಟ್ಯಾಂಕರ್ ನೀರನ್ನು ತಂದು ಹೊಲಕ್ಕೆ ಬಳಸಿಕೊಳ್ಳಲು ಒಂದು ಸಾವಿರ ರೂ. ಖರ್ಚು ತಗಲುತ್ತಿದೆ. ಒಂದು ಎಕರೆ ಪ್ರದೇಶಕ್ಕೆ ಸುಮಾರು 10 ಟ್ಯಾಂಕರ್ ನೀರಿನ ಅವಶ್ಯಕತೆ ಇದೆ. ಇದರಿಂದ ಒಂದು ಎಕರೆ ಪ್ರದೇಶದಲ್ಲಿನ ಬೆಳೆ ರಕ್ಷಣೆ ಮಾಡಲು ಸುಮಾರು ಹತ್ತು ಸಾವಿರ ರೂ. ಖರ್ಚು ಮಾಡಬೇಕಾಗಿದೆ.
ನಾವು ಈರುಳ್ಳಿ ಬೆಳೆಯನ್ನು ಬಿತ್ತುವ ಸಮಯದಲ್ಲಿ ಬೀಜ, ಗೊಬ್ಬರವೆಂದು ಎಕರೆ ಪ್ರದೇಶಕ್ಕೆ ಸುಮಾರು 10 ಸಾವಿರದವರೆಗೆ ಖರ್ಚು ಮಾಡಿದ್ದೇವೆ. ಈಗ ಅದೇ ಬೆಳೆಯನ್ನು ತಾತ್ಕಾಲಿಕವಾಗಿ ರಕ್ಷಣೆ ಮಾಡಲು ಎಕರೆಗೆ 10 ಸಾವಿರ ಖರ್ಚು ಮಾಡಿದ್ದೇವೆ. ಆದರೆ ಇದರಿಂದ 10ರಿಂದ 15 ದಿನಗಳ ಕಾಲ ಬೆಳೆಗಳು ಬದುಕಬಲ್ಲವು. ಈ ವಾರದಲ್ಲಿ ಮಳೆಯಾದರೆ ನಾವು ಹಣವನ್ನು ಖರ್ಚು ಮಾಡಿದಕ್ಕೂ ಸಾರ್ಥಕವಾಗುತ್ತದೆ. ಇಲ್ಲವಾದರೆ ಮುಂದಿನ ಹದಿನೈದು ದಿನಗಳ ನಂತರ ಮತ್ತೆ ಬೆಳೆಗಳು ಬಾಡಿ ಹೋಗುತ್ತವೆ ಎಂದು ರೈತ ಮುತ್ತಣ್ಣ ಗಡಗಿ ಅಸಹಾಯಕತೆ ವ್ಯಕ್ತಪಡಿಸಿದರು.