ದಾವಣಗೆರೆ: ಕೇಂದ್ರ ಸರ್ಕಾರ ಕಬ್ಬಿಗೆ ನಿಗದಿಗೊಳಿಸಿರುವ ದರ ಅವೈಜ್ಞಾನಿಕವಾಗಿದ್ದು ಅದನ್ನು ಕೂಡಲೇ ಪರಿಷ್ಕರಿಸಬೇಕು ಎಂದು ಒತ್ತಾಯಿಸಿ ಜಿಲ್ಲೆಯ ಕಬ್ಬು ಬೆಳೆಗಾರರು ಸೋಮವಾರ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನಗರದ ಬಿಜೆಪಿ ಜಿಲ್ಲಾ ಕಚೇರಿ ಎದುರು ಧರಣಿ ನಡೆಸಿದರು.
ಕಬ್ಬಿಗೆ ಕೇಸರಿ ರಿಬ್ಬನ್ ಕಟ್ಟಿಕೊಂಡು ನಗರದ ಪ್ರಮುಖ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಬ್ಬು ಬೆಳೆಗಾರರು, ಬಿಜೆಪಿ ಜಿಲ್ಲಾ ಕಚೇರಿ ಎದುರು ಧರಣಿ ನಡೆಸಿದರು. ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಉಪಾಧ್ಯಕ್ಷ ತೇಜಸ್ವಿ ಪಟೇಲ್, ಕಬ್ಬಿಗೆ ಕೇಂದ್ರ ಸರ್ಕಾರ ನಿಗದಿಗೊಳಿಸಿರುವ ಎಫ್‌ಆರ್‌ಪಿ ದರ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಾಗಿದೆ. ನಿಗದಿಪಡಿಸಿರುವ ದರಕ್ಕೆ ಸಕ್ಕರೆ ಇಳುವರಿಯನ್ನು 10ರಿಂದ 10.25ಕ್ಕೆ ಏರಿಕೆ ಮಾಡಿದ್ದು ಇದರಿಂದ ಬೆಳೆಗಾರರಿಗೆ ನಷ್ಟವಾಗಿದೆ ಎಂದರು.
ದರ ಪರಿಷ್ಕರಣೆ ಮಾಡುವಂತೆ ಕಳೆದ ನಾಲ್ಕೈದು ತಿಂಗಳುಗಳಿಂದ ರೈತರು ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಅಲ್ಲದೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 14 ದಿನಗಳಿಂದ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ. ಆದರೂ ರಾಜ್ಯ ಸರ್ಕಾರ ಯಾವುದೇ ತೀರ್ಮಾನ ಪ್ರಕಟಿಸದೆ ಕಬ್ಬು ಬೆಳೆಗಾರರನ್ನು ನಿರ್ಲಕ್ಷಿಸಿದೆ. ಆದ್ದರಿಂದ ಆಡಳಿತ ಪಕ್ಷದ ಶಾಸಕರ ಮೂಲಕ ಸರ್ಕಾರದ ಗಮನ ಸೆಳೆಯಲು ರಾಜ್ಯ ಸಂಘಟನೆಯ ಕರೆಯ ಮೇರೆಗೆ ಶಾಸಕರು, ಸಂಸದರ ಮನೆ ಎದುರು ಧರಣಿ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಹೆಚ್ಚಾಗಿರುವುದರಿಂದ ಬಿಜೆಪಿ ಕಚೇರಿ ಎದುರೇ ಧರಣಿ ಹಮ್ಮಿಕೊಂಡು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ 30 ಲಕ್ಷ ಕಬ್ಬು ಬೆಳೆಗಾರರಿದ್ದಾರೆ. 30 ಸಾವಿರ ಕೋಟಿ ರೂ. ವಹಿವಾಟು ನಡೆಸಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಐದು ಸಾವಿರ ಕೋಟಿ ತೆರಿಗೆ ಬರುತ್ತಿದೆ. ಆದರೂ ಸರ್ಕಾರ ಕಬ್ಬು ಬೆಳೆಗಾರರ ಬೇಡಿಕೆ ಬಗ್ಗೆ ಉದಾಸೀನ ತೋರುತ್ತಿದೆ. ಕರ್ನಾಟಕ ರಾಜ್ಯಕ್ಕಿಂತ ಕಡಿಮೆ ಸಕ್ಕರೆ ಇಳುವರಿ ಇರುವ ಪಂಜಾಬ್ ರಾಜ್ಯದಲ್ಲಿ ಟನ್ ಕಬ್ಬಿಗೆ 3800ರೂ., ಉತ್ತರಪ್ರದೇಶದಲ್ಲಿ 3500ರೂ., ಮಹಾರಾಷ್ಟ್ರದಲ್ಲಿ 3200ರೂ., ಗುಜರಾತಿನಲ್ಲಿ 4400ರೂ., ತಮಿಳುನಾಡಿನಲ್ಲಿ
ಕಬ್ಬು ಸಾಗಾಣಿಕಾ ವೆಚ್ಚವನ್ನು ಕಾರ್ಖಾನೆಗಳೇ ಭರಿಸುವ ನಿಯಮ ಜಾರಿಯಲ್ಲಿದೆ. ಆಯಾ ರಾಜ್ಯ ಸರ್ಕಾರಗಳೇ ಹೆಚ್ಚುವರಿ ದರ ನಿಗದಿ ಮಾಡಿವೆ. ಆದರೆ ಕರ್ನಾಟಕ ಸರ್ಕಾರ ಯೋಗ್ಯ ಬೆಲೆ ನಿಗದಿ ಮಾಡಲು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.
ಕಾರ್ಖಾನೆಯವರು ಕಬ್ಬು ಕಟಾವು ಸಾಗಾಣಿಕೆ ವೆಚ್ಚ ಮನಬಂದಂತೆ ಏರಿಕೆ ಮಾಡುವುದನ್ನು ನಿಯಂತ್ರಿಸಬೇಕು. ಕಬ್ಬಿನಿಂದ ಬರುವ ಇತರೆ ಉಪಉತ್ಪನ್ನಗಳ ಲಾಭ ಹಂಚಿಕೆ ಮಾಡಿ ರೈತರಿಗೆ ದರ ನಿಗದಿಪಡಿಸಬೇಕು. ಕಬ್ಬು ಕಟಾವು ವಿಳಂಬದ ಅವಧಿಗೆ ಬಡ್ಡಿ ಸೇರಿಸಿ ಹೆಚ್ಚುವರಿ ದರ ನೀಡಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕು.
ರೈತರ ಕೃಷಿ ಸಾಲವನ್ನು ಸಿಬಿಲ್ ಸ್ಕೋರ್‌ನಿಂದ ಹೊರಗಿಡಬೇಕು ಎಂದು ರೈತ ಪ್ರಮುಖರು ಆಗ್ರಹಿಸಿದರು. ರೈತ ಪ್ರಮುಖರಾದ ಪೂಜಾರ ಅಂಜನಪ್ಪ, ಕೆ. ಬಸವರಾಜ್, ಜಿ.ಎ. ಶರತ್, ಜಿ.ಕೆ. ಕಿರಣ್ ಟಿ.ಆರ್. ವಿಜಯಕುಮಾರ್, ದೊಡ್ಡೇಶ್, ಶಿವಕುಮಾರ ಇನ್ನಿತರರು ಧರಣಿಯಲ್ಲಿ ಭಾಗವಹಿಸಿದ್ದರು.
ಕಬ್ಬಿಗೆ ಹೆಚ್ಚುವರಿ ದರ ನಿಗದಿ ಮಾಡುವ ಬಗ್ಗೆ ರಾಜ್ಯ ಸರ್ಕಾರ ನಾಲ್ಕೈದು ಸಭೆಗಳನ್ನು ನಡೆಸಿ ತಜ್ಞರ ಸಮಿತಿ ರಚಿಸಿ ಐದು ದಿನಗಳಲ್ಲಿ ವರದಿ ಪಡೆದರೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ರೈತರಿಗೆ ನ್ಯಾಯ ದೊರಕಿಸುವುದಾಗಿ ಭರವಸೆ ನೀಡಿ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ.
ತೇಜಸ್ವಿ ಪಟೇಲ್, ಉಪಾಧ್ಯಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ