Advertisement

ಕೆರೆಗಳ ಭರ್ತಿಗೆ ರೈತರ ಬೃಹತ್‌ ಪ್ರತಿಭಟನೆ

07:21 AM Jun 19, 2019 | Team Udayavani |

ಮೈಸೂರು: ಜಿಲ್ಲೆಯ ಒಡವಿನಕಟ್ಟೆ, ಕಾಟಸೂರು ಕಬ್ಬಗೆರೆ ಮತ್ತು ಕಲ್ಲಹಳ್ಳಿ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ರೈತ-ಕೃಷಿ ಕಾರ್ಮಿಕ ಸಂಘಟನೆ ವತಿಯಿಂದ ನಗರದಲ್ಲಿ ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

Advertisement

ನಂಜುಮಳಿಗೆ ವೃತ್ತದಿಂದ ಮೆರವಣಿಗೆ ಹೊರಟು ಜಿಲ್ಲಾ ಪಂಚಾಯತ್‌ ಕಚೇರಿ ಎದುರು ಸಮಾವೇಶಗೊಂಡ ಪ್ರತಿಭಟನಾಕಾರರು, ಕೆರೆ ತುಂಬಿಸದ ಅಧಿಕಾರಿಗಳ ಧೋರಣೆ ವಿರೋಧಿಸಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಕ್ಷೇತ್ರ ತೀವ್ರ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಅನ್ನದಾತ ರೈತ ಸಾಲದ ವಿಷ ವರ್ತುಲದಿಂದ ಹೊರಬರಲಾಗದೇ ಬದುಕೇ ಬೇಡವಾಗಿ ಆತ್ಮಹತ್ಯೆಯ ಹಾದಿ ಹಿಡಿದಿದ್ದಾನೆ ಎಂದು ಪ್ರತಿಭಟನಾ ನಿರತ ರೈತರು ದೂರಿದರು.

ಕಬಿನಿ ನೀರು ಹರಿಸಿ: ಮೈಸೂರು ತಾಲೂಕಿನ ಹಾರೋಹಳ್ಳಿ ಕೆರೆ ಬತ್ತಿದ್ದು, ಇಲ್ಲಿನ ಜನ ಬರಗಾಲದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕೆರೆಗೆ ನೀರು ತುಂಬಿಸಲೆಂದು ದೇವರಾಜ ಅರಸು ನಾಲೆಯಿಂದ ನೀರು ಸರಬರಾಜಿಗೆ ಕಾಲುವೆ ನಿರ್ಮಿಸಿದ್ದರೂ ಕೆರೆಗೆ ನೀರು ತಲುಪುತ್ತಿಲ್ಲ.

ಅಲ್ಲದೇ ಕೆರೆಯಿಂದ 7 ಕಿ.ಮೀ ದೂರದಲ್ಲಿ ಹರಿಯುತ್ತಿರುವ ಕಬಿನಿ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ಕೆರೆಗೆ ನೀರು ತುಂಬಿಸುವ ಯೋಜನೆಗೂ ಗ್ರಹಣ ಹಿಡಿದಿದೆ. ಇದರಿಂದ ಅಂತರ್ಜಲ ಮಟ್ಟ ಕುಸಿದು ಕೊಳವೆಬಾವಿಗಳು ಬತ್ತಿ ಹೋಗಿವೆ. ಹಳ್ಳಿಗಳಲ್ಲಿ ಕುಡಿಯುವ ನೀರು ಸಿಗದೇ ಜನ ಪರದಾಡುವಂತಾಗಿದೆ ಎಂದು ದೂರಿದರು.

Advertisement

ನೀರಾವರಿ ಯೋಜನೆ: ಮದ್ದೂರು, ಮದ್ದೂರಹುಂಡಿ, ಚುಂಚರಾಯನ ಹುಂಡಿ, ಕಲ್ಲಹಳ್ಳಿ, ಸೋಲಿಗರ ಕಾಲೋನಿ, ಕಾಡಸೂರು, ಹಂಪಾಪುರ, ಹೊಮ್ಮರಗಳ್ಳಿ, ಗುಜ್ಜೆಗೌಡನಪುರ, ಚಾಮಲಾಪುರ ಗ್ರಾಮಗಳು ತೀವ್ರವಾದ ನೀರಿನ ಸಮಸ್ಯೆ ಎದುರಿಸುತ್ತಿವೆ.

ಕೃಷಿ ಹಾಗೂ ರೈತ ಸಮುದಾಯ ಉಳಿಯಬೇಕಾದರೆ ನೀರಾವರಿ ಯೋಜನೆಗಳು ತ್ವರಿತವಾಗಿ ಜಾರಿಯಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಒಡವಿನಕಟ್ಟೆ, ಕಲ್ಲಹಳ್ಳಿ ಊರಕೆರೆ ಮತ್ತು ಕಾಡಸೂರು ಕಬ್ಬಕೆ ಈ ಕೂಡಲೇ ನೀರು ತುಂಬಿಸಬೇಕು.

ವರುಣಾ ನಾಲೆಯನ್ನು ಸರಿಪಡಿಸಿ ಕಬಿನಿ ನದಿಯಿಂದ ಏತ ನೀರಾವರಿ ಯೋಜನೆ ಜಾರಿಗೊಳಿಸಬೇಕು. ಈ ಭಾಗದ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಯಾಗಬೇಕೆಂದು ಒತ್ತಾಯಿಸಿದರು.

ಶಶಿಧರ್‌, ನಂಜುಂಡಪ್ಪ, ಮದ್ದೂರಿನ ನಂಜುಂಡಪ್ಪ, ಕಲ್ಲಹಳ್ಳಿ ನಂಜುಂಡಪ್ಪ, ಶಿವಣ್ಣ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next