ಚಿತ್ರದುರ್ಗ: ದಿಲ್ಲಿ ಚಲೋ ಹಮ್ಮಿಕೊಂಡಿರುವ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿರುವುದನ್ನು ಖಂಡಿಸಿ ಅಖೀಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ ಜಿಲ್ಲಾ ಶಾಖೆಯಿಂದ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ದಿಲ್ಲಿ ಚಲೋ ಚಳುವಳಿ ಹಮ್ಮಿಕೊಂಡಿರುವ ರೈತರನ್ನು ವಿರುದ್ಧ ಹರಿಯಾಣ, ಉತ್ತರಪ್ರದೇಶದ ಗಡಿಗಳಲ್ಲಿಯೇ ವಿಪರೀತ ಪೊಲೀಸ್ ಭದ್ರತೆ, ಪ್ಯಾರಾ ಮಿಲಿಟರಿಯಿಂದ ತಡೆದು ಲಾಠಿ ಪ್ರಹಾರ ನಡೆಸಿದ್ದಲ್ಲದೆ ಜಲ μರಂಗಿ ಬಳಸಿ ರೈತರ ಹೋರಾಟ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಮಾತುಕತೆ ಮೂಲಕ ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ಕೇಂದ್ರ ಸರ್ಕಾರ ಅನ್ನದಾತರನ್ನು ಹೀನಾಯವಾಗಿ ಕಾಣುತ್ತಿದೆ ಎಂದುಪ್ರತಿಭಟನಾನಿರತರು ಆಕ್ರೋಶವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ನೈತಿಕ ಹೊಣೆ ಹೊತ್ತು ಬಹಿರಂಗವಾಗಿ ರೈತರಲ್ಲಿ ಕ್ಷಮೆ ಯಾಚಿಸಬೇಕು. ಕೃಷಿ ಸಂಬಂಧಿತ ವಿದ್ಯುತ್ ಕಾಯ್ದೆ ತಿದ್ದುಪಡಿ-2020ನ್ನು ಕೂಡಲೇ ರದ್ದುಪಡಿಸಬೇಕು. ಡಾ| ಎಂ.ಎಸ್. ಸ್ವಾಮಿನಾಥನ್ ವರದಿಯನ್ವಯ ಕೃಷಿ ಉತ್ಪನ್ನಗಳಿಗೆಕನಿಷ್ಠ ಬೆಂಬಲ ಬೆಲೆ ಖಾತರಿಗೊಳಿಸುವ ಕಾನೂನು ಜಾರಿಗೊಳಿಸಬೇಕು. ಎಲ್ಲಾ ರೈತರು, ಕೃಷಿ ಕಾರ್ಮಿಕರು, ಗ್ರಾಮೀಣ ಪ್ರದೇಶದ ಬಡವರಿಗೆ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್‌ಗಳು ಸಾಲ ನೀಡಬೇಕು. ವಿಶೇಷ ಸಂದರ್ಭಗಳಲ್ಲಿಸಾಲ ಮನ್ನಾ, ಬಡ್ಡಿ ಮನ್ನಾದಂತಹ ಅಂಶಗಳನ್ನು ಒಳಗೊಂಡ ಋಣಮುಕ್ತ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಕೋವಿಡ್ ಲಾಕ್‌ಡೌನ್‌ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ರೈತರ, ಬಡವರ, ಕೃಷಿ ಕೂಲಿ ಕಾರ್ಮಿಕರ ಹಿತ ಕಾಪಾಡುವ ಬದಲು ಕೇಂದ್ರ ಸರ್ಕಾರ ಸುಗ್ರಿವಾಜ್ಞೆ ಮೂಲಕ ರೈತ ವಿರೋಧಿ ಕಾನೂನು ಜಾರಿಗೆ ತಂದಿದೆ. ಕಾರ್ಪೊರೇಟ್, ಬಂಡವಾಳಶಾಹಿ ಉದ್ಯಮಿಗಳ ಪರವಾಗಿ ನಿಂತಿದೆ. ಇದರಿಂದ ಕೃಷಿ ಸಂಪೂರ್ಣವಾಗಿ ನಾಶವಾಗುವುದರಲ್ಲಿ ಅನುಮಾನವಿಲ್ಲ. ಕೇಂದ್ರ ಸರ್ಕಾರ ತನ್ನ ಹಠಮಾರಿ ಧೋರಣೆಯಿಂದ ಹಿಂದೆ ಸರಿಯಬೇಕು. ಇಲ್ಲವಾದಲ್ಲಿ ಮುಂದೆ ಆಗಬಹುದಾದ ಅನಾಹುತಗಳಿಗೆ ಪ್ರಧಾನಿ ನೇರ ಹೊಣೆ ಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಮುಖಂಡರಾದ ಟಿ. ನುಲೇನೂರು ಶಂಕರಪ್ಪ, ಬಸ್ತಿಹಳ್ಳಿ ಜಿ. ಸುರೇಶ್‌ಬಾಬು, ಧನಂಜಯ,ಎಸ್.ಪ್ರವೀಣ್‌ಕುಮಾರ್, ಬಿ.ಒ. ಶಿವಕುಮಾರ್, ಆರ್. ಚೇತನ್,ಎಂ. ಲಕ್ಷ್ಮೀಕಾಂತ್, ಬಿ.ಟಿ. ಓಬಣ್ಣ, ನಾಗರಾಜ್ ಮುದ್ದಾಪುರ, ತಿಪ್ಪೇಸ್ವಾಮಿ, ಗುರುಪಾದಪ್ಪ, ಎಐಯುಟಿಯುಸಿಯ ರವಿಕುಮಾರ್, ಟಿ. ಶಫಿವುಲ್ಲಾ, ಎಚ್. ನಿಂಗರಾಜು ಭಾಗವಹಿಸಿದ್ದರು.