Advertisement

ಏಕಾಏಕಿ ತೆರವಿಗೆ ರೈತರ ಆಕ್ರೋಶ

05:46 PM Aug 07, 2021 | Team Udayavani |

ಹೊಸಪೇಟೆ: ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಬಡ ರೈತರನ್ನು ಒಕ್ಕಲೆಬ್ಬಿಸಿಯಾದರೂ ಇಲ್ಲಿ ಹೋಟೆಲ್‌, ಪಾರ್ಕ್‌, ವಾಣಿಜ್ಯ ಚಟುವಟಿಕೆ ನಡೆಸುವುದಕ್ಕೆ ಭೂಮಿ ನೀಡುತ್ತಾರೆ ಎಂದು ಕಮಲಾಪುರದ ಸರ್ವೇ ನಂಬರ್‌ 1080ರ ಜಮೀನಿನ ರೈತರ ಅಳಲು ತೋಡಿಕೊಂಡಿದ್ದಾರೆ.

Advertisement

ಕಮಲಾಪುರ ಹೋಬಳಿಯ ಪಾಪಿನಾಯಕನಹಳ್ಳಿ ರಸ್ತೆಯಲ್ಲಿ ಸರ್ವೇ ನಂಬರ್‌ 1080ರ ಜಮೀನಿನಲ್ಲಿ 30-35 ರೈತರು ಸಾಗುಳಿವಳಿ ಪತ್ರದೊಂದಿಗೆ ಒಕ್ಕಲುತನ ಮಾಡುತ್ತಿದ್ದಾರೆ. ಏಕಾಏಕಿ ಅಧಿಕಾರಿಗಳು ಪೋಲಿಸರೊಂದಿಗೆ ಆಗಮಿಸಿ ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ರೈತರ
ಆರೋಪಿಸಿದ್ದಾರೆ.

ಸ್ವಾತಂತ್ರ್ಯ ಪೂರ್ವದಿಂದ ಒಕ್ಕಲುತನ: ಕಮಲಾಪುರದ ಎಸ್ಸಿ-ಎಸ್ಟಿ ಜನಾಂಗದವರು ಸೇರಿ ಇತರೆ ಸಮುದಾಯದ 30ರಿಂದ 35 ಜನರು ಸ್ವಾತಂತ್ರ್ಯ ಪೂರ್ವದಿಂದ ಸಾಗುವಳಿ ಮಾಡುತ್ತಿದ್ದಾರೆ. 1962ರಿಂದ 2003ರ ವರೆಗೆ ಸಾಗುವಳಿ ಕೈಬರಹ ಪಹಣಿಹೊಂದಿಗೆ, ತಾವು ವ್ಯವಸಾಯ ಮಾಡುವ ಜಮೀನಿಗೆ ತೆರಿಗೆ ಕೂಡ ಕಟ್ಟಿದ ದಾಖಲೆಗಳಿಗೆ. 2004 ನಂತರ ನಮ್ಮ ಬಳಿ ತೆರಿಗೆ ಕಟ್ಟಿಸುವುದು ಹಾಗೂ ಪಹಣಿ ಕೊಡುವುದು ನಿಲ್ಲಿಸಿದರು. ಮೂರು ತಲೆಮಾರಿನಿಂದ ಹೊಟ್ಟೆ ತುಂಬಿಸುತ್ತಿದ್ದ ಜಮೀನು ಈಗ ಕೈಬಿಡಿ ಎನ್ನುತ್ತಿದ್ದಾರೆ. ಹೊಲದಲ್ಲಿ ಕೆಲವರು ಆಶ್ರಯಕ್ಕೆ ಕಟ್ಟಿಕೊಂಡಿದ್ದ ಗುಡಿಸಲು ಕಿತ್ತಿ ನಮ್ಮ ಹೊರಹಾಕಿ ಅಧಿಕಾರಿಗಳು ದರ್ಪತೋರಿಸುತ್ತಿದ್ದಾರೆ. ಮುಂದೇನು ಮಾಡಬೇಕು ಎನ್ನುವುದು ತಿಳಿಯದಾಗಿದೆ ಎಂದು ರೈತರು ಅಳಲಾಗಿದೆ.

ಇದನ್ನೂ ಓದಿ:ಬಂಗಾರದ ಬರ ನೀಗಿಸಿದ ನೀರಜ್: ಜಾವೆಲಿನ್ ಥ್ರೋನಲ್ಲಿ ಚಿನ್ನಕ್ಕೆ ಗುರಿಯಿಟ್ಟ ನೀರಜ್ ಚೋಪ್ರಾ

ಪ್ರವಾಸೋದ್ಯಮಕ್ಕೆ ಹಸ್ತಾಂತರ: 2003ರ ಹಿಂದೆ ಕಂದಾಯ ಇಲಾಖೆ ದಾಖಲೆ ಪ್ರಕಾರ ರಾರಾಳು ಗುಡ್ಡ ಎಂದು ನಮೂದಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ 2003-04ರಲ್ಲಿ ಕಂದಾಯ ಇಲಾಖೆಯಿಂದ ಸರಕಾರ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರ ಹೆಸರಿಗೆ ಹಸ್ತಾಂತರವಾಗಿದೆ ಎಂದು ಕಂದಾಯ ಇಲಾಖೆ ಅಧಿ ಕಾರಿಗಳು ಹೇಳುತ್ತಾರೆ.

Advertisement

ರಾಜಕೀಯ ಲಾಭ
ಈ ಹಿಂದೆ ಜಂಗಲ್‌ ರೆಸಾರ್ಟ್‌, ಹಂಪಿ ಜೂ ಆರಂಭಿಸಿದರು. ಇದರಿಂದ ಯಾರಿಗೆ ಲಾಭ ಆಗುತ್ತಿದೋ ಗೊತ್ತಿಲ್ಲ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಸಾಗುವಳಿ ಮಾಡುವ ಬಡವರನ್ನು ಒಕ್ಕಲೆಬ್ಬಿಸಿ ಅಕ್ರಮವಾಗಿ ಆದಾಯಗಳಿಸುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಹುನ್ನಾರ ಆಗಿದೆ. ಬಡವರ ಅಭಿವೃದ್ಧಿಗಿಂತ ಇಂಥ ಯೋಜನೆಗಳಿಂದ ತಮ್ಮ ವೈಯಕ್ತಿಕ ಖಜಾನೆ ತುಂಬಿಸುವುದೇ ಇವರ ಯೋಜನೆಯಾಗಿದೆ
ಎಂದು ಇಲ್ಲಿನ ಸಾಗುವಳಿದಾರ ಆರೋಪವಾಗಿದೆ.

ಏನಿದು ಯೋಜನೆ?
ತಾಲೂಕಿನ ಕಮಲಾಪುರದ ಬಳಿಯ ಅಟಲ್‌ ಬಿಹಾರಿ ವಾಜಪೇಯಿ ಜೂಲಾಜಿಕಲ್‌ ಪಾರ್ಕ್‌ ಬಳಿ ಸರಕಾರಕ್ಕೆ ಸೇರಿದ 213 ಎಕರೆ ಜಾಗದಲ್ಲಿ ಸುಸಜ್ಜಿತ ತ್ರಿಸ್ಟಾರ್‌ ಹೋಟೆಲ್‌ ನಿರ್ಮಿಸಲಾಗುವುದು. ಅದಕ್ಕೆ 18ರಿಂದ 20 ಕೋಟಿರೂ. ವೆಚ್ಚದಲ್ಲಿ ವಾಹನ ನಿಲುಗಡೆಗೆ ಪಾರ್ಕಿಂಗ್‌,
ಹೆಲಿಪ್ಯಾಡ್‌, ಥೀಮ್‌ ಪಾರ್ಕ್‌ ಹಾಗೂ ಒಂದು ಸಾವಿರ ವಿದ್ಯಾರ್ಥಿಗಳು ಉಳಿದುಕೊಳ್ಳಲು ಕಟ್ಟಡ ನಿರ್ಮಾಣ ಸೇರಿ ಹಂಪಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಮೂಲಸೌಕರ್ಯ ಕಲ್ಪಿಸಿ ಅಧಿಕ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ಹಾಕಿಕೊಳ್ಳಲಾಗುತ್ತಿದೆ. ಆದ್ದರಿಂದ ಪ್ರವಾಸೋದ್ಯಮ
ಇಲಾಖೆಯಿಂದ 500 ಕೋಟಿ ರೂ. ವೆಚ್ಚದಲ್ಲಿ ಹಂಪಿ ಸಮಗ್ರ ಅಭಿವೃದ್ಧಿಗೆ ಮಾಸ್ಟರ್‌ ಪ್ಲ್ಯಾನ್ ತಯಾರಿಸಲಾಗಿದೆ.

ಮಾಹಿತಿ ನೀಡದ ಅಧಿಕಾರಿಗಳು
2013-14ರಲ್ಲಿ ಕಂದಾಯ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಮಾಡಿರುವುದು, ಸಾಗುವಳಿದಾರರಿಗೆ ಮಾಹಿತಿ ಇಲ್ಲದೇ ಏಕಾಏಕಿ ಅಂದಿನ ಸಚಿವರಾದ ಶ್ರೀರಾಮಲು, ಜನಾರ್ಧನರೆಡ್ಡಿ ಭೂಮಿಪೂಜೆ ನೆರವೇರಿಸಿದರು. ಅಂದಿನಿಂದ ಇಂದಿನವರೆಗೆ ಮನವಿ ಮಾಡುತ್ತಿದ್ದಾರೆ. 2006ರಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ ಹಾಗೂ ಹೊಸಪೇಟೆ ಉಪಾವಿಭಾಗಾಧಿ ಕಾರಿಗೆ ಅಂದಿನ ಪ್ರವಾಸೋದ್ಯಮ ಇಲಾಖೆ ಸಚಿವ ಶ್ರೀರಾಮುಲು ಟಿಪ್ಪಣಿ ಬರೆದು ಪರಿಶೀಲಿಸಿ ಕ್ರಮಕ್ಕೆ ಆದೇಶ ನೀಡಿರುತ್ತಾರೆ. ಆದರೆ ಈವರೆಗೆ ಅಧಿ ಕಾರಿಗಳು ಯಾವುದೇ ಕ್ರಮಕೈಗೊಳ್ಳದೇ ಈಗ ಸಾಗುವಳಿದಾರರಿಗೆ ಒಕ್ಕಲೆಬ್ಬಿಸುತ್ತಿದ್ದಾರೆ ಎಂಬುದು ರೈತರ ಆರೋಪ.

ತಲೆಮಾರಿನಿಂದ ವ್ಯವಸಾಯ ಮಾಡುತ್ತಿದ್ದೇವು. ಆದರೆ ನಮ್ಮ ಹಿರಿಯರು ಅವಿದ್ಯಾವಂತರು ಇಂತಹ ಸಂಕಷ್ಟ ಬರುತ್ತದೆ ಎಂದು ತಿಳಿಯದು. ಇಲ್ಲದಿದ್ದರೆ ಮೊದಲೇ ಪಟ್ಟ ಪಹಣಿ ಮಾಡಿಸುತ್ತಿದ್ದರು. ಜನಪ್ರತಿನಿಧಿ ಗಳ ದುರಾಸೆ ನಮ್ಮ ಜೀವನಕ್ಕೆ ಕುತ್ತು ತಂದಿದೆ.
ಪತ್ರಿ ಬೊಮ್ಮಯ್ಯ,
-ಸಾಗುವಳಿದಾರ, ಕಮಲಾಪುರ, ಹೊಸಪೇಟೆ

ನೂರಾರು ವರ್ಷಗಳಿಂದ ಸಾಗುವಳಿ ಮಾಡುತ್ತ ಬರುತ್ತಿದ್ದ ಇಲ್ಲಿನ ಕೆಳ ವರ್ಗದ ಬಡ ಜನರ ಒಕ್ಕಲೆಬ್ಬಿಸುವ ಕೆಲಸ ನಡೆಯುತ್ತಿದೆ. ಇಲ್ಲಿ ಅಭಿವೃದ್ಧಿ ನಡೆಯುವುದಾದರೆ ಪರ್ಯಾಯ ಜಮೀನುಗಳನ್ನು ಕೊಟ್ಟು ನಂತರ ಇಲ್ಲಿ ಅಭಿವೃದ್ಧಿ ಕಾರ್ಯ ನಡೆಸಬೇಕು.
ಹನುಮಂತ ನಾಯಕ,
-ವೀರಭದ್ರಾ ನಾಯಕ, ಮುಖಂಡರು, ಕಮಲಾಪುರ

ಪ್ರವಾಸೋದ್ಯಮ ಇಲಾಖೆ ಹೆಸರಿನಲ್ಲಿರುವ ಜಮೀನು ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುತ್ತಿದೆ. ಆದ್ದರಿಂದ ನಮ್ಮ ಕಾರ್ಯ ಮುಂದುವರೆದಿದೆ. ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಅವರ ಜಮೀನು ಇದ್ದರೆ ಕಂದಾಯ ಇಲಾಖೆಗೆ ಕೇಳಲಿ. ಎಲ್ಲಿ ಇದೆ ಎಂದು ತೋರಿಸುತ್ತಾರೆ.
-ಡಾ| ತಿಪ್ಪೇಸ್ವಾಮಿ, ಉಪ ನಿರ್ದೇಶಕ,
ಪ್ರವಾಸೋದ್ಯಮ ಇಲಾಖೆ, ಕಮಲಾಪುರ

ಪ್ರವಾಸೋದ್ಯಮ ಹೆಸರಿನಲ್ಲಿರುವ ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿರುವುದರಿಂದ ತೆರವು ಮಾಡಲಾಗಿದೆ. ಈ ಹಳೇ ದಾಖಲೆಗಳಿದ್ದರೆ ಮುಂದಿನ ಕ್ರಮಕ್ಕೆ ಕೈಗೊಳ್ಳಲಾಗುವುದು.
ಸಿದ್ದರಾಮೇಶ್ವರ, ಉಪವಿಭಾಗಾಧಿಕಾರಿ, ಹೊಸಪೇಟೆ

Advertisement

Udayavani is now on Telegram. Click here to join our channel and stay updated with the latest news.

Next