Advertisement

ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಅವಶ್ಯ; ಬಿ.ಎನ್‌.ಮಲ್ಲಿಕಾರ್ಜುನಪ್ಪ

06:15 PM Dec 23, 2022 | Team Udayavani |

ಹುಬ್ಬಳ್ಳಿ: ರೈತರು ಇಂದು ಹಲವಾರು ಕಷ್ಟಗಳ ನಡುವೆ ಬೆಳೆ ಬೆಳೆಯುತ್ತಿದ್ದಾರೆ. ಅವರು ಬೆಳೆದ ಬೆಳೆಗೆ ಯೋಗ್ಯ ಬೆಲೆ ದೊರೆಯಬೇಕು. ಅವರಿಗೆ ಸೂಕ್ತ ರೀತಿಯ ಸಹಾಯ-ಸಹಕಾರ ನೀಡುವುದು ಅವಶ್ಯ ಎಂದು ರಾಜ್ಯ ಸಂಬಾರ ಪದಾರ್ಥಗಳ ಅಭಿವೃದ್ಧಿ ಮಂಡಳಿ ನಿರ್ದೇಶಕ ಬಿ.ಎನ್‌. ಮಲ್ಲಿಕಾರ್ಜುನಪ್ಪ ಹೇಳಿದರು.

Advertisement

ರಾಜ್ಯ ಸಂಬಾರ ಪದಾರ್ಥಗಳ ಅಭಿವೃದ್ಧಿ ಮಂಡಳಿ ಹುಬ್ಬಳ್ಳಿ ಹಾಗೂ ಭಾರತೀಯ ಸಂಬಾರ ಮಂಡಳಿ(ಕೊಚ್ಚಿನ್‌) ಸಹಯೋಗದಲ್ಲಿ ಇಲ್ಲಿನ ಉಣಕಲ್‌ದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಬಾರ ಪದಾರ್ಥಗಳ ಖರೀದಿದಾರರ, ಮಾರಾಟಗಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ವಾಣಿಜ್ಯ ಕ್ಷೇತ್ರದಲ್ಲಿ ಹುಬ್ಬಳ್ಳಿ ಮುಂಚೂಣಿಯಲ್ಲಿದೆ. ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಸಂಬಾರು ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಗಿದೆ. ಸಂಬಾರ ಪದಾರ್ಥಗಳ ಮೌಲ್ಯ ವೃದ್ಧಿಗೆ ರೈತರೊಂದಿಗೆ ಉತ್ತಮ ಬಾಂಧವ್ಯ ಹಾಗೂ ಸಹಕಾರ ಅಗತ್ಯ. ಮಂಡಳಿ ಈ ಭಾಗದ ಸಂಬಾರ ಪದಾರ್ಥಗಳಿಗೆ ಮಾರುಕಟ್ಟೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತ ಬಂದಿದೆ ಎಂದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿನಯ ಜವಳಿ ಮಾತನಾಡಿ, ದೇಶದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ಭಾರತದ ಸಂಬಾರ ಪದಾರ್ಥಗಳಿಗೆ ಭಾರೀ ಬೇಡಿಕೆ ಇದೆ. ತಂತ್ರಜ್ಞಾನ ಬಳಸಿಕೊಂಡು ನಮ್ಮ ಪದಾರ್ಥಗಳನ್ನು ಪ್ರಪಂಚದಾದ್ಯಂತ ತಲುಪಿಸಬೇಕು. ಇದಕ್ಕಾಗಿ ರೈತರು ಸರಕಾರದ ಸೌಲಭ್ಯ ಬಳಸಿಕೊಳ್ಳಬೇಕು. ಬೆಳೆಗಳ ಮೌಲ್ಯವರ್ಧನೆ ಮಾಡಿಕೊಳ್ಳಬೇಕು ಎಂದರು.

ಪ್ರಾಸ್ತಾವಿಕ ಮಾತನಾಡಿದ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್‌.ಗಿರೀಶ, ಸಂಬಾರ ಪದಾರ್ಥಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಪ್ರತಿ ವರ್ಷ 10ಮೆಟ್ರಿಕ್‌ ಟನ್‌ಗಳಷ್ಟು ಸಂಬಾರ ಪದಾರ್ಥಗಳನ್ನು ಉತ್ಪಾದಿಸಲಾಗುತ್ತಿದೆ.

Advertisement

ಪದಾರ್ಥಗಳ ಮೌಲ್ಯವರ್ಧನೆ, ಮಾರುಕಟ್ಟೆಗೆ ಮಂಡಳಿ ಒತ್ತು ನೀಡುತ್ತ ಬಂದಿದೆ. ಗೇರುಸೊಪ್ಪದ ಚೆನ್ನ ಭೈರಾದೇವಿ ಸಂಬಾರು ಪದಾರ್ಥಗಳಿಗೆ ಹೆಚ್ಚು ಆದ್ಯತೆ ನೀಡಿದ್ದರು. ಭಾರತದ ಕಾಳು ಮೆಣಸಿನ ರಾಣಿ ಎಂದು ಹೆಸರಾಗಿದ್ದರು. ಹಿಂದೆ ಹೊನ್ನಾವರ, ಭಟ್ಕಳ ಬಂದರಿನಿಂದ ಸಂಬಾರು ಪದಾರ್ಥಗಳನ್ನು ರಫ್ತು ಮಾಡಲಾಗುತ್ತಿತ್ತು. ಕಾಳು ಮೆಣಸು, ಏಲಕ್ಕಿ ಸೇರಿದಂತೆ ವಿವಿಧ ಪದಾರ್ಥಗಳನ್ನು ರಾಜ್ಯದ ಹಲವೆಡೆ ಬೆಳೆಯಲಾಗುತ್ತದೆ. ರಫ್ತು ಹಾಗೂ ಉತ್ಪಾದನೆ ಪ್ರಮಾಣ ಹೆಚ್ಚಳ, ಖರೀದಿದಾರರು ಮತ್ತು ಮಾರಾಟಗಾರರನ್ನು ಒಂದೇ ಸೂರಿನಡಿ ಸೇರಿಸಿ, ಚರ್ಚೆ-ಸಂವಾದ ನಡೆಸುವುದಕ್ಕಾಗಿ ಈ ಸಮಾವೇಶ ಆಯೋಜಿಸಲಾಗಿದೆ ಎಂದರು.

ಗಣ್ಯರು ಸಮಾವೇಶದ ಕಿರುಹೊತ್ತಿಗೆ ಬಿಡುಗಡೆ ಮಾಡಿದರು. ಉದ್ಘಾಟನಾ ಸಮಾರಂಭದ ಬಳಿಕ ರಫ್ತುದಾರರು, ಖರೀದಿದಾರರು, ರೈತರೊಂದಿಗೆ ಸಂವಾದ ನಡೆಯಿತು.

ಭಾರತೀಯ ಸಂಬಾರು ಮಂಡಳಿ ಉಪ ನಿರ್ದೇಶಕಿ ಡಾ| ಜಾನ್ಸಿ ಎಂ., ಸಿದ್ದಾಪುರದ ಅಘನಾಶಿನಿ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಎಂ.ಆರ್‌. ಹೆಗಡೆ, ಕುಂದಗೋಳದ ಅಮರಶಿವ ರೈತ ಉತ್ಪಾದಕರ ಸಂಸ್ಥೆ ಅಧ್ಯಕ್ಷ ಉಮೇಶ ಹೆಬಸೂರ, ಹುಬ್ಬಳ್ಳಿಯ ಉಳುವ ಯೋಗಿ ರೈತ ಉತ್ಪಾದಕರ ಸಂಸ್ಥೆ ಅಧ್ಯಕ್ಷ ರಾಜು ಹನಮಕ್ಕನವರ, ರಾಯಚೂರು ರೈತ ಉತ್ಪಾದಕರ ಸಂಸ್ಥೆ ಅಧ್ಯಕ್ಷ ಚಂದ್ರಶೇಖರಪ್ಪ, ಕೊಟ್ಟೂರೇಶ್ವರ ಮಹಿಳಾ ರೈತ ಉತ್ಪಾದಕರ ಸಂಸ್ಥೆ ಅಧ್ಯಕ್ಷೆ ಅರ್ಚನಾ ಸಜ್ಜನ, ಚಿದಾನಂದಪ್ಪ ಪಿ.ಜಿ., ತೋಟಗಾರಿಕೆ ಇಲಾಖೆ ಕಾಶಿನಾಥ ಭದ್ರನವರ ಇನ್ನಿತರರು ಇದ್ದರು. ಮಂಡಳಿಯ ಹುಬ್ಬಳ್ಳಿಯ ಪ್ರಧಾನ ವ್ಯವಸ್ಥಾಪಕ ರವೀಂದ್ರ ಹಕಾಟಿ ಸ್ವಾಗತಿಸಿದರು. ಸಹಾಯಕ ನಿರ್ದೇಶಕ ಯೋಗೇಶ ಕಿಲಾರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next