Advertisement

ರೈತರ ಕಾನೂನು ಜಿಲ್ಲಾಡಳಿತ ಅನುಷ್ಠಾನಿಸಲಿ: ಶರ್ಮಾ​​​​​​​

12:30 AM Feb 23, 2019 | |

ಮಣಿಪಾಲ: ಬಜೆ ಡ್ಯಾಂನಲ್ಲಿ ಸಾಕಷ್ಟು ನೀರಿದ್ದರೂ ಕೃಷಿಗೆ ಬಳಸಲು ರೈತರಿಗೆ ನಿರ್ಬಂಧ ಹೇರಲಾಗಿದೆ. 68 ಪಂಪ್‌ ಸೆಟ್‌ಗಳ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. 22 ದಿನಗಳಿಂದ ಕೃಷಿ ಒಣಗುತ್ತಿದ್ದರೂ ಜಿಲ್ಲಾಧಿಕಾರಿ, ಅಧಿಕಾರಿಗಳು ಕರುಣೆ ತೋರಿಲ್ಲ. ಶಾಸಕರ ಮನವಿಗೂ ಜಿಲ್ಲಾಧಿಕಾರಿ ಸ್ಪಂದಿಸಿಲ್ಲ. ಆದ್ದರಿಂದ ರೈತರೇ ವಾರಕ್ಕೆರಡು ಬಾರಿ ಡೀಸೆಲ್‌ ಪಂಪ್‌ಗ್ಳನ್ನು ಬಳಸಿ ಕೃಷಿಗೆ ನೀರು ಹಾಯಿಸಲಿದ್ದಾರೆ. ನಮ್ಮ ಮನವಿಗೆ ಶೀಘ್ರ ಸ್ಪಂದಿಸುವಲ್ಲಿ ವಿಫ‌ಲವಾದ ಜಿಲ್ಲಾಧಿಕಾರಿಗಳ ಸಭೆಗೆ ಬಹಿಷ್ಕಾರ ಹಾಕಿದ್ದೇವೆ. ರೈತರ ಈ ಕಾನೂನನ್ನು ಜಿಲ್ಲಾಡಳಿತ ಅನುಷ್ಠಾನಿಸಲೇಬೇಕೆಂದು ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ ಹೇಳಿದರು.

Advertisement

ಅವರು ಶುಕ್ರವಾರ ಬಜೆ ಡ್ಯಾಂ ಪಂಪ್‌ ಹೌಸ್‌ ಮುಂಭಾಗದಲ್ಲಿ ಆಯೋಜಿಸಿದ್ದ ರೈತರ ಪ್ರತಿಭಟನೆಯಲ್ಲಿ ಮಾತನಾಡಿದರು. ಪ್ರತಿಭಟನೆಯ ಮೊದಲು ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ನಗರಕ್ಕೆ ನೀರು ಪೂರೈಸುವ ಪಂಪ್‌ಗ್ಳನ್ನು ಸ್ಥಗಿತಗೊಳಿಸಲಾಯಿತು.
 
ಜಿಲ್ಲಾಡಳಿತಕ್ಕೆ ಇನ್ನು ಮನವಿ ಸಲ್ಲಿಸುವ ಪ್ರಮೇಯವೇ ಇಲ್ಲ. ಡೀಸೆಲ್‌ ಪಂಪ್‌ಗ್ಳಿಂದ ಶನಿವಾರ ಮತ್ತು ರವಿವಾರ ರೈತರು ಬಜೆಯಿಂದ ನೀರೆತ್ತಲಿದ್ದಾರೆ. ಮೆಸ್ಕಾಂ ಶೀಘ್ರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸಬೇಕು. ಇಲ್ಲದಿದ್ದಲ್ಲಿ ರೈತರೇ ವಿದ್ಯುತ್‌ ಸಂಪರ್ಕ ಕಲ್ಪಿಸಲಿದ್ದಾರೆ. ಈ ಸಂದರ್ಭ ಅನಾಹುತವಾದರೆ ಮೆಸ್ಕಾಂ, ಜಿಲ್ಲಾಡಳಿತವೇ ಹೊಣೆ ಎಂದು ರೈತ ಮುಖಂಡ ಕುದಿ ಶ್ರೀನಿವಾಸ್‌ ಭಟ್‌ ಎಚ್ಚರಿಕೆ ನೀಡಿದರು.
 
ಪರಂಪೆಯಿಂದ ಸ್ವರ್ಣೆಯ ನೀರಿನಿಂದ ಕೃಷಿ ಮಾಡುತ್ತಿದ್ದೇವೆ. ನಗರಕ್ಕಾಗಿ 1974ರಲ್ಲಿ ಇಲ್ಲಿಗೆ ಬಂದವರು ರೈತರ ಹಕ್ಕಿನ ನೀರನ್ನು ಕಸಿದುಕೊಂಡಿದ್ದಾರೆ. ನಗರದ ನೀರಿನ ಬೇಡಿಕೆ ಹಲವು ಪಟ್ಟು ಹೆಚ್ಚಿದರೂ ಇರುವ ವ್ಯವಸ್ಥೆಯನ್ನೇ ಅವಲಂಬಿಸಿದ್ದೀರಿ. 2ನೇ ಹಂತದ ಯೋಜನೆ ಅಷ್ಟೇನೂ ಲಾಭದಾಯಕವಾಗಿಲ್ಲ. ನಗರದಲ್ಲಿ ಹೂದೋಟಕ್ಕೆ, ವಾಣಿಜ್ಯ ಉಪಯೋಗಕ್ಕೆ, ಕಟ್ಟಡ ನಿರ್ಮಾಣಕ್ಕೆ ನೀರು ನೀಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ನೀರಿನ ಮೂಲಗಳಿದ್ದವರೂ ಅವುಗಳನ್ನು ನಿರ್ವಹಣೆ ಮಾಡದೆ ಸುಲಭದಲ್ಲಿ ಸಿಗುವ ಬಜೆ ನೀರಿಗೇ ಅವಲಂಬಿತರಾಗಿದ್ದಾರೆ. ಆದರೆ ರೈತರಿಗೆ ಮಾತ್ರ ನಿರ್ಬಂಧಗಳನ್ನು ಹೇರಲಾಗುತ್ತಿದೆ ಎಂದು ಕುದಿ ಶ್ರೀನಿವಾಸ್‌ ಭಟ್‌ ಹೇಳಿದರು. 

ರಾಜ್ಯ ರೈತರ ಸಂಘದ ಎನ್‌ಎಸ್‌ ವರ್ಮಾ, ಜಿಲ್ಲಾ ಕೃಷಿಕ ಸಂಘದ ರವೀಂದ್ರ ಗುಜ್ಜರಬೆಟ್ಟು, ಗ್ರಾ.ಪಂ. ಸದಸ್ಯ ನಾರಾಯಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.ಬ್ರಹ್ಮಾವರ ಸಿಐ ಶ್ರೀಕಾಂತ್‌, ಹಿರಿಯಡಕ ಪಿಎಸ್‌ಐ ಸತೀಶ್‌ ಬಲ್ಲಾಳ್‌ ನೇತೃತ್ವದಲ್ಲಿ 15 ಮಂದಿ ಪೊಲೀಸ್‌ ಸಿಬಂದಿ ಬಂದೋಬಸ್ತ್ ಒದಗಿಸಿದ್ದರು. 

ಎಂಜಿನಿಯರ್‌ಗೆ ಪ್ರತಿಭಟನೆ ಬಿಸಿ
ಪ್ರತಿಭಟನೆ ವೇಳೆ ನಗರಸಭೆ ಆಯುಕ್ತರೊಂದಿಗೆ ಸ್ಥಳಕ್ಕಾಗಮಿಸಿದ ಎಂಜಿನಿಯರ್‌ಗೆ ರೈತರು ಧಿಕ್ಕಾರ ಕೂಗಿ ಬಿಸಿ ಮುಟ್ಟಿಸಿದರು. ರೈತರ ಕಾಳಜಿ ಇಲ್ಲದ ಅಧಿಕಾರಿಗಳಿಂದ ರೈತರು ಸಂಪೂರ್ಣ ನಾಶವಾಗುತ್ತಿದ್ದಾರೆ. ಜಿಲ್ಲಾಧಿಕಾರಿ ಸಭೆಯ ನೊಟೀಸಿನಲ್ಲಿ ನಗರದ ಕುಡಿಯುವ ನೀರಿನ ಬಗ್ಗೆ ಉಲ್ಲೇಖೀಸಿದ್ದಾರೆಯೇ ಹೊರತು ರೈತರ ಬಗ್ಗೆ ಉಲ್ಲೇಖೀಸಿಲ್ಲ ಎಂದು ಧಿಕ್ಕಾರ ಹೇಳಿದರು. 

ಹೆಚ್ಚುವರಿ ಯೋಜನೆ ಅಗತ್ಯ
ನಗರಸಭೆಯ ನೀರಿನ ಸಂಪರ್ಕಗಳ ಸಂಖ್ಯೆ 30 ಸಾವಿರಕ್ಕಿಂತಲೂ ಹೆಚ್ಚಾಗಿದ್ದರೂ ಬಜೆಯಲ್ಲಿ ಇರುವ ವ್ಯವಸ್ಥೆಯಲ್ಲೇ ನೀರನ್ನು ಕೊಂಡೊಯ್ಯಲಾಗುತ್ತಿದೆ. ಡ್ಯಾಂಗಳಲ್ಲಿ 2 ಮೀ.ನಷ್ಟು ಹೂಳು ತುಂಬಿದೆ. ಶೀರೂರಿನ ಯೋಜನೆ ನಿಷ್ಪ್ರಯೋಜಕ. ಇಲ್ಲಿ ಹಿನ್ನೀರು ಸಂಗ್ರಹಕ್ಕೆ ಅವಕಾಶ ಇಲ್ಲ. ಇನ್ನೊಂದು ಡ್ಯಾಂನಲ್ಲಿ ನೀರು ಸೋರಿಕೆಯಾಗುತ್ತಿದೆ. ಇದನ್ನು ಸರಿಪಡಿಸಲಾಗದೆ ರೈತರಿಗೆ ನಿರ್ಬಂಧ ಹೇರಲಾಗುತ್ತಿದೆ. ನೀರಿನ ಬೇಡಿಕೆಗನುಗುಣವಾಗಿ ಭಾವುಕಡಿ ಮತ್ತು ಮಣಿಪಾಲ್‌ ಎಂಡ್‌ಪಾಯಿಂಟ್‌ ಕೆಳಬದಿಯಲ್ಲಿ ಡ್ಯಾಂಗಳನ್ನು ಮಾಡಿದರೆ ನೀರಿಗೆ ಎಂದೂ ತತ್ತಾÌರವಾಗದು.

Advertisement

ವಸ್ತು ಸ್ಥಿತಿ ಅವಲೋಕನಕ್ಕೆ ಜಂಟಿ ಸಮಿತಿ: ಜಿಲ್ಲಾಧಿಕಾರಿ 
ಬಜೆ ಡ್ಯಾಂನಲ್ಲಿ ಲಭ್ಯವಿರುವ ನೀರು, ನಗರಸಭೆಯ ನೀರಿನ ಬೇಡಿಕೆ, ರೈತರ ನೀರಿನ ಬೇಡಿಕೆ, ನೀರಿಲ್ಲದೆ ನಾಶವಾಗಿರುವ ಕೃಷಿ ಮತ್ತು ಬಾಧಿತ ಜಾನುವಾರುಗಳಿಗೆ ಸಂಬಂಧಿಸಿದಂತೆ ಸ್ಥಳಕ್ಕೆ ತೆರಳಿ ವಸ್ತು ಸ್ಥಿತಿಯನ್ನು ಅವಲೋಕಿಸಿ ವರದಿ ನೀಡಲು ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅವರ ನೇತೃತ್ವದಲ್ಲಿ ನಗರ ಸಭೆ ಆಯುಕ್ತರು, ಕೃಷಿ, ಹೈನುಗಾರಿಕೆ ಇಲಾಖಾಧಿಕಾರಿಗಳ ಜಂಟಿ ಸಮಿತಿ ರಚಿಸಲಾಗಿದೆ. ಇದರ ಆಧಾರದಲ್ಲಿ ಶೀಘ್ರ ನಿರ್ಧಾರ ತೆಗೆದುಕೊಳ್ಳಲಾಗುವುದು. 

ಬೇರೆ ನೀರಿನ ಮೂಲ ಇಲ್ಲ
ಸ್ವರ್ಣೆಯಲ್ಲಿ ನೀರಿದ್ದರೂ ತಟದಲ್ಲಿ ನೀರು ಸಿಗುವುದಿಲ್ಲ. ಹಾಗಾಗಿ ರೈತರು ಬಜೆ ಹಿನ್ನೀರನ್ನೇ ಅವಲಂಬಿಸಿದ್ದಾರೆ. 260 ಹೆಕ್ಟೇರ್‌ ಕೃಷಿ ಪ್ರದೇಶ ಜಿಲ್ಲಾಡಳಿತದ ಕುರುಡುತನದಿಂದ ನಾಶವಾಗುತ್ತಿದೆ. ರೈತರು ಸಾಲದಲ್ಲಿ ಮುಳುಗುತ್ತಿದ್ದಾರೆ. ವಿದ್ಯುತ್‌ ಉತ್ಪಾದನೆ ಕಂಪೆನಿಯ ಡ್ಯಾಂನ ಎತ್ತರ 6 ಮೀಗೆ ಏರಿಸಿದ್ದು ಇದರಿಂದ ಮಳೆಗಾಲದಲ್ಲಿ ಸುಮಾರು 60 ಎಕರೆ ಪ್ರದೇಶ ಮುಳುಗಡೆಯಾಗುತ್ತದೆ ಇದರಿಂದಲೂ ರೈತರು ನಷ್ಟ ಅನುಭವಿಸುತ್ತಾರೆ. ಆದರೆ ಇದಕ್ಕೆ ಯಾವುದೇ ಪರಿಹಾರವಿಲ್ಲ ಎಂದು ಸುಧಾಕರ್‌ ಶೆಟ್ಟಿ ಹೇಳಿದರು.
 
“ಸ್ವರ್ಗದ ನುಪ್ಪು’ ಸಿಗಲೇ ಇಲ್ಲ
ಬಜೆ ಡ್ಯಾಂ ಆದಾಗ ವಿಎಸ್‌ ಆಚಾರ್ಯ ಅವರು ಇಲ್ಲಿನ ರೈತರಿಗೆ “ಸ್ವರ್ಗದ ನುಪ್ಪು’ ಸಿಗುತ್ತದೆ ಎಂದಿದ್ದರು. ಆದರೆ ಅಧಿಕಾರಿಗಳ ಧೋರಣೆಯಿಂದ ರೈತರಿಗೆ ಒಂದು ಹೊತ್ತಿನ ಊಟಕ್ಕೂ ಸಂಚಕಾರ ಬಂದೊದಗಿದೆ ಎಂದು ಸುಧಾಕರ್‌ ಶೆಟ್ಟಿ ಹೇಳಿದರು. 

ಆಕ್ರೋಶದಲ್ಲೂ ಕಾಳಜಿ
ನಗರಕ್ಕೆ ನೀರು ನೀಡುವುದಿಲ್ಲ ಎಂಬ ನಿಲುವು ನಮ್ಮದಲ್ಲ. ನಮಗೆ ವಾರದಲ್ಲಿ ಈಗ ಎರಡು ಬಾರಿ, ಕಡಿಮೆಯಾದಾಗ ಒಂದು ಬಾರಿ ನೀರು ಕೊಡಿ. ಉಳಿದ ದಿನಗಳಲ್ಲಿ ನೀವೇ ನೀರನ್ನು ಉಪ ಯೋಗಿಸಿ ಎಂದು ಆಕ್ರೋಶದ ನಡುವೆಯೂ ರೈತರು ನಗರಸಭೆ ಅಧಿಕಾರಿಗಳಿಗೆ ಕಾಳಜಿಯ ಮಾತುಗಳನ್ನು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next