ಹುನಗುಂದ: ಮುಂಗಾರು ಮಳೆ ಮೊದ ಮೊದಲು ವಿಳಂಬವಾದರೂ ನಂತರ ಉತ್ತಮವಾಗಿ ಸುರಿದು ರೈತರ ಆಸೆ ಇಮ್ಮಡಿಗೊಳಿಸಿದೆ. ಒಂದೆಡೆ ಬಿತ್ತನೆ ಕಾರ್ಯಕ್ಕೆ ಈಗಾಗಲೇ ರೈತರು ಭೂಮಿ ಹದಗೊಳಿಸಿದ್ದರೆ, ಇನ್ನೊಂದೆಡೆ ಕೃಷಿ ಇಲಾಖೆ ಬಿತ್ತನೆಗೆ ಬೇಕಾದ ಬೀಜ, ರಸಗೊಬ್ಬರ ದಾಸ್ತಾನಿಗೆ ಮುಂದಾಗಿದೆ. ಜೂನ್ ತಿಂಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿದ ಮಳೆಯಿಂದ ಕೃಷಿ ಚಟುವಟಿಕೆ ಗರಿಗೆದರಿವೆ.
ತಾಲೂಕಿನಾದ್ಯಂತ ಶೇ.30ರಷ್ಟು ಬಿತ್ತನೆ ಕಾರ್ಯ ಮುಗಿದಿದೆ. ಆದರೆ ಇನ್ನೂ ಶೇ.70ರಷ್ಟು ಬಿತ್ತನೆ ಸಮೃದ್ಧ ಮಳೆ ಕೊರತೆ ಹಾಗೂ ಕೋವಿಡ್ ವೈರಸ್ ಭೀತಿಯಿಂದ ರೈತರು ಮನೆ ಬಿಟ್ಟು ಹೊರಬರುತ್ತಿಲ್ಲ. ಜತೆಗೆ ಕೆಲವೆಡೆ ಹೊಲ ಸ್ವಚ್ಛಗೊಳಿಸದಿರುವುದು ಕೂಡ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯನ್ನುಂಟು ಮಾಡಿದೆ.
ಮುಂಗಾರು ಬಿತ್ತನೆ ಕ್ಷೇತ್ರ: ಅವಳಿ ತಾಲೂಕಿನಲ್ಲಿ ಒಟ್ಟು 39,718 ಹೆಕ್ಟೇರ್ ಮುಂಗಾರು ಬಿತ್ತನೆ ಕೃಷಿ ಪ್ರದೇಶವಿದ್ದು, 10,014 ಹೆಕ್ಟೇರ್ ನೀರಾವರಿ ಕ್ಷೇತ್ರವಿದ್ದರೆ, 29,674 ಹೆಕ್ಟೇರ್ ಒಣಬೇಸಾಯ ಭೂಮಿ ಹೊಂದಿದೆ. ನಾಲ್ಕು ಹೋಬಳಿಗಳನ್ನಾಗಿ ವಿಂಗಡಿಸಲಾಗಿದ್ದು, ಆ ನಾಲ್ಕು ಹೋಬಳಿಯಲ್ಲಿ ಜೋಳ-100, ಗೋವಿನ ಜೋಳ-870, ಸಜ್ಜೆ-7560, ಇತರೆ 200 ಹೆಕ್ಟೇರ್ ಸೇರಿದಂತೆ ಒಟ್ಟು 8730 ಹೆಕ್ಟೇರ್ ಪ್ರದೇಶದಲ್ಲಿ ಏಕದಳ ಧಾನ್ಯ ಬೆಳೆಯುವ ಗುರಿ ಹೊಂದಲಾಗಿದೆ. ತೊಗರಿ-9000, ಹುರಳಿ-800, ಹೆಸರು-7000, ಅಲಸಂದಿ-100, ಮಡಿಕೆ-100 ಹೆಕ್ಟೇರ್ ಸೇರಿದಂತೆ ಒಟ್ಟು 17000 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯಗಳ ಬೆಳೆಯುವ ಗುರಿಯಿದೆ.
ಶೇಂಗಾ- 300, ಎಳ್ಳು-800, ಸೂರ್ಯಕಾಂತಿ- 7 4 0 0 , ಗುರೆಳ್ಳು-120 ಹೆಕ್ಟೇರ್ ಸೇರಿದಂತೆ ಒಟ್ಟು 8620 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳುಗಳನ್ನು ಬೆಳೆಯಲಾಗುತ್ತಿದೆ. ಜೊತೆಗೆ ಹತ್ತಿ-150, ಕಬ್ಬು.ಪಿ-200, ಕಬ್ಬು ಎಚ್- 1750 ಹೆಕ್ಟೇರ್ ಸೇರಿದಂತೆ ಒಟ್ಟು 2100 ಹೆಕ್ಟೇರ್ ಪ್ರದೇಶದಲ್ಲಿ ವಾಣಿಜ್ಯ ಬೆಳೆ ಬೆಳೆಯುವ ಗುರಿ ಇದೆ. ಆದರೆ ಸದ್ಯ 1246 ಹೆಕ್ಟೇರ್ ನೀರಾವರಿ ಕ್ಷೇತ್ರ ಬಿತ್ತನೆಯಾಗಿದ್ದರೆ 8655 ಹೆಕ್ಟೇರ್ ಮಳೆಯಾಶ್ರಿತ ಕ್ಷೇತ್ರ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.
ಇಳಿಕೆಯಾದ ಮಳೆ ಪ್ರಮಾಣ: ಪ್ರಸಕ್ತ ವರ್ಷ ಜನವರಿಯಿಂದ ಜೂನ್‌ವರೆಗೆ ವಾಡಿಕೆಯಂತೆ ತಾಲೂಕಿನಲ್ಲಿ 136 ಮಿ.ಮೀ ಮಳೆ ಬೀಳಬೇಕಿತ್ತು. ಆದರೇ ಕೇವಲ 104 ಮಿ.ಮೀ ಮಳೆ ಮಾತ್ರ ಬಿದ್ದಿದೆ. ಇನ್ನು ಜೂ.1ರಿಂದ 12ರ ವರೆಗೆ ಹುನಗುಂದ ಹೋಬಳಿಯಲ್ಲಿ 35 ಮಿ.ಮೀ ಮಳೆಯಾದರೆ, ಅಮೀನಗಡ ಹೋಬಳಿಯಲ್ಲಿ 28 ಮಿ.ಮೀ ಮಳೆಯಾಗಿದೆ. ಕರಡಿ ಹೋಬಳಿಯಲ್ಲಿ 31 ಮಿ.ಮೀ ಮಳೆಯಾಗಿದೆ. ಇಳಕಲ್ಲ ಹೋಬಳಿಗೆ 36 ಮಿ.ಮೀ ಮಳೆಯಾಗಿದ್ದು ಮುಂಗಾರು ಬಿತ್ತನೆಗೆ ಅನುಕೂಲವಾಗಿದೆ.
ಬೀಜ–ರಸಗೊಬ್ಬರ ದಾಸ್ತಾನು: ಈ ವರ್ಷದ ಮುಂಗಾರು ಹಂಗಾಮು ಬಿತ್ತನೆಗೆ ತಾಲೂಕಿನ 4 ಕೇಂದ್ರಗಳ ಮೂಲಕ ಕೃಷಿ ಇಲಾಖೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಿಸಲು ಆರಂಭಿಸಿದೆ. ಹೆಸರು-481, ತೊಗರಿ-594, ಸಜ್ಜೆ-164, ಮೆಕ್ಕೆಜೋಳ-144, ಸೂರ್ಯಕಾಂತಿ-405, ನವಣೆ-11 ಕ್ವಿಂಟಲ್ ಸೇರಿದಂತೆ 1799 ಕ್ವಿಂಟಲ್‌ನಷ್ಟು ಸದ್ಯ ದಾಸ್ತಾನು ಇದೆ. ಮುಂದೆ ಮಳೆ ಪ್ರಮಾಣ ಮತ್ತು ಬಿತ್ತನೆ ಕ್ಷೇತ್ರಕ್ಕೆ ಅನುಗುಣವಾಗಿ ಬೀಜ-ಗೊಬ್ಬರ ದಾಸ್ತಾನಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಆರ್.ಎಂ. ಕಂಟ್ರಾಕ್ಟರ್ ತಿಳಿಸಿದ್ದಾರೆ. ಇದರೊಂದಿಗೆ 775 ಟನ್ ಯುರಿಯಾ, 555 ಟನ್ ಡಿಎಪಿ, 577 ಟನ್ ಕಾಂಪ್ಲೇಕ್ಸ್, 366 ಟನ್ ಎಂ.ಓ.ಪಿ, 50 ಟನ್ ಎಸ್‌ಎಸ್‌ಪಿ ಸೇರಿದಂತೆ 2323 ಟನ್‌ಗಳಷ್ಟು ರಸಗೊಬ್ಬರ ದಾಸ್ತಾನು ಮಾಡಲಾಗಿದೆ.
ಪ್ರಸುತ್ತ ಮುಂಗಾರು ಬಿತ್ತನೆಗೆ ಬೇಕಾದ ಬೀಜ-ಗೊಬ್ಬರ ಸೇರಿದಂತೆ ಎಲ್ಲ ಪರಿಕರಗಳ ದಾಸ್ತಾನು ಮಾಡಲಾಗುತ್ತಿದೆ. ಸದ್ಯ ಶೇ.30 ಬಿತ್ತನೆಯಾಗಿದೆ. ನಿರೀಕ್ಷಿತ ಮಟ್ಟದ ಮಳೆಯಾಗದಿರುವುದರಿಂದ ಬಿತ್ತನೆ ಕಾರ್ಯ ಮಂದಗತಿಯಲ್ಲಿ ಸಾಗಿದೆ.
–ಆರ್.ಎಂ. ಕಂಟ್ರಾಕ್ಟರ್, ಸಹಾಯಕ ಕೃಷಿ ನಿರ್ದೇಶಕರು, ಹುನಗುಂದ
-ಮಲ್ಲಿಕಾರ್ಜುನ ಬಂಡರಗಲ್ಲ