Advertisement

ರೈತರಿಗೆ ಸಿಕ್ಕಿಲ್ಲ ತೊಗರಿ ಹಣ

03:36 PM May 20, 2018 | |

ಯಾದಗಿರಿ: ರಾಜ್ಯ ಸರಕಾರ ರೈತರಿಗೆ ಅನುಕೂಲ ಆಗಲೆಂದು ತೊಗರಿ ಖರೀದಿ ಕೇಂದ್ರಗಳನ್ನು ಸ್ಥಾಪಿಸುತ್ತವೆ. ಆದರೆ ಈ ಖರೀದಿ ಕೇಂದ್ರದ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ತೊಗರಿ ಮಾರಾಟ ಮಾಡಿದ ರೈತರಿಗೆ ಹಣ ಪಾವತಿಯಾಗದೆ ಕಳೆದ ಐದು ತಿಂಗಳಿಂದ ಹಣಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ ರೈತರು ಅಲೆದಾಡುತ್ತಿದ್ದಾರೆ.

Advertisement

ಸುರಪುರ ತಾಲೂಕಿನ ಖಾನಾಪುರ ಎಸ್‌.ಎಚ್‌., ಹುಣಸಗಿ, ಹಸನಾಪುರ ಸೇರಿದಂತೆ ಇತರೆ ಗ್ರಾಮದ 300ಕ್ಕೂ ಹೆಚ್ಚು
ರೈತರು ತೊಗರಿಯನ್ನು ಖಾನಾಪುರ ತೊಗರಿ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ಹಣ ಅವರ ಖಾತೆಗೆ ಜಮಾ ಆಗಿಲ್ಲ. ಇದರಿಂದ ರೈತರು ಕಂಗಲಾಗಿದ್ದಾರೆ.

ಸುರಪುರ ತಾಲೂಕಿನ ಮುಷ್ಠಳ್ಳಿ ಗ್ರಾಮದ ಭೀಮಸೇನಾಚಾರ್ಯ ರಾಘವೇಂದ್ರಚಾರ್ಯ ಅವರು 23.01. 2018ರಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಖಾನಾಪುರ ಎಸ್‌.ಎಚ್‌ನ ಖರೀದಿ ಕೇಂದ್ರದಲ್ಲಿ 10 ಕ್ವಿಂಟಾಲ್‌ ತೊಗರಿಯನ್ನು ಕೇಂದ್ರ ಸರಕಾರದ ಸಹಾಯಧನ 5,450 ಹಾಗೂ ರಾಜ್ಯ ಸರಕಾರದ ಸಹಾಯಧನ 550 ರೂ. ಸೇರಿದಂತೆ ಕ್ವಿಂಟಾಲ್‌ಗೆ 6 ಸಾವಿರ ರೂ.ಗೆ ಮಾರಾಟ
ಮಾಡಲಾಗಿದ್ದು, ಸುಮಾರು 60 ಸಾವಿರ ರೂ. ಅವರ ಖಾತೆಗೆ ಜಮಾ ಆಗಬೇಕಿತ್ತು. ಆದರೆ ಇಲ್ಲಿಯವರೆಗೆ ಜಮಾವಾಗಿಲ್ಲ. ಹೀಗೆ 300ಕ್ಕೂ ಹೆಚ್ಚು ರೈತರ ಸುಮಾರು 2.15 ಕೋಟಿ ರೂ. ಬರಬೇಕಾಗಿದೆ. ಆದ್ದರಿಂದ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.

ಪಹಣಿ, ಆಧಾರ್‌ ಕಾರ್ಡ್‌, ಬೆಳೆ ವಿಮೆ ದೃಢೀಕರಣ ಪತ್ರ, ಬ್ಯಾಂಕ್‌ ಖಾತೆ ಪಾಸ್‌ ಬುಕ್‌ ನಕಲು ಪ್ರತಿ ಸೇರಿದಂತೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ನೀಡಲಾಗಿದೆ. ಆದರೆ ದುಡ್ಡು ಮಾತ್ರ ಬಂದಿಲ್ಲ. ಈ ಬಗ್ಗೆ ಖರೀದಿ ಕೇಂದ್ರದ ಸಿಬ್ಬಂದಿಗಳಿಗೆ ಕೇಳಿದರೆ ಬಜೆಟ್‌ ಇಲ್ಲ. ಬಜೆಟ್‌ ಬಿಡುಗಡೆಯಾದ ನಂತರ ಹಣ ಪಾವತಿಸಲಾಗುತ್ತದೆ ಎಂದು ಸಿಬ್ಬಂದಿ ಬೆದರಿಸಿ ಕಳುಹಿಸುತ್ತಿದ್ದಾರೆ. ಕೂಡಲೇ ಒಂದು
ವಾರದೊಳಗೆ ರೈತರಿಗೆ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ರೈತರು ಎಚ್ಚರಿಸಿದ್ದಾರೆ.

ಸುರಪುರ ತಾಲೂಕಿನಲ್ಲಿ 316 ರೈತರಿಗೆ 2.15 ಕೋಟಿ ರೂ. ಪಾವತಿಯಾಗಬೇಕಿದೆ. ಬಜೆಟ್‌ ಇಲ್ಲದ ಪರಿಣಾಮ ರೈತರ ಖಾತೆಗಳಿಗೆ ಹಣ ಜಮಾ ಆಗಿಲ್ಲ. ಆದಷ್ಟು ಬೇಗ ರೈತರ ಖಾತೆಗಳಿಗೆ ಹಣ ಜಮಾ ಮಾಡಲಾಗುವುದು.   ಬಸವರಾಜ ಖಾನಾಪುರ, ಕಾರ್ಯದರ್ಶಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಖಾನಾಪುರ ಎಸ್‌.ಎಚ್‌.

Advertisement

ತೊಗರಿ ಖರೀದಿ ಕೇಂದ್ರದಲ್ಲಿ ತೊಗರಿ ಮಾರಾಟ ಮಾಡಿ ಐದು ತಿಂಗಳಾದರೂ ರೈತರ ಖಾತೆಗಳಿಗೆ ಹಣ ಜಮಾ ಆಗಿಲ್ಲ. ಇದರಿಂದ ಕುಟುಂಬ ನಿರ್ವಹಣೆ ತೊಂದರೆ ಆಗುತ್ತಿದೆ. ಕೂಡಲೇ ಜಿಲ್ಲಾಧಿಕಾರಿಗಳು ಹಣ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು.
 ತಿರುಪತಿ ಮುಷ್ಠಳ್ಳಿ, ರೈತ

Advertisement

Udayavani is now on Telegram. Click here to join our channel and stay updated with the latest news.

Next