ವರದಿ: ಚಂದ್ರಶೇಖರ ಹಡಪದ
ಕಲಾದಗಿ: ಮಳೆ ಸೇರಿದಂತೆ ಪ್ರವಾಹದ ಹೊಡೆತಕ್ಕೆ ರೈತರು ಅಕ್ಷರಶಃ ನಲುಗಿದ್ದಾರೆ. ಹೇಗೋ ಸಾಲ-ಸೂಲ ಮಾಡಿ ಅಲ್ಪ-ಸ್ವಲ್ಪ ಬೆಳೆ ಬೆಳೆದರೂ ಇದೀಗ ಬೆಳೆಗಳಿಗೆ ರೋಗ-ಕೀಟಬಾಧೆ ಕಾಡುತ್ತಿದ್ದು ಅನ್ನದಾತರಿಗೆ ನುಂಗಲಾರದ ತುತ್ತಾಗಿದೆ.
ರೋಗಬಾಧೆಗೆ ಬಲಿಯಾದ ಬೆಳೆಗಳಲ್ಲಿ ಈರುಳ್ಳಿ ಪ್ರಮುಖ ಬೆಳೆ. ಈರುಳ್ಳಿ ಕೊಳೆರೋಗದ ಹೊಡೆತಕ್ಕೆ ಸಿಕ್ಕು ಹಳದಿ ಬಣ್ಣಕ್ಕೆ ತಿರುಗಿ ಬಾಡುತ್ತಿದೆ. ಹೀಗಾಗಿ ಕಷ್ಟಪಟ್ಟು ರೈತರು ಬೆಳೆದ ಬೆಳೆ ಕಣ್ಣೆದುರೇ ಬಾಡುತ್ತಿರುವುದನ್ನು ಕಂಡು ರೈತ ನೇಗಿಲು ಹೊಡೆದು ಬೆಳೆಯನ್ನು ಮಣ್ಣಲ್ಲಿ ಮುಚ್ಚುತ್ತಿರುವುದು ರೈತನ ಅಸಹಾಯಕತೆಗೆ ಸಾಕ್ಷಿ. ಕಲಾದಗಿ ಹೋಬಳಿ ವ್ಯಾಪ್ತಿಯಲ್ಲಿ ರೈತರು ಹೆಚ್ಚಾಗಿ ಈರುಳ್ಳಿ ಬೆಳೆ ಬೆಳೆಯುತ್ತಾರೆ. ಮೇ ಕೊನೆ ವಾರ ಇಲ್ಲವೇ ಜೂನ್ ಮೊದಲೆರಡು ವಾರದಲ್ಲಿ ಬಿತ್ತನೆ ಮಾಡಿ ಹಗಲು-ರಾತ್ರಿ ಶ್ರಮಿಸುತ್ತ ಉತ್ತಮ ಇಳುವರಿ, ಬೆಲೆ ನಿರೀಕ್ಷೆಯಲ್ಲಿ ರೈತರಿದ್ದರು. ಆದರೆ ಇದೀಗ ಈರುಳ್ಳಿಗೆ ಕೊಳೆರೋಗ ಕಾಡುತ್ತಿದ್ದು, ಹೊಲದಲ್ಲಿ ಬೆಳೆ ಕೊಳೆಯುವುದನ್ನು ಕಂಡು ರೈತರು ಕಣ್ಣೀರು ಹಾಕುತ್ತಿದ್ದಾರೆ.
ಕೆಲ ರೈತರಂತೂ ಲಕ್ಷಾಂತರ ರೂ. ಖರ್ಚು ಮಾಡಿ ಹಗಲು-ರಾತ್ರಿ ಶ್ರಮಿಸಿ ಬೆಳೆದಿದ್ದ ಬೆಳೆ ನೇಗಿಲು ಹೊಡೆದು ಮಣ್ಣಲ್ಲಿ ಮುಚ್ಚುತ್ತಿರುವ ಉದಾಹರಣೆಗಳೂ ಕಣ್ಣೆದುರಿವೆ. ಸದ್ಯ ಕೆಲವು ರೈತರ ಈರುಳ್ಳಿ ಬೆಳೆ ಈ ಕೊಳೆರೋಗಕ್ಕೆ ಕೊಳೆಯುತ್ತಿದ್ದು, ಇನ್ನೂ ಕೆಲವರು ರೈತರ ಈರುಳ್ಳಿ ರೋಗ ತಗುಲುವ ಪ್ರಾರಂಭದ ಹಂತದಲ್ಲಿದೆ. ಈ ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ತೋಟಗಾರಿಕೆ ಇಲಾಖೆ ಅಧಿ ಕಾರಿಗಳ ಮಾರ್ಗದರ್ಶನ, ಸೂಕ್ತ ಔಷಧೋಪಚಾರದ ತಿಳಿವಳಿಕೆ ನೀಡಿದ್ದಲ್ಲಿ ರೈತರು ಬೆಳೆ ಉಳಿಸಿಕೊಳ್ಳಲು ಸಾಧ್ಯ ಎನ್ನುವುದು ಹಲವು ರೈತರ ಮಾತು.
ಕಲಾದಗಿ ಹೋಬಳಿಯಲ್ಲಿ ಒಟ್ಟು 2800 ಹೆಕ್ಟೇರ್ ಈರುಳ್ಳಿಯಲ್ಲಿ 750 ಹೆಕ್ಟೇರ್ ಈಗಾಗಲೇ ಕೊಳೆರೋಗದಿಂದ ಹಾನಿಯಾಗಿದೆ. ಇನ್ನಷ್ಟು ಬೆಳೆ ಕೊಳೆ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದ್ದು, ಅಧಿ ಕಾರಿಗಳು ಕೂಡಲೇ ರೈತ ಸಮುದಾಯಕ್ಕೆ ಔಷಧೋಪಚಾರದ ಅಗತ್ಯ ಮಾಹಿತಿ ನೀಡುವಂತೆ ಉದಗಟ್ಟಿ, ಶಾರದಾಳ, ಅಂಕಲಗಿ ಸೇರಿದಂತೆ ಹಲವು ಹಳ್ಳಿಗಳ ರೈತರು ಮನವಿ ಮಾಡಿದ್ದಾರೆ.